ಬಿಲ್ವ ಪತ್ರೆಗೆ ಯಾಕಿಷ್ಟು ಮಹತ್ವ…?

ಆ ಹಿನ್ನೆಲೆಯ ಕಾರಣದಿಂದಲೇ ಇಷ್ಟು ಮಹತ್ವ ಪಡೆದಿದೆ ಬಿಲ್ವ ಪತ್ರೆ. ಒಮ್ಮೆ ದೇವ-ದಾನವರು ಅಮೃತಕ್ಕಾಗಿ ಕ್ಷೀರ ಸಾಗರವನ್ನು ಮಂಥನ ಮಾಡುತ್ತಿದ್ದರು.

ಆ ಸಂದರ್ಭ ಆ ಕ್ಷೀರ ಸಾಗರದಿಂದ ಸಾಕಷ್ಟು ಅನರ್ಘ್ಯ ರತ್ನಗಳು ಸೃಷ್ಟಿಯಾದವು. ಅವುಗಳಲ್ಲಿ ಮುಖ್ಯವಾದವು ಉಚ್ಹೈಶ್ರವಸ್ಸು (ಅತಿಶ್ರೇಷ್ಠವಾದ 7-ತಲೆಯುಳ್ಳ ಕುದರೆ ), ಕೌಸ್ತುಭ ( ಜಗತ್ತಿನ ಅತಿಶ್ರೇಷ್ಠ ರತ್ನಾಭರಣ, ಇದನ್ನು ವಿಷ್ಣು ಧರಿಸುತ್ತಾನೆ. ), ಕಾಮಧೇನು ಅಥವಾ ಸುರಭಿ ( ಕೋರಿದುದನ್ನು ನೀಡುವ ಹಸು.), ಪಾರಿಜಾತ (ಅತಿಶ್ರೇಷ್ಠವಾದ ಹೂವಿನ ಮರ. ಇದರ ಮೊಗ್ಗು ಎಂದಿಗೂ ಬಾಡುವುದಿಲ್ಲ, ಇದನ್ನು ಕಲ್ಪವೃಕ್ಷದೊಂದಿಗೆ ಗುರುತಿಸಲಾಗುತ್ತದೆ ), ಐರಾವ (ಇಂದ್ರನ ಆನೆ ), ಅಪ್ಸರೆಯರು, ರಂಭಾ, ಮೇನಕಾ, ಪುನ್ಜಿಕ ಸ್ಥಳ ಇತರರು , ಶಾರ್ಞ ಧನಸ್ಸು (ವಿಷ್ಣುವಿನ ಆಯುಧ ) ಹೀಗೆ ಅನೇಕ ರತ್ನಗಳು ಸೃಷ್ಟಿಯಾದವು.

ಅವುಗಳ ಜೊತೆ ಮಹಾಲಕ್ಷ್ಮೀಯೂ ಬಂದಳು. ಆ ಮಹಾಲಕ್ಷ್ಮಿಯನ್ನು ಕಂಡು ದೈತ್ಯರು ಲಕ್ಷ್ಮಿಯ ಮೇಲೇ ಕಣ್ಣು ಹಾಕಿದರು, ಆಕೆಯನ್ನ ಶತಾಯ ಗತಾಯ ಪಡೆಯುವ ಪ್ರಯತ್ನ ಮಾಡಿದರು. ಆಗ ಬೆಚ್ಚಿ ಬಿದ್ದ ಮಹಾಲಕ್ಷ್ಮಿ ಬಿಲ್ವವೃಕ್ಷವಾಗಿ ನೆಲೆ ನಿಂತಳು. ಹಾಗಾಗಿ ಬಿಲ್ವ ವೃಕ್ಷ ಶ್ರೇಷ್ಠ ವೃಕ್ಷವಾಯ್ತು ಅನ್ನುವ ಕಥೆ ಇದೆ.

ಪಾರ್ವತಿಯ ಬೆವರಿನ ಹನಿಯೇ ಬಿಲ್ವ..!

