ಶಿವಮೊಗ್ಗ ಜಿಲ್ಲೆ ಸೊರಬ ತಾಲ್ಲೂಕಿನ ಹೀರೆಕಸವೆ ಗ್ರಾಮದಲ್ಲಿ ಆರ್ . ಶೇಜೇಶ್ವರ ಸಹಾಯಕ ನಿರ್ದೇಶಕರು , ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ , ಶಿವಪ್ಪನಾಯಕ ಅರಮನೆ ಶಿವಮೊಗ್ಗ ಹಾಗೂ ಇತಿಹಾಸ ಸಂಶೋಧಕರಾದ ರಮೇಶ ಹಿರೇಜಂಬೂರು ಇವರು ಕ್ಷೇತ್ರ ಕಾರ್ಯ ಕೈಗೊಂಡಾಗ ಹೀರೆಕಸವೆ ಗ್ರಾಮದ ಶಾಂತಪ್ಪ ದಾಸರ ಮನೆಯ ಹತ್ತಿರ ಲಿಂಗಮುದ್ರೆಯ ಕಲ್ಲಿನ ಶಾಸನ ಹಾಗೂ ಹಿರ್ಲೆರು ಮಲ್ಲಿಕಾರ್ಜುನ ಗೌಡ್ರ ಅಡಿಕೆಯ ತೋಟದಲ್ಲಿ ಲಿಂಗಮುದ್ರೆಯ ಕಲ್ಲಿನ ಶಾಸನ ಕಂಡುಬಂದಿದ್ದು , ಇವುಗಳು ತುಂಬಾ ಮಹತ್ವವುಳ್ಳ ಶಾಸನಗಳಾಗಿವೆ . ಲಿಂಗಮುದ್ರೆ ಕಲ್ಲು : ಮೊದಲು ಗಡಿಯನ್ನು ಗುರುತಿಸಲು ಬೆಟ್ಟ , ಗುಡ್ಡ , ನದಿ , ಹಳ್ಳ ಹಾಗೂ ವಟ ವೃಕ್ಷ , ಹುಣಸೆ ಮೊದಲಾದ ಮರಗಳನ್ನು ಗುರುತಿಸುತ್ತಿದ್ದರು . ನಂತರ ಇವುಗಳ ಜೊತೆಯಲ್ಲಿಯೇ ಕಲ್ಲುಗಳನ್ನು ಗಡಿಕಲ್ಲುಗಳಾಗಿ ನಿಲ್ಲಿಸುತ್ತಾ ಜೊತೆ ಜೊತೆಯಲ್ಲಿಯೇ ಧರ್ಮಗಳ ಆಧಾರದ ಮೇಲೆ ದಾನ ನೀಡಿದ್ದ ಸೀಮೆ , ಊರು ಹಾಗೂ ದಾನವಾಗಿ ನೀಡಿದ ಭೂಮಿಗಳ ಗಡಿಕಲ್ಲುಗಳನ್ನು ಧರ್ಮಧಾರಿತವಾಗಿ ನಿಲ್ಲಿಸುತ್ತಾ ಬಂದರು . ಇದರಲ್ಲಿ ಪ್ರಮುಖವಾಗಿ ಜೈನರು ಮುಕ್ಕೊಡೆ ಕಲ್ಲನ್ನು , ವೈಷ್ಣವರು ಚಕ್ರಕಲ್ಲು , ಶಂಖ ಚಕ್ರದಕಲ್ಲು , ವಾಮನ ಮುದ್ರೆಯ ಕಲ್ಲನ್ನು , ಶೈವರು ನಂದಿಕಲ್ಲು , ತ್ರಿಶೂಲದ ಕಲ್ಲು ಹಾಗೂ ಲಿಂಗಮುದ್ರೆ ಕಲ್ಲನ್ನು ನೋಡುತ್ತಿದ್ದರು . ಇಲ್ಲಿ ಮುಖ್ಯವಾಗಿ ದಾನ ನೀಡಿರುವ ಭೂಮಿಯ ಗಡಿಕಲ್ಲಾಗಿ ಶಾಸನವಿರುವ ಲಿಂಗಮುದ್ರೆಯ ಕಲ್ಲುಗಳನ್ನು ನಿಲ್ಲಿಸಿ ಇದರ ಶಾಸನದ ಮೇಲೆ ಸೂರ್ಯ ಚಂದ್ರ ಹಾಗೂ ಶಿವಲಿಂಗವನ್ನು ಕೆತ್ತಲಾಗಿದ್ದು , ಈ ಶಿಲ್ಪಗಳ ಆಧಾರದ ಮೇಲೆ ಇವುಗಳನ್ನು ಲಿಂಗಮುದ್ರೆಕಲ್ಲುಗಳು ಎಂದು ಕರೆಯಲಾಗಿದೆ . ಮುಖ್ಯವಾಗಿ ಶೈವ ಧರ್ಮದವರು ದಾನ ನೀಡುವಾಗ ಲಿಂಗಮುದ್ರೆ ಕಲ್ಲುಗಳನ್ನು ನಿಲ್ಲಿಸುತ್ತಿದ್ದರು . ಶಾಸನಗಳು : ಈ ಶಾಸನಗಳು ಎರಡು ಲಿಂಗಮುದ್ರೆಯ ಕಲ್ಲಿನ ಮೇಲಿದ್ದು ಓದಲು ಸ್ಪುಟವಾಗಿರುವುದು ಕಂಡುಬರುತ್ತದೆ . ಮೊದಲನೇ ಶಾಸನ : ಈ ಶಾಸನವು ಲಿಂಗಮುದ್ರೆ ಕಲ್ಲಿನ ಮೇಲಿದ್ದು ಇದು 13 ಸಾಲಿನಿಂದ ಕೂಡಿದ್ದು 61 ಸೆಂ.ಮೀ ಉದ್ದ , 49 ಸೆಂ.ಮೀ ಆಗಲವಾಗಿದೆ . ಶಾಸನದ ಪಾಠ : 1. 0 ಶ್ರೀಮಕ್ಕೆಳದಿ ಚೆನ್ನಮ್ಮಾಜಿಯವರೂ ಸಿವವೊಡೆರಿ 2. 0 ಗೆ ಶಣರ್ಥ ಚಿಂನದಕಂತೆ ಮಹತ್ವ ದೇವರ ಶಿಶ್ಯರು ಬಸವಲಿಂಗಣ3 , 0 ದೇವರ ಕೈಯ ಕ್ರಯ ಗ 120 ನೂರ ಯಿಪ್ಪ ವರಹನ್ನು ಅರಮನಿಗೆ ತ್ತೆ4 , ಗೆದುಕೊ ( 0 ) ಡು ಚಿಟುರ ಸೀಮೆ ವಳಗಣ ಹಿರೆಕಸವೆ ಗಾಮದಿಂದ 5.  ಗ 12 ಹಂನೆರಡು ವರಹನ ಸ್ವಾಸ್ಥಿಯನ್ನು ಶಿವಾರ್ಪಿವಾಗಿ ಬಿಟ್ಟು 6. 0 ಭೂಮಿಗೆ ಲಿಂಗಮುದ್ರೆ ಶಿಲಸ್ತಪಿತ್ತವ ಮಡಿದ ಬಗ್ಗೆ ಹಜೂರಿಂದ 7 , 0 ಳಿಗದೆ ಮಲನಾಳು . ಸಿದೆವೆ ಚೌಗಾಮದವರ ಕರಿಸಿ ಕೊಂಡು ಗಡಿ 8. 0 ತತ್ಪಾರ ಬರದ ರೀತಿಯಲ್ಲಿ ಯಿವನ ಮುಂದಿಟ್ಟು ರೇಖೆ ಪ್ರಮಾಣ ಭೂಮಿ 9. 0 ಆ ಗ್ರಾಮದಲ್ಲಿ ಯಿವರು ಕಟ್ಟಿಸುವ ಮರದ ಚಮೂಲೆಗೆ . 10.  