ಸಾಗರ: ಸಮೀಪದ ಮಂಕೋಡು ಅರಣ್ಯ ವ್ಯಾಪ್ತಿಯ ಜೆ.ಪಿ.ನಗರದಲ್ಲಿ ಅಕ್ರಮವಾಗಿ ಗಂಧದ ಚಕ್ಕೆಗಳನ್ನು ಕೆತ್ತುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದ ಘಟನೆ ನಡೆದಿದೆ.
ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಅಬ್ದುಲ್ ರಜಾಕ್ ಮತ್ತು ವೆಂಕಟರಮಣ ಅವರನ್ನು ಬಂಧಿಸಿ, ಅವರಿಂದ ಐದೂಕಾಲು ಕೆ.ಜಿ. ಶ್ರೀಗಂಧದ ಚಕ್ಕೆ ಹಾಗೂ ಒಂದು ಹೀರೋಹೊಂಡ ಸ್ಪ್ಲೆಂಡರ್ ಬೈಕ್ ವಶಕ್ಕೆ ಪಡೆಯಲಾಗಿದೆ. ಇಬ್ಬರು ಆರೋಪಿಗಳ ವಿರುದ್ದ ಅರಣ್ಯ ಮೊಕದ್ದಮೆ ದಾಖಲು ಮಾಡಿ ನ್ಯಾಯಾಲಯದ ಎದುರು ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ವಲಯ ಅರಣ್ಯಾಧಿಕಾರಿ ಪ್ರಮೋದ್ ಡಿ.ಆರ್. ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಅಶೋಕ್, ಅರಣ್ಯ ರಕ್ಷಕರಾದ ಅಶೋಕ್, ಸುಮಿತಾ, ವಾಹನ ಚಾಲಕ ಲೋಕೇಶ್ ಪಾಲ್ಗೊಂಡಿದ್ದರು.