ಮತ್ತೊಂದು ಕಥೆಯ ಪ್ರಕಾರ ಪಾರ್ವತಿಗೆ ತುಂಬ ದಣಿವಾಗಿತ್ತು. ಆಗ ಮಂದರ ಪರ್ವತದಲ್ಲಿ ವಿಶ್ರಾಂತಿಗೆ ಅಂತ ಬಂದು ಕುಳಿತಿದ್ದಳು. ಆಗ ಆಕೆಯ ಬೆವರ ಹನಿ ಭೂಮಿಯ ಮೇಲೆ ಬಿತ್ತು ಆ ಹನಿಯಿಂದ ಒಂದು ವೃಕ್ಷ ಮೂಡಿತು ಅದೇ ಬಿಲ್ವ ವೃಕ್ಷ ಅಂತಲೂ ಕಥೆ ಇದೆ.

ಲಕ್ಷ್ಮೀ ಸ್ತನದಲ್ಲಿ ಮೂಡಿದ್ದು ಬಿಲ್ವ..!

ಮತ್ತೊಂದು ಕಥೆಯ ಪ್ರಕಾರ ಅದೊಮ್ಮೆ ಲಕ್ಷ್ಮೀ ಶಿವನನ್ನು ಕುರಿತು ಸಹಸ್ರ ನಾಮಾವಳಿ ಹೇಳುತ್ತಿದ್ದಳು. ಒಂದೊಂದು ನಾಮ ಹೇಳುವಾಗಲೂ ಒಂದೊಂದು ಪುಷ್ಪ ಸಮರ್ಪಣೆ ಮಾಡುತ್ತಿದ್ದಳು.

ಕೊನೆಯ ನಾಮ ಹೇಳುವ ಹೊತ್ತಿಗೆ ಒಂದು ಹೂ ಕಾಣಿಸಲಿಲ್ಲ. ಹಾಗಾಗಿ ಒಂದು ಹೂವು ಕಡಿಮೆ ಬಿತ್ತಲ್ಲ ಅನ್ನೋ ಕಾರಣಕ್ಕೆ ತನ್ನ ಸ್ತನವನ್ನೇ ಕತ್ತರಿಸಿ ಹೂವಿನ ರೂಪದಲ್ಲಿ ಅರ್ಚಿಸಿದ್ದಳು ಮಹಾಲಕ್ಷ್ಮಿ.

ಆ ಘೋರ ಸ್ಥಿತಿಯನ್ನ ಕಂಡ ಶಿವ ತಕ್ಷಣ ಆಕೆಯ ಮೇಲೆ ಗಂಗಾಜಲವನ್ನ ಹರಿಸಿ ಆಕೆಯ ನೋವನ್ನ ಕಳೆದನಂತೆ. ಹಾಗೆ ಹರಿದ ನೀರು ಶ್ರೀ ಶೈಲವನ್ನು ತಲುಪಿ ಅಲ್ಲಿ ಬಿಲ್ವ ವೃಕ್ಷದ ಪ್ರಾದುರ್ಭಾವವಾಯಿತು ಅಂತ ಹೇಳ್ತಾರೆ. ಅಂದು ಮಹಾಲಕ್ಷ್ಮಿಗೆ ಶಿವ ವರದ ರೂಪದಲ್ಲಿ ಅಷ್ಟ ಸಿದ್ಧಿತ್ವವನ್ನು ಕೊಟ್ಟನಂತೆ. ಹಾಗಾಗೇ ಅಷ್ಟ ಮಹಾಲಕ್ಷ್ಮಿಯರ ಸೃಷ್ಟಿಯಾಯಿತು ಅಂತಲೂ ಉಲ್ಲೇಖಗಳಿದ್ದಾವೆ.

ಬಿಲ್ವ ತತ್ವ ಏನು..?

ಬಿಲ್ವದ ಕಥೆ ಗೊತ್ತಾಯ್ತು. ಆದ್ರೆ ಆ ಬಿಲ್ವದ ಕಥೆಗಿಂದ ಅದರ ತತ್ವ ನಮಗೆ ಅರ್ಥವಾಗಬೇಕು. ಹಾಗೆ ತತ್ವಾರ್ಥ ತಿಳಿದು ಮಾಡುವ ಪೂಜೆ ಅತ್ಯಂತ ಶ್ರೇಷ್ಠ ಹಾಗೂ ಫಲದಾಯಕ.

ಬಿಲ್ವ ಪತ್ರೆಯಲ್ಲಿ ಮೂರು ದಳಗಳಿರುತ್ತವೆ. ಆ ಮೂರು ದಳಗಳು : ಸತ್ವ ಗುಣ, ರಜೋ ಗುಣ, ತಮೋ ಗುಣಗಳ ಸಂಕೇತ.