ಹ ಲಿಂಗಮುದ್ರೆ ಶಿಲಾಸ್ತಪಿತವ ಮಾಡಿಸಿ ಕೊಟ್ಟು ಸೇ11 0 ನಭೋವರ ಕಡತಕ್ಕೆ ಬರಸಿ ಡುವ ಹಾಗೆ 12 , 0 ಆಂ ಅಂ| ಗೀರಸ ಸವಚತ್ಸರದ ಆಸಾಡ ಬ 1113. 0 ಲ್ಲು ಮಡಿಸುವ , ಗಿ ಅಮರಣ ಶಾಸನದ ಸಾರಂಶ : ಕೆಳದಿ ಸಾಮ್ರಾಜ್ಯದ ಚೆನ್ನಮ್ಮನವರು ತಮ್ಮ ಆಡಳಿತದ ಅವಧಿಯ ಆಂಗೀರಸ ಸಂವತ್ಸರದ ದಿನಾಂಕ : 30-06-1692 ರಂದು ಶಿವವೊಡೆಯರ ಶರಣಾರ್ಥವಾಗಿ ಚಿಂನದಕಂತೆ ಮಹತ್ತ ದೇವರ ಶಿಶ್ಯ ಬಸವಲಿಂಗಣ್ಣ ದೇವರಿಗೆ 120 ಗದ್ಯಾಣ ವರಹವನ್ನು ಅರಮನೆಯಿಂದ ತೆಗೆದುಕೊಂಡು ಹಾಗೂ ಚಿತ್ತೂರ ಸೀಮೆಯಲ್ಲಿರುವ ಹೀರೆ ಕಸವೆ ಗ್ರಾಮದಿಂದ 12 ಗದ್ಯಾಣ ವರಹದ ಹುಟ್ಟುವಳಿಯ ಭೂಮಿಗೆ ಲಿಂಗಮದ್ರೆಯಕಲ್ಲನ್ನು ಅರಮನೆಯ ಪ್ರತಿನಿಧಿಯಾಗಿ ಮಲನಾಳು ಬಂದು ಈ ಭೂಮಿಯ ಅಂದರೆ ಹಿರೇಕಸವೆ ಗ್ರಾಮದ ನಾಲ್ಕು ಗಡಿಯ ಗ್ರಾಮದವರನ್ನು ಕರೆಯಿಸಿ ಮುಂದೆ ಯಾವುದೇ ತಕಾರರು ಬರದಂತೆ ಭೂಮಿಯ ಪ್ರಮಾಣ ಮಾಡಿಸಿ  ಲಿಂಗಮುದ್ರೆಯ ಕಲ್ಲನ್ನು ನಿಲ್ಲಿಸಿ , ಶಾಸನದ ವಿಷಯವನ್ನು ಅಧಿಕಾರಿಯಾದ ಸೇನಬೋವರು ಕಡತಕ್ಕೆ ಬರೆಸಿಟ್ಟಿರುವುದನ್ನು ತಿಳಿಸುತ್ತದೆ . ಎರಡನೇ ಶಾಸನ : ಈ ಶಾಸನವು ಲಿಂಗಮುದ್ದೆ ಕಲ್ಲಿನ ಮೇಲಿದ್ದು ಇದು 13 ಸಾಲುಗಳು ಕಂಡುಬರುತ್ತಿದ್ದು , 72 ಸೆಂ.ಮೀ ಉದ್ದ , 47 ಸೆಂ.ಮೀ ಆಗಲವಾಗಿದ್ದು ಸ್ವಲ್ಪ ಭಾಗ ಮಣಿನಲ್ಲಿ ಹೂತು ಹೋಗಿರುವುದು ಕಂಡುಬರುತ್ತದೆ , ಶಾಸನದ ಪಾಠ : 1. ಶ್ರೀಮತ್ತೆ ಕೆಳದಿ ಚಂನಂಮಾಜಿಯವರು ಶಿವವೊಡೆ ರಿ 2. ಗೆ ಶರಣಾರ್ತಿ ಚಿಂನದಕಂತೆಯ ಬಗೆನ ರಾಮ 3. ಚೆಶ ದೇವರಿಗೆ ಚಿಟ್ಟೂರ ಸೀಮೆ ಹಿರೆಕಸವೆ ಗ್ರಾಮ 4. ದ ಗ 30 ಮುವತ್ತು ವರಹ ಸ್ವಾಸ್ತಿಯನು ಶಿವರ್ಪಿತ 5. ವಾಗಿ ಬಿಟ್ಟು ಯೀ ಭೂಮಿಗೆ ಲಿಂಗಮುದ್ರೆ ಶಿಲಾಸ್ತಾಪಿತವ 6. ಮಾಡಿಸಿ ಕೊಡುವಲ್ಲಿಗೆ ಹುಜೂರಿಂದ ಊಳೆಗದ 7. ಬಸವನ ಕಳುಹಿಸಿದೆವೆ ಚಗ್ರಾಮದವರ ಕ . 8. ರಸಿ ಕೊಂಡು ಗಡಿತತ್ವರಾಬಾರದ ರೀತ್ತಿ ಯಿವನ 9. ಮುಂದಿಟ್ಟು ರೇಕೆ ಪ್ರಮಾಣ ಭೂಮಿ ಐಭೂ 10. ಮಿಗೆ ಸಲುವ ಹಕಲು ಆದಾಯದಲ್ಲಿ ಯವರು 11 . ಮಾಡಿಸಿ ಕೊಟ್ಟು ಯೀ ಕಾಗದವ ಸೇನ 12. ಬೋವರ ಕಡತಕ್ಕೆ ಬರಸಿ 13. ಸಿದ್ಧಾರ್ಥಿ ಸಂವತ್ಸರದ ಕಾರ್ತಿಕ ಸಾರಂಶ : ಕೆಳದಿ ಅರಸಿ ಚೆನ್ನಮ್ಮಾಜಿಯವರು ಶಿವವೊಡೆಯರ ಶರಣಾರ್ಥವಾಗಿ ಚಿಂನದಕಂತೆಯ ಚಿಟ್ಟೂರು ಸೀಮೆಯ ಹಿರೇ ಕಸವೆ ಗ್ರಾಮದ 30 ವರಹ ಹುಟ್ಟುವಳಿಯ ಭೂಮಿಯನ್ನು ಕ್ರಿ.ಶ. 1679 ರಲ್ಲಿ ರಾಮೇಶ್ವರ ದೇವರಿಗೆ ಅಂದರೆ ಈಗ ಇದೇ ಗ್ರಾಮದಲ್ಲಿರುವ ರಾಮೇಶ್ವರ ದೇವರಿಗೆ ದಾನ ನೀಡಿ , ಈ ಭೂಮಿಯಲ್ಲಿ ಲಿಂಗಮುದ್ರೆ ಕಲ್ಲನ್ನು ನಿಲ್ಲಿಸುವಾಗ ಅರಮನೆಯ  ಊಳಿಗದ ( ಪ್ರತಿನಿಧಿ ) ಬಸವನು ಬಂದು ಈ ಗ್ರಾಮದ ನಾಲ್ಕು ಗಡಿಯವರನ್ನು ಕರೆಯಿಸಿ ಗಡಿಯಲ್ಲಿ ಯಾವುದೇ ತಕಾರರು ಬರದಂತೆ ಭೂಮಿಯನ್ನು ಪ್ರಮಾಣಿಸಿ ಅಧಿಕಾರಿ ಸೇನಬೋವರ ಕಡತಕ್ಕೆ ಕಾಗದಕ್ಕೆ ಒಂದು ಪ್ರತಿ ಅರಮನೆಗೆ ಒಂದು ಪ್ರತಿ ಬರೆಯಿಸಿ ದಾಖಲಿಸಿ ದಾನ ನೀಡಿರುವುದು ಕಂಡುಬರುತ್ತದೆ . ಶಾಸನಗಳ ಮಹತ್ವ : ಕೆಳದಿ ಅರಸರು ಕೆಳದಿ , ಇಕ್ಕೇರಿ ಹಾಗೂ ಬಿದನೂರನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಶ. 1638 ರಿಂದ ಕ್ರಿ.