ಸ್ಯಾಂಡಲ್ ವುಡ್ ನ ಸಸ್ಪೆನ್ಸ್ ಥ್ರಿಲ್ಲರ್ ಚೇಸ್ ಮತ್ತೆ ಸುದ್ದಿಯಲ್ಲಿದೆ. ವಿಲೋಕ್ ಶೆಟ್ಟಿ ನಿರ್ದೇಶನದ, ಮನೋಹರ್ ಸುವರ್ಣ, ಪ್ರಶಾಂತ್ ಶೆಟ್ಟಿ ಹಾಗೂ ಪ್ರದೀಪ್ ಶೆಟ್ಟಿ ನಿರ್ಮಿಸಿ, ಸಿಂಪ್ಲಿಫನ್ ಮೀಡಿಯಾ ನೆಟ್ ವರ್ಕ್ ಪ್ರೈ.ಲಿ. ಲಾಂಛನದಲ್ಲಿ ತಯಾರಾಗಿರುವ ಚೇಸ್ ಚಿತ್ರತಂಡ ಇದೇ ಬರುವ ಫೆಬ್ರವರಿ ೧೪ರಂದು ಎರಡನೇ ಲಿರಿಕಲ್ ಹಾಡಿನ ಮೂಲಕ ಮತ್ತಷ್ಟು ಪ್ರೇಕ್ಷಕರ ಮನಗೆಲ್ಲುತ್ತಿದೆ.
ಈಗಾಗಲೇ ‘ಮನದ ಹೊಸಿಲಾ’ ಎಂಬ ಉತ್ತಮ ಹಾಡಿನೊಂದಿಗೆ ಸಂಗೀತಪ್ರಿಯರಿಗೆ ಮೋಡಿ ಮಾಡಿದ್ದ ಚಿತ್ರ ಈಗ ಼’ಷಾ ಲಾ ಲಾ ಲಾ ಲವ್’ ಎನ್ನುವ ಮತ್ತೊಂದು ಡ್ಯಾನ್ಸ್ ನಂಬರ್ ಅನ್ನು ಬಿಡುಗಡೆಮಾಡಿದೆ. ಬಾಲಿವುಡ್, ಕಾಲಿವುಡ್ ನಲ್ಲಿ ಸಾಕಷ್ಟು ಹೆಸರು ಮಾಡಿ ‘ಬತ್ತಮೀಸ್ ದಿಲ್’ ಹಾಡಿನ ಮೂಲಕ ಎಲ್ಲರ ಮನಸ್ಸು ಗೆದ್ದಿರುವ ಖ್ಯಾತ ಗಾಯಕ ಬೆನ್ನಿ ದಯಾಲ್ ಈ ಹಾಡನ್ನು ಹಾಡಿದ್ದರೆ ಕಾರ್ತಿಕ್ ಆಚಾರ್ಯ ಸಂಗೀತ ನೀಡಿದ್ದು ಡಾ.ಉಮೇಶ್ ಪಿಲಿಕುಡೇಲು ಸಾಹಿತ್ಯ ಬರೆದಿದ್ದಾರೆ.
‘ಹುಡುಗಿ ಇವಳು ತರಲೆ’ ಎಂದು ಆರಂಭವಾಗುವ ಈ ಲವ್ ಸಾಂಗ್ ಗೆ ಬಾಲಿವುಡ್ ನಟ ಹಾಗೂ ನೃತ್ಯಪಟು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಮಾಡಿದ್ದಲ್ಲದೇ ಈ ಹಾಡಿನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿ ಕೊಂಡಿದ್ದಾರೆನ್ನುವುದು ವಿಶೇಷ. ಹುಟ್ಟೂರು ಉಡುಪಿಯಾಗಿದ್ದು ಕನ್ನಡದವರೇ ಆದ ಸುಶಾಂತ್ ಪೂಜಾರಿಗೆ ‘ಚೇಸ್’ ಕನ್ನಡದಲ್ಲಿ ಮೊದಲ ಚಿತ್ರವಾಗಿದ್ದು ನೃತ್ಯ ನಿರ್ದೇಶಕನಾಗಿಯೂ ಇದು ಚೊಚ್ಚಲ ಪ್ರಯತ್ನವಾಗಿರುವುದು ಇನ್ನೊಂದು ವಿಶೇಷ.
ಹಾಡು ಈಗಾಗಲೇ ಎಲ್ಲರಿಗೂ ಇಷ್ಟವಾಗುತ್ತಿದ್ದು ಎಲ್ಲರ ಪ್ಲೇ ಲಿಸ್ಟ್ ನಲ್ಲಿ ಸೇರಿ ವೈರಲ್ ಆಗುವ ಎಲ್ಲಾ ಲಕ್ಷಣಗಳು ಈ ಹಾಡಿನಲ್ಲಿದೆ.
ಬಾಲಿವುಡ್ ನ ಖ್ಯಾತ ನಟ ವರಣ್ ಧವನ್, ನಿರ್ದೇಶಕ ರೆಮೋ ಡಿಸೋಜಾ, ನೃತ್ಯನಿರ್ದೇಶಕರಾಗಿರುವ ಧರ್ಮೇಶ್, ಕೃತಿ ಮಹೇಶ್, ರಾಘವ್ ಮುಂತಾದವರೆಲ್ಲರೂ ಈಗಾಗಲೇ ಹಾಡನ್ನು ಮೆಚ್ಚಿ ತಮ್ಮ ಇನ್ಸ್ಟಾಗ್ರಾಂ ಖಾತೆಗಳಲ್ಲಿ ಇದನ್ನು ಹಂಚಿಕೊಂಡಿರುವುದು ಮತ್ತೊಂದು ಹೆಮ್ಮೆಯ ಸಂಗತಿ.
ರಾಧಿಕಾ ನಾರಾಯಣ್, ಶೀತಲ್ ಶೆಟ್ಟಿ, ಅವಿನಾಶ್ ನರಸಿಂಹರಾಜು, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ಶ್ವೇತಾ ಸಂಜೀವುಲು, ರಾಜೇಶ್ ನಟರಂಗ, ಅರವಿಂದ್ ರಾವ್, ಅರವಿಂದ್ ಬೋಳಾರ್ ಹಾಗೂ ಇನ್ನೂ ಅನೇಕ ಹೆಸರಾಂತ ಕಲಾವಿದರು ನಟಿಸಿರುವ ‘ಚೇಸ್’ ಚಿತ್ರದ ಆಲ್ಬಂ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಣೆಯಿದೆ.
ಅನಂತ ರಾಜ್ ಅರಸ್ ಛಾಯಾಗ್ರಹಣ, ಶ್ರೀಕ್ರೇಜಿ಼ಮೈಂಡ್ಸ್ ಸಂಕಲನ ವಿರುವ ಚೇಸ್ ನಲ್ಲಿ ಶಿವ ಶೆಟ್ಟಿ ಕಾರ್ಯಕಾರಿ ನಿರ್ಮಾಣದ ಜವಾಬ್ದಾರಿ ನಿರ್ವಹಿಸಿದ್ದಾರೆ.
ಕನ್ನಡದಲ್ಲಿ ಇತ್ತೀಚೆಗೆ ಯಾವುದೇ ಸಸ್ಪೆನ್ಸ್ ಚಿತ್ರಗಳು ತೆರೆಗೆ ಬಂದಿರುವುದು ಕಡಿಮೆ ಇದ್ದು ಚೇಸ್ ಚಿತ್ರ ಆ ಕೊರತೆಯನ್ನು ನೀಗಿಸುವ ಭರವಸೆ ಇದೆ.