ಪ್ರಾತ: ಕಾಲ, ಮಧ್ಯಾಹ್ನ ಕಾಲ, ಸಂಧ್ಯಾ ಕಾಲಗಳ ಸಂಕೇತ.

ಬಿಲ್ವ ಪತ್ರೆಯಿಂದ ನಾವು ಶಿವನನ್ನು ಅರ್ಚಿಸುತ್ತೇವೆ. ಶಿವ ಅಂದ್ರೆ ಮಂಗಳಕರ ಅಂತ. ನಮಗೆ ಮಂಗಳವಾಗಬೇಕಾದರೆ, ಶುಭ ಫಲಗಳು ದಕ್ಕಬೇಕಾದರೆ ನಾವು ಸತ್ವ-ರಜಸ್ಸು-ತಮೋಗುಣಗಳನ್ನ ದಾಟಬೇಕು.

ನಮ್ಮ ಹುಟ್ಟು , ನಮ್ಮ ಇರುವಿಕೆ, ನಮ್ಮ ಮರಣ ಈ ಎಲ್ಲ ಸ್ಥಿತಿಯಲ್ಲೂ ಆ ಶಿವನ ನಿರ್ದೇಶನವಿದೆ. ಆವನ ಸಂಕಲ್ಪದ ಹೊರತಾಗಿ ಜಗತ್ತಿಲ್ಲ ಎಂಬ ಭಾವದಲ್ಲಿ ಬಿಲ್ವ ಪತ್ರೆಯನ್ನು ಸಮರ್ಪಿಸಿದರೆ ಖಂಡಿತಾ ಶಿವನ ಅನುಗ್ರಹವಾಗುತ್ತದೆ.

ಅದರಲ್ಲಿ ಸಂದೇಹವಿಲ್ಲ. ಬಿಲ್ವ ಪತ್ರೆ ಸಮರ್ಪಿಸುವ ಮುನ್ನ ಈ ತತ್ವ ನೆನಪಾದರೆ ಅದೆ ನಿಜವಾದ ಶಿವ ಪೂಜೆ.

ಶಿವಪೂಜೆಗೆ ಬಿಲ್ವಪತ್ರೆ ಎಲೆಗಳ ಆಯ್ಕೆ ಹೇಗಿರಬೇಕು?

ಶಿವಪೂಜೆಗೆ ಬಿಲ್ವಪತ್ರೆ ಆಯ್ಕೆ ಮಾಡುವಾಗ ಎಲೆಯ ಮೇಲೆ ಯಾವುದೇ ಹುಳುಗಳ ಕುಳಿತು ಎಲೆಗಳು ಹಾಳಾಗಿಬಾರದು, ಅದರ ಮೇಲೆ ಬಿಳಿ ಚುಕ್ಕಿಗಳಿರಬಾರದು, ಇನ್ನು ತರುವ ಎಲೆ ಹರಿದಿರಬಾರದು. ಮೂರು ಎಲೆಗಳಿರುವ ದಂಟನ್ನು ಕಿತ್ತು ತಂದು ಶಿವನಿಗೆ ಅರ್ಪಿಸಬೇಕು. ಶಿವನಿಗೆ ಬಿಲ್ವಪತ್ರೆಯ ಮಾಲೆ ಮಾಡಿ ಹಾಕಬಹುದು, ಬಿಲ್ವಪತ್ರೆ ಎಲೆಗಳ ಜತೆಗೆ ಕಾಯಿಗಳನ್ನೂ ಪೂಜೆಗೆ ಅರ್ಪಿಸಬಹುದು.

ಬಿಲ್ವಪತ್ರೆಗಳನ್ನು ಹೇಗೆ ಅರ್ಪಿಸಬೇಕು?

ಬಿಲ್ವಪತ್ರೆಗಳನ್ನು ಲಿಂಗದ ಮೇಲೆ ಅರ್ಪಿಸುವಾಗ ಅದನ್ನು ಕೆಳಮುಖವಾಗಿ, ತೊಟ್ಟು ನಮ್ಮ ಕಡೆಗೆ ಬರುವಂತೆ ಇಡಬೇಕು. ಹೀಗೆ ಮಾಡುವುದರಿಂದ ಮೂರು ಎಲೆಗಳಿಂದ ಬರುವ ಶಕ್ತಿಗಳಿಂದ ಬರುವ ಶಕ್ತಿ ನಮ್ಮ ಕಡೆಗೆ ಬರುತ್ತದೆ. ಎಲೆಗಳ ತುದಿಗಳಿಂದ ಶಿವತತ್ತ್ವವು ವಾತಾವರಣದಲ್ಲಿ ಹರಡಿ ನಮಗೆ ಧನಾತ್ಮಕ ಶಕ್ತಿಯ ಅನುಬವ ಉಂಟಾಗುವುದು.