ಶ. 1763 ರವರೆಗೆ ಆಳ್ವಿಕೆ ಮಾಡಿದರು . ಇವರಲ್ಲಿ ಪ್ರಸಿದ್ದವಾದ ರಾಣಿ ಚೆನ್ನಮ್ಮ ಇವರನ್ನು ಕೆಳದಿ ಚೆನ್ನಮ್ಮ ಎಂದು ಕರೆಯಲಾಗಿದ್ದು , ಇವರು ಕ್ರಿ.ಶ. 1672 ರಿಂದ ಕ್ರಿ.ಶ. 1697 ರವರೆಗೆ ಸುಮಾರು 26 ವರ್ಷಗಳ ಕಾಲ ಆಳ್ವಿಕೆ ಮಾಡಿದರು . ಇವರು ತಮ್ಮ ಆಳ್ವಿಕೆಯ ಅವಧಿಯಲ್ಲಿ ಆನೇಕ ಯುದ್ಧ , ದಾನ , ಧರ್ಮಗಳನ್ನು ಮಾಡಿದ್ದು , ಚಿಟ್ಟೂರು ಸೀಮೆಯ ಹೀರೆ ಕಸವೆ ಗ್ರಾಮದಲ್ಲಿ ದಾನ ನೀಡಿ ಇದು ಶಾಶ್ವತವಾಗಿ ಇರಬೇಕೆಂದು ಶಾಸನ ಬರೆಸಿದ್ದು , ಶೈವ ಧರ್ಮದವರು ದಾನ ನೀಡಿದರೆ ಲಿಂಗಮುದ್ರೆಕಲ್ಲನ್ನು ದಾನದ ಗಡಿಕಲ್ಲನ್ನು ನಿಲ್ಲಿಸುತ್ತಿದ್ದು ಇಂತಹ ಲಿಂಗಮುದ್ರೆಯ ಗಡಿಕಲ್ಲನ್ನು ನಿಲ್ಲಿಸಿರುವುದು ಶಾಸನದಿಂದ ತಿಳಿದುಬರುತ್ತದೆ . ಇವುಗಳು ದಾನವನ್ನು ಹಾಗೂ ಲಿಂಗಮದ್ರೆ ಕಲ್ಲಿನ ಮಹತ್ವವನ್ನು ಸಾರುವ ಕೆಳದಿ ಸಾಮ್ರಾಜ್ಯದ ಮಹತ್ವದ ಶಾಸನಗಳಾಗಿವೆ . ಕೃತಜ್ಞತೆಗಳು : ಈ ಶಾಸನವನ್ನು ಪತ್ತೆ ಹಚ್ಚುವಲ್ಲಿ ಸಹಕರಿಸಿದ ಇತಿಹಾಸ ಸಂಶೋಧಕ ರಮೇಶ ಹೀರೇಜಂಬೂರು , ಶಾಸನವನ್ನು ಓದಿಕೊಟ್ಟ ಡಾ.ಜಗದೀಶ ಹಾಗೂ ಹೀರೆ ಕಸವೆ ಗ್ರಾಮದ ಶಿಕ್ಷಕರಾದ , ಸುಧಾಕರ , ಪುಟ್ಟರಾಜು ಗೌಡು , ಗಣಪತಿ , ನಾಗರಾಜ , ದಿನೇಶ್ ಬಾಬು , ಉದಯಬಾಬು ಇವರಿಗೆ ಆರ್ . ಶೇಜೇಶ್ವರ ಧನ್ಯವಾದಗಳನ್ನು ತಿಳಿಸಿದ್ದಾರೆ .

By admin

ನಿಮ್ಮದೊಂದು ಉತ್ತರ

error: Content is protected !!