ಭದ್ರಾವತಿ, ಜ.5:
ಇಲ್ಲಿನ ಹೊಸ ಸೇತುವೆ ರಸ್ತೆಯಲ್ಲಿರುವ ಮಂಜುನಾಥ ಶಾಮಿಲ್‌ನಲ್ಲಿ ನಿನ್ನೆ ರಾತ್ರಿಯಿಂದ ಇಂದಿನವರೆಗೂ ಬೆಂಕಿ ಧಗದಗಿಸಿ ಉರಿಯುತ್ತಿದೆ. ಅಗ್ನಿಶಾಮಕ ದಳದ ನಿರಂತರ ಪ್ರಯತ್ನದ ನಡುವೆ ಭಾರೀ ಅವಘಡ ತಪ್ಪಿದ್ದರೂ ಸಂಭವಿಸುತ್ತಿರುವ ಅಘಾತವೇ ಮಿತಿಮೀರಿದೆ.


ಬೆಂಕಿಯ ಭಾರಿ ಅನಾಹುತವನ್ನು ಸತತ ನಂದಿಸಲು ಎಂಟೂವರೆ ಗಂಟೆಗಳ ಕಾಲ 50ಕ್ಕೂ ಹೆಚ್ಚು ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರೂ ಸಂಪೂರ್ಣವಾಗಿ ಬೆಂಕಿ ನಂದಿಸಲು ಸಾಧ್ಯವಾಗಿಲ್ಲ.
ಬೆಂಕಿಯ ತೀವ್ರತೆಗೆ ಶಾಮಿಲ್ ಪಕ್ಕದಲ್ಲಿದ್ದ ಪ್ಲಂಬಿಂಗ್ ಅಂಗಡಿ ಸಂಪೂರ್ಣ ಭಸ್ಮವಾಗಿದ್ದರೆ, ಅದರ ಪಕ್ಕದ ಮತ್ತೊಂದು ಅಂಗಡಿ ಬಹುತೇಕ ಸುಟ್ಟುಹೋಗಿದೆ. ಮುಂಜಾಗ್ರತಾ ಕ್ರಮವಾಗಿ ಇಡೀ ಬಡಾವಣೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ರಾತ್ರಿಯಿಂದಲೇ ಪೊಲೀಸರು ಹಾಗೂ ಆಂಬ್ಯುಲೆನ್ಸ್ ಸ್ಥಳದಲ್ಲೇ ಬೀಡುಬಿಟ್ಟಿದೆ.


ನಿನ್ನೆ ರಾತ್ರಿ 11 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣ ಮಾತ್ರದಲ್ಲೇ ವ್ಯಾಪಕವಾಗಿ ಅಗ್ನಿಕೆನ್ನಾಲಿಗೆ ಚಾಚಿದ್ದು, ಕೋಟ್ಯಾಂತರ ರೂ. ಬೆಲೆಬಾಳುವ ನಾಟ ಸುಟ್ಟು ಭಸ್ಮವಾಗಿದೆ.
ಘಟನಾ ಸ್ಥಳದ ನಿವಾಸಿ ಮಹಿಳೆಯೊಬ್ಬರು, ರಾತ್ರಿ 9.30ರ ಸುಮಾರಿಗೆ ಹೊಗೆಯಾಡುವುದು ಕಂಡುಬಂದಿತು. ಅಕ್ಕಪಕ್ಕದವರಿಗೆ ಹಾಗೂ ಶಾಮಿಲ್ ಮಾಲೀಕರಿಗೆ ತಿಳಿಸುವುದರೊಳಗಾಗಿ ಬೆಂಕಿ ಹೊತ್ತಿಕೊಂಡು ಧಗಧಗನೇ ಉರಿಯಿತು. ನಾವೂ ಸೇರಿದಂತೆ ಅಕ್ಕಪಕ್ಕದ ಮನೆಯವರು ಹೆದರಿಕೆಯಿಂದ ಹೊರಕ್ಕೆ ಓಡಿಬಂದು ಇಡೀ ರಾತ್ರಿ ರಸ್ತೆ ಪಕ್ಕದಲ್ಲಿಯೇ ಕಳೆದಿದ್ದೇವೆ. ನಮ್ಮ ಮನೆ ಹಿಂಭಾಗದ ಗೋಡೆ ಬಹುತೇಕ ಸೀಳು ಬಂದಿದ್ದು, ಬಹಳಷ್ಟು ನಷ್ಟವುಂಟಾಗಿದೆ ಎಂದು ಅಳಲು ತೋಡಿಕೊಂಡರು.


ಘಟನೆ ಕುರಿತಂತೆ ಮಾಹಿತಿ ನೀಡಿದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಲಕ್ಕಪ್ಪ 11 ಗಂಟೆ ಸುಮಾರಿಗೆ ನಮಗೆ ಮಾಹಿತಿ ಬಂದ ತಕ್ಷಣ ಎರಡು ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿ ನಮ್ಮ ಸಿಬ್ಬಂದಿ ನಂದಿಸಲು ಪ್ರಯತ್ನ ಆದರೆ, ಬೆಂಕಿ ಕೆನ್ನಾಲಿಗೆ ಹೆಚ್ಚಿದ್ದ ಕಾರಣ ಬೇರೆ-ಬೇರೆ ಊರುಗಳಿಂದ ಸುಮಾರು 9 ವಾಹನಗಳನ್ನು ತರಿಸಿಕೊಂಡು ಕಾರ್ಯಾಚರಣೆ ನಡೆಸುತ್ತಿದ್ದೇವೆ. ಬೆಂಕಿಯ ಕೆನ್ನಾಲಿಗೆ ಹೆಚ್ಚುತ್ತಿದ್ದು, ಸುಮಾರು ಒಂಬತ್ತು ಘಂಟೆಗಳ ಕಾಲ ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲು ಪ್ರಯತ್ನಿಸುತ್ತಿದ್ದೇವೆ. ಪೂರ್ಣವಾಗಿ ಬೆಂಕಿ ನಂದಿಸಲು ಇನ್ನು ಕನಿಷ್ಟ ಎರಡು ಗಂಟೆಗಳ ಕಾಲ ಬೇಕಾಗುತ್ತದೆ. ಘಟನೆ ನಡೆದಾಕ್ಷಣ ಸ್ಥಳಕ್ಕೆ ಧಾವಿಸಿ ಅಕ್ಕಪಕ್ಕದ ನಿವಾಸಿಗಳನ್ನು ಹೊರಕ್ಕೆ ಕರೆತಂದು ಮನೆಗಳಲ್ಲಿದ್ದ ಸಿಲಿಂಡರ್‌ಗಳನ್ನು ಹೊರಕ್ಕೆ ಸಾಗಿಸುವ ಮೂಲಕ ಸಂಭವನೀಯ ದೊಡ್ಡ ದುರಂತವನ್ನು ತಪ್ಪಿಸಲು ಪ್ರಯತ್ನಿಸಿದ್ದೇವೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!