ಬಿಲ್ವಪತ್ರೆ ಎಲೆಗಳ ತೊಟ್ಟನ್ನು ನಮ್ಮ ಕಡೆಗೆ, ಎಲೆಗಳ ತುದಿಗಳನ್ನು ಶಿವನ ಕಡೆಗೆ ಇರುವಂತೆ ಅರ್ಪಿಸಿದರೆ ಆಗ ಬಲ್ವಪತ್ರೆ ಯಾರು ಅರ್ಪಿಸುತ್ತಾರೋ ಅವರಿಗೆ ಮಾತ್ರ ಶಿವತತ್ತ್ವ ಸಿಗುತ್ತದೆ. ಮೇಲೆ ಹೇಳಿದಂತೆ ಅರ್ಪಿಸಿದರೆ ಶಿವನ ಪೂಜೆಗೆ ಬರುವ ಭಕ್ತರಿಗೂ ಶಿವತತ್ತ್ವವೂ ದೊರೆಯುವುದು.

ಬಿಲ್ವಪತ್ರೆ ಸೋಮವಾರ ಏಕೆ ಅರ್ಪಿಸಬೇಕು?

ಸೋಮವಾರ ಶಿವಪೂಜೆಗೆ ಶ್ರೇಷ್ಠವಾದ ದಿನ, ಸೋಮವಾರದ ಬಿಲ್ವಪತ್ರೆ ಮರುದಿನ ನಡೆಯುವುದಿಲ್ಲ. ಬೆಳಗ್ಗೆ ಎದ್ದು ಸ್ನಾನ ಮಾಡಿ ಬಿಳಿ ಬಣ್ಣದ ಮಡಿ ಬಟ್ಟೆ ಧರಿಸಬೇಕು. ಬಿಲ್ವಪತ್ರೆಯನ್ನು ಅರ್ಚನೆ ಮಾಡುವಾಗ ಓಂ ನಮಃ ಶಿವಾಯ ಎಂಬ ಮಂತ್ರ ಪಠಣೆ ಮಾಡುತ್ತಾ ಶಿವಲಿಂಗಕ್ಕೆ ಒಂದೊಂದೇ ಎಲೆಗಳನ್ನು ಅರ್ಪಿಸಬೇಕು. ಬಿಲ್ವಪತ್ರೆ ಎಲೆಗಳು ಶಿವಲಿಂಗವನ್ನು ಮುಚ್ಚುವಂತೆ ಅರ್ಪಣೆ ಮಾಡಬೇಕು. ಬಿಲ್ವ ಪತ್ರೆ ಎಲೆಗಳ ಜತೆಗೆ ಶ್ರೀಗಂಧ,ತುಂಬೆ ಹೂಗಳು, ಹಣ್ಣುಗಳು, ಅರ್ಪಿಸಬಹುದು.

ಶಿವನಿಗೆ ಶ್ರೇಷ್ಠವಾದ ತುಂಬೆಹೂವು. :-

ಪುರಾಣದಲ್ಲಿ ದೇವಾಸುರರು ಸಮುದ್ರ ಮಥನವನ್ನು ಮಾಡಿದಾಗ, ಮೊದಲು ಬಂದ ಕಾರ್ಕೋಟಕ ವಿಷವನ್ನು ಶಿವನು ಸೇವಿಸುತ್ತಾನೆ. ಹೀಗೆ ಶಿವನ ದೇಹವನ್ನು ಸೇರಿದ ವಿಷವನ್ನು ಶಮನ ಮಾಡಲು ಪಾರ್ವತಿ ದೇವಿಯು
ತುಂಬೆ ಗಿಡದ ಎಲೆ ಮತ್ತು ಹೂವುಗಳ ಔಷಧಿಯನ್ನು ಮಾಡಿಕೊಡುತ್ತಾಳೆ.ಇದನ್ನು ಸೇವಿಸಿದ ಮೇಲೆ ಶಿವನ ವಿಷದ ಪ್ರಭಾವ ಕಡಿಮೆ ಆಯಿತಂತೆ. ಅಂದಿನಿಂದ ಈ ಪುಟ್ಟ ತುಂಬೆ ಗಿಡದ ಹೂಗಳು ಈಶ್ವರನಿಗೆ ಪ್ರಿಯವೆಂದು, ಅದರಲ್ಲೂ ವಿಶೇಷವಾಗಿ ಶಿವರಾತ್ರಿಯಂದು ತುಂಬೆ ಹೂವುಗಳಿಂದ ಅರ್ಚನೆ ಮಾಡಿದರೆ ಶಿವನು ಪ್ರಸನ್ನನಾಗುತ್ತಾನೆ ಎಂಬ ನಂಬಿಕೆ ಇದೆ.

ನಿತ್ಯ ಪೂಜೆಗೂ ತುಂಬೆ ಬಳಸುತ್ತಾರೆ. ಹೆಚ್ಚುಕಡಿಮೆ ಶಿವರಾತ್ರಿಯ ಸಮಯದ ಹೊತ್ತಿಗೆ ಅಂದರೆ ಪ್ರಬ್ರವರಿ, ಮಾರ್ಚ್, ತಿಂಗಳುಗಳಲ್ಲಿ ಹೊಳೆ, ಗದ್ದೆ, ರಸ್ತೆ ಬದಿ, ಹಿತ್ತಲು, ಗುಡ್ಡ ಬಯಲು ಹೀಗೆ ಎಲ್ಲೆಂದರಲ್ಲಿ ಬೆಳೆದ ಗಿಡಗಳನ್ನು ಶಿವರಾತ್ರಿ ದಿನ ಹುಡುಕಿಕೊಂಡು ಹೋಗಿ ಹೂವುಗಳನ್ನು ತರುತ್ತಾರೆ. ತುಂಬೆ ಹೂವು ಅರಳಿದ ಗಿಡ ಸಿಗುವುದೇ ಕಷ್ಟ. ಒಂದು ಗಿಡ ಸಿಕ್ಕರೂ ಸಾಕು ಎಂದು ಹುಡುಕುವುದು ಇದೆ. ಈ ದಿನ ಗಿಡದ ಹೂಗಳನ್ನು ಬಿಡಿಸುವಾಗ ಬಹಳ ಎಚ್ಚರಿಕೆಯಿಂದ ಗಮನಕೊಟ್ಟು ಬಿಡಿಸಬೇಕು. ಈ ಗಿಡದ ಹೂವು ಬಿಡಿಸಲು ಕ್ರಮವಿದೆ. ಇದು ಸೂಕ್ಷ್ಮವಾದ ಗಿಡ ಗಡಿಬಿಡಿಯಲ್ಲಿ ಬಿಡಿಸಲು ಹೋದರೆ ಗಿಡದ ಟೊಂಗೆ ಮುರಿಯುತ್ತದೆ. ಎಳೆದೆಳೆದು ಕಿತ್ತರೆ ಹೂವುಗಳು ಬಿಟ್ಟಿರುವ ಚೆಂಡು ಕೈಗೆ ಕಿತ್ತು ಬರುತ್ತದೆ.

ಸೂಕ್ಷ್ಮವಾಗಿ ಹೂಗಳನ್ನು ಬಿಡಿಸಬೇಕೆಂದು ಹಿಂದಿನವರು ನಿಬಂಧನೆಗಳನ್ನು ಹಾಕಿದ್ದರು. ನಾವೆಲ್ಲ ತುಂಬೆ ಹೂವು ಬಿಡಿಸುತ್ತಿದ್ದ ಕ್ರಮ. ಶಿವರಾತ್ರಿ ಬೆಳಗ್ಗೆ ಬೇಗನೆ ಎದ್ದು ಮುಖ ತೊಳೆದು ಕಾಫಿ ಕುಡಿದು, ತುಂಬೆಹೂವು ಮಾತ್ರ ಹಾಕಲು ಶುಭ್ರವಾಗಿ ತೊಳೆದ ಹಿತ್ತಾಳೆ ಅಥವಾ ತಾಮ್ರದ ಬಟ್ಟಲುಗಳನ್ನು ತೆಗೆದುಕೊಂಡು ಹೊಳೆಯ ಬದಿ ಹೋದರೆ, ಅಲ್ಲಲ್ಲಿ ಹೋಗುವ ಹಾದಿಯ ಬದಿಯಲ್ಲಿ, ಮರಳಗಳ ಮೇಲೆ ಬೇಕಾದಷ್ಟು ಗಿಡಗಳು ಇರುತ್ತಿತ್ತು.
ಯಾವುದೇ ಒಂದು ಗಿಡ ಹಿಡಿದು ಕೂತರೆ, ಮೊದಲು ಗಿಡಕ್ಕೆ ಕೈಮುಗಿದು ಶಿವನ ಅಷ್ಟೋತ್ತರ, ಶತನಾಮಾವಳಿ, ಹಾಗೂ ಸಣ್ಣಪುಟ್ಟ ಸ್ತೋತ್ರಗಳನ್ನು ಹೇಳಿಕೊಳ್ಳುತ್ತಾ ( ನಮಗೆಲ್ಲಾ ಅಜ್ಜಿ ಹೇಳಿಕೊಡುತ್ತಿದ್ದರು) ಭಯಭಕ್ತಿಯಿಂದ ಹೂಗಳನ್ನು ಬಿಡಿಸಬೇಕಿತ್ತು . ಒಂದೇ ಒಂದು ಹೂವುಗಳನ್ನು ಗಿಡದಲ್ಲಿ ಬಿಡಬಾರದು. ಹುಳುಕು ಹೊಗಳಿದ್ದರೆ ಕಿತ್ತು ಕೆಳಗೆ ಹಾಕಬೇಕು. ಹೂವುಗಳು ಬಿಟ್ಟ ಚೆಂಡುಗಳನ್ನು ಮುರಿಯಬಾರದು. ಮುರಿದರೆ ಬ್ರಹ್ಮಹತ್ಯಾ ದೋಷ, ಅಂದರೆ ಒಬ್ಬ ಬ್ರಾಹ್ಮಣನ ತಲೆ ಕಡಿದ ಶಾಪ ತಟ್ಟುತ್ತದೆ. ಹೂ ಬಿಡಿಸಿದ ಬಟ್ಟಲನ್ನು ಸರಿಯಾದ ಜಾಗದಲ್ಲಿ ಇಡಬೇಕು. ಅರ್ಧ ಬಟ್ಟಲು, ಮುಕ್ಕಾಲು ಬಟ್ಟಲು ಹೂಗಳನ್ನು ಬಿಡಿಸುತ್ತಿದ್ದೆವು. ಹೆಚ್ಚು ಹೆಚ್ಚು ಗಿಡದ ಹೂಗಳನ್ನು ಬಿಡಿಸಿದಷ್ಟೂ ಜಾಸ್ತಿ ಪುಣ್ಯ ಬರುತ್ತದೆ ಎಂದು ಹೇಳುತ್ತಿದ್ದರು. ಹೀಗೆ ತುಂಬೆ ಹೂಗಳನ್ನು ನಾಜೂಕಾಗಿ ಬಿಡಿಸಿ ಮನೆಗೆ ತಂದ ಮೇಲೆ ಅದರಲ್ಲಿ ಒಂದನ್ನೊಂದು ಪೊಣಿಸಿ ಚಕ್ರ ಮಾಡುತ್ತಿದ್ದೆವು. ಇದನ್ನು ಲಿಂಗದ ಮೇಲಿಟ್ಟಾಗ ಖುಷಿಪಡುತ್ತಿದ್ದೆವು.‌ ತುಂಬಾ ಹೂಗಳಿದ್ದಾಗ ಅಷ್ಟೋತ್ತರ ಹೇಳುವಾಗ ‘ನಮಃ’ ಬಂದಾಗ ‌ ಒಂದೊಂದೇ ಹೂ ಗಳನ್ನು ಹಾಕಿ 108 ಹೂವಿನ ಅರ್ಚನೆ ಮಾಡಿದ ಮೇಲೆ ಈ ಸಾರಿ ಗ್ಯಾರೆಂಟಿ ಪಾಸಾಗುತ್ತಿ ಎಂದಾಗ ರಿಸಲ್ಟ್ ಬಂದಷ್ಟೇ ಖುಷಿ.

ಈ ಹೂಗಳ ಜೊತೆಗೆ ಶಿವರಾತ್ರಿ ದಿನ ಮಾತ್ರ ಕೇದಿಗೆ ಹೂವು ಏರಿಸುತ್ತಾರೆ ಅಂತ ನೆನಪಿದೆ. ಸರಿಯಾಗಿ ಗೊತ್ತಿಲ್ಲ. ಉಳಿದಂತೆ ಶಿವನಿಗೆ ಕಾಡು ಹಾಗೂ ಹೊಳೆಯ ಬದಿ ಬಿಡುವ ಹೂವುಗಳು ಶ್ರೇಷ್ಠವೆಂದು, ಹೊಳೆ ದಾಟಿ ಹೋಗಿ ತರುತ್ತಿದ್ದೆವು. ಸುರಗಿ, ಸಂಪಿಗೆ, ನಾಗಸಂಪಿಗೆ, ಕೋಲು ಸಂಪಿಗೆ, ಕೆಂಡಸಂಪಿಗೆ, ರಂಜ, ಸುರಗಿ ಹೂವಿನ ಹಾರಗಳು, ಸುರಗಿ ಹೂವು ಒಣಗಿದ ಮೇಲೂ ಅದರ ಸುವಾಸನೆ ಹಾಗೆಯೇ ಇರುತ್ತಿತ್ತು. ಸುರುಳಿ, ಜಾಜಿ, ಕಸ್ತೂರಿ, ದುಂಡು, ಸೂಜಿ,ಮಾಗಿ ಮಲ್ಲಿಗೆ ಹೂಗಳು, ನಂಜ ಬಟ್ಟಲು, ರತ್ನ ಗಂಧಿ, ಬಿಲ್ವಪತ್ರೆ, ಗೊರಟೆ ಅಥವಾ ಸ್ಪಟಿಕ, ನಾಗಲಿಂಗ ಪುಷ್ಪ, ಶಂಕ ಪುಷ್ಪ, ಬೊಂಬಾಯಿ ಮಲ್ಲಿಗೆ ದಂಡೆಗಳು, ಇವೆಲ್ಲಾ ಮನೆಯಲ್ಲಿ ಊರಲ್ಲಿ ಸಿಗುತ್ತಿದ್ದ ಹೂವುಗಳು. ಹಾಗೂ ಶಿವನ ಅಭಿಷೇಕಕ್ಕೆ, ಹಳ್ಳಿಗಳಿಂದ ರೈತರು ತಂದುಕೊಡುತ್ತಿದ್ದ ಎಳನೀರು, ಕಬ್ಬಿನ ಹಾಲು, ಆಕಳ ಹಾಲು, ಹಣ್ಣುಗಳು ರಾಶಿ ರಾಶಿ, ಎಲ್ಲರನ್ನೂ ಶಿವನ ಅಭಿಷೇಕ, ನೈವೇದ್ಯಗಳು ಆದ ಮೇಲೆಯೇ, ಕಬ್ಬಿನಹಾಲು, ಎಳನೀರು, ಮೊದಲು ಫಸಲನ್ನು ಕಟಾವು ಮಾಡುತ್ತಿದ್ದರು. ಈಗಿನಂತೆ ಯಾವಾಗಂದ್ರೆ ಆವಾಗ ಕಬ್ಬಿನಹಾಲು, ಎಳೆನೀರು ಸಿಗುತ್ತಿರಲಿಲ್ಲ. (ಅನಿವಾರ್ಯವಿದ್ದರೆ ಮಾತ್ರ ಎಳನೀರು ಕೀಳುತ್ತಿದ್ದರು)

ಶಿವರಾತ್ರಿ ಸಂಭ್ರಮ ಹೇಳತೀರದು. ಮನೆ ಮುಂದೆ, ದೇವಸ್ಥಾನದ ಮುಂದೆ, ಸಗಣಿ ಹಾಕಿ ಸಾರಿಸಿ, ಅಂದಚಂದದ ಶಿವನಿಗೆ ಸಂಬಂಧಪಟ್ಟ ಬಿಲ್ವಪತ್ರೆ, ಈಶ್ವರ ಲಿಂಗ, ಇಂಥವುಗಳನ್ನು ರಂಗೋಲಿಗಳು, ಬಾಗಿಲು ತೋರಣಗಳು, ಕಡ್ಡಾಯವಾಗಿ ಭಜನೆ, ಈಶ್ವರನ ಪೂಜೆ, ಮುಂಬಾಗಿಲಿನಿಂದ ಹಿಡಿದು ಹಿತ್ತಲ ತನಕವೂ, ಶಿವನಾಮ ಸ್ಮರಣೆ ಕೇಳಿಬರುತ್ತಿತ್ತು. ಹಿತ್ತಲಲ್ಲಿದ್ದ ಅಶ್ವತ್ಥಕಟ್ಟೆ, ಬಿಲ್ವಪತ್ರೆ ಮರಗಳಿಗೆಲ್ಲ ಪ್ರದಕ್ಷಿಣೆ ಜೋರಾಗಿರುತ್ತಿತ್ತು. ಕಾರಣ ಶಾಲಾ ಪರೀಕ್ಷೆಗಳು ನಡೆಯುವ ಸಮಯ. ಆ ದಿನ ಯಾರನ್ನೂ ಬೈಯುತ್ತಿರಲಿಲ್ಲ. ಬೆಳಗ್ಗೆ 12ಗಂಟೆಯಿಂದ ಫಲಾಹಾರಗಳು ಗೊಜ್ಜವಲಕ್ಕಿ, ಮೊಸರವಲಕ್ಕಿ, ಉಪ್ಪಿಟ್ಟು, ಅರಳು, ರಸಾಯನಗಳು, ಹೆಸರುಬೇಳೆ ಪಾಯಸ, ಹೆಸರು ಉಂಡೆ, ಬೇಸನ್ ಲಾಡು, ತಂಬಿಟ್ಟು, ಕಷಾಯಗಳು, ಮರುದಿನವೂ ತಿನ್ನುತ್ತಿದ್ದೆವು. (ಏಕೆಂದರೆ ಹಿಂದೆಲ್ಲಾ ತಿಂಡಿ ಮಾಡುವುದು ಬಹಳ ಅಪರೂಪ) ಶಿವರಾತ್ರಿ ದಿನ ಮಲಗುವ ಸಮಯದಿಂದ ಮಧ್ಯರಾತ್ರಿಯತನಕ ಕನಸಿನಲ್ಲಿ ತೇಲಿದಂಥ, ಎಂದಿಗೂ ಮರೆಯಲಾಗದ ಕಥೆಗಳನ್ನು ಕೇಳುತ್ತಾ ನಿದ್ದೆ ಹೋಗುತ್ತಿದ್ದೆವು. ಇದು ಎಂದೆಂದಿಗೂ ಮರೆಯಲಾಗದ, ಶಿವ – ಪಾರ್ವತಿಯರ ಕಲ್ಯಾಣದಷ್ಟೆ ಸಂಭ್ರಮ ಸಡಗರದಿಂದ ತುಂಬಿ ತುಳುಕುತ್ತಿತ್ತು.

ಸೌರಾಷ್ಟ್ರೇ ಸೋಮನಾಥಂಚ ಶ್ರೀಶೈಲೇ ಮಲ್ಲಿಕಾರ್ಜುನಂ !
ಉಜ್ಜಯಿನ್ಯಾಂ ಮಹಾಕಾಲಂ ಓಂಕಾರಂ ಅಮಲ್ಲೇಶ್ವರಂ!

ಪರಲ್ಯಾಂ ವೈದ್ಯನಾಥಂ ಚ ಡಾಕಿನ್ಯಾಂ ಭೀಮಶಂಕರಂ !
ಸೇತುಬಂಧೇ ತು ರಾಮೇಶಂ ನಾಗೇಶಂ ‌ ದಾರುಕಾವನೇ !

ವಾರಣಸ್ಯಾಂ ತು ವಿಶ್ವೇಶಂ ತ್ರ್ಯಂಬಕಂ ಗೌತಮೀತಟೇ!
ಹಿಮಾಲಯೇ ತು ಕೇದಾರಂ ಘುಸೃಣೇಶಂ ಶಿವಾಲಯೇ!

ಏತಾನಿ ಜ್ಯೋತಿರ್ಲಿಂಗಾನಿ ಸಾಯಂ ಪ್ರಾತಃ ಪಠೇನ್ನರಃ !
ಸತ್ತ ಜನ್ಮ ಕೃತಂ ಪಾಪಂ ಸ್ಮರಣೇನ ವಿನಶ್ಯತಿ!


ಬರಹ:- ಈ ಶಿವರಾಜ್ ಅರಸು

By admin

ನಿಮ್ಮದೊಂದು ಉತ್ತರ

You missed

error: Content is protected !!