ಶಿವಮೊಗ್ಗ : ಕೋವಿಡ್ 19 ರೋಗೋದ್ರೇಕದ 2ನೇ ಅಲೆ ತೀವ್ರವಾಗಿ ಹರಡುತ್ತಿರುವುದರಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ ಮುಸ್ಲಿಂಬಾಂಧವರಿಗೆ ಪವಿತ್ರರಂಜಾನ್ ತಿಂಗಳಿನ ಈ ಸಂದರ್ಭದಲ್ಲಿ ಸರ್ಕಾರದ ಹೊಸ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಪಾಲಿಕೆ ಆಯುಕ್ತರು ತಿಳಿಸಿರುತ್ತಾರೆ.
ಕಂಟೈನ್ಮೆಂಟ್ ಜ್ಹೋನ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಮಸೀದಿ ಮತ್ತು ಇತರೆ ಪ್ರಾರ್ಥನಾ ಮಂದಿರ/ಸ್ಥಳಗಳನ್ನು ಸಾರ್ವಜನಿಕರಿಗೆ ತೆರೆಯಬಾರದು. ಕಂಟೈನ್ಮೆಂಟ್ ಜ್ಹೋನ್ ತೆರವುಗೊಳಿಸಿದ ನಂತರ ಅಥವಾ ಕಂಟೈನ್ಮೆಂಟ್ ಜ್ಹೋನ್ ಹೊರಗಡೆ ಬರುವ ಮಸೀದಿ ಮತ್ತು ಇತರೆ ಪ್ರಾರ್ಥನಾ ಮಂದಿರಗಳಲ್ಲಿ ಈ ಕೆಳಗೆ ಸೂಚಿಸಿದಂತೆ ಕ್ರಮವಹಿಸಲು ಆದೇಶವಾಗಿರುತ್ತದೆ.
ತೀವ್ರ ಖಾಯಿಲೆಯಿಂದ ಬಳಲುತ್ತಿರುವವರು, ಗರ್ಭಿಣಿಯರು, ಮಕ್ಕಳು ಮನೆಯಲ್ಲಿರುವುದು. ಸರ್ಕಾರವು ಈ ಹಿಂದೆ ಹೊರಡಿಸಿರುವ ಕೋವಿಡ್ 19 ಮಾರ್ಗಸೂಚಿಯನ್ವಯ ಕಡ್ಡಾಯವಾಗಿ ಗುಂಪು ಸೇರದಿರುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್ ಧರಿಸುವುದು, ಕೆಮ್ಮು/ಶೀನುವಾಗ ಕರವಸ್ತ್ರ ಬಳಸುವುದು, ಪ್ರಾರ್ಥನಾ ಸ್ಥಳದಲ್ಲಿ ನೀರಿನ ವ್ಯವಸ್ಥೆ, ಸೋಪು, ಸ್ಯಾನಿಟೈಸರ್ ವ್ಯವಸ್ಥೆ, ಥರ್ಮಲ್ ಸ್ಕ್ಯಾನ್ ವ್ಯವಸ್ಥೆ ಮಾಡುವುದು, ಪ್ರಶಿಕ್ಷಿತ ಸೇವಾ ಕಾರ್ಯಕರ್ತರ ಸಹಕಾರದೊಂದಿಗೆ ಪ್ರಾರ್ಥನೆಗಾಗಿ ಬರುವವರ ಜ್ವರ ತಪಾಸಣೆಮಾಡಿ, ದೇಹದ ಉ?ಂಶವು ನಿಗದಿಗಿಂತ ಹೆಚ್ಚಿದ್ದಲ್ಲಿ ಅಂತಹವರನ್ನು ಸಮೀಪ
ಆರೋಗ್ಯಕೇಂದ್ರಗಳಿಗೆ ಕಳುಹಿಸುವುದು. ಮಸೀದಿಗಳ ಆಡಳಿತ ಮಂಡಳಿಯವರು ಪ್ರಾರ್ಥನೆಗಾಗಿ ಬರುವವರಿಗೆ ಪ್ರಾರ್ಥನ ಸ್ಥಳದಲ್ಲಿ ಮೊದಲೇ ಸಾಮಾಜಿಕ ಅಂತರ ಕಾಪಾಡಲು ಬಣ್ಣದಿಂದ ವೃತ್ತಾಕಾರ/ ವರ್ಗಾಕಾರದ ಜಾಗ ಗುರುತು ಮಾಡುವುದು. ಪ್ರಾರ್ಥನಾ ಸ್ಥಳಕ್ಕೆ ಒಳಹೋಗುವ ಮತ್ತು ಹೊರಹೋಗುವ ದ್ವಾರಗಳನ್ನು ಪ್ರತ್ಯೇಕಮಾಡುವುದು. ಕಡ್ಡಾಯವಾಗಿ ಜನದಟ್ಟಣೆಯಾಗದಂತೆ ಅವಶ್ಯಕತೆಗನುಗುಣವಾಗಿ ಪಾಳಿಗಳಲ್ಲಿ ಪ್ರಾರ್ಥನೆಗೆ ಅವಕಾಶ ಕಲ್ಪಿಸುವುದು.
ಆಜಾನ್ ಆರಂಬಿಸುವ 5 ನಿಮಿಷ ಮೊದಲು ಮಸೀದಿಯನ್ನು ತೆರೆಯುವುದು ಹಾಗೂ ಫರ್ಜ್ ಸಲಾತ್ ಆದ ತರುವಾಯ ಮಸೀದಿಯನ್ನು ಮುಚ್ಚಲು ಕ್ರಮವಹಿಸುವುದು. ಪ್ರತಿ ಪ್ರಾರ್ಥನೆ ನಂತರ ಕಡ್ಡಾಯವಾಗಿ ಪ್ರಾರ್ಥನಾಸ್ಥಳವನ್ನು ಸ್ವಚ್ಚಮಾಡಿಸಿ ಸ್ಯಾನಿಟೈಸ್ ಮಾಡಿಸುವುದು. ಪ್ರಾರ್ಥನೆಗೆ ಅವಶ್ಯವಿರುವ ಮ್ಯಾಟ್, ಟವೆಲ್, ಟೋಪಿ ಇತ್ಯಾದಿಗಳನ್ನು ಮಸೀದಿಯಲ್ಲಿರುವುದನ್ನು ನೀಡದೇ ಪ್ರಾರ್ಥನೆಗೆ ಬರುವವರೇ ಮನೆಯಿಂದ ಕಡ್ಡಾಯವಾಗಿ ತರುವಂತೆ ಸೂಚಿಸುವುದು. ಇವುಗಳನ್ನು ಪಾಲಿಸುವಂತೆ ಮಸೀದಿಯ ಪ್ರವೇಶದ್ವಾರ ಮತ್ತು ಆವರಣಗಳಲ್ಲಿ ಫಲಕಗಳನ್ನು ಅಳವಡಿಸುವುದು. ಇಫ್ತಾರ್ ಸಮಯದಲ್ಲಿ ಉಪವಾಸ ಮುಕ್ತಾಯ ಮಾಡುವವರು ಮನೆಯಲ್ಲಿಯೇ ಪೂರ್ಣಮಾಡಿ ಕೇವಲ ಪ್ರಾರ್ಥನೆಗಾಗಿ ಮಸೀದಿ ಬರುಬೇಕು ಹಾಗೂ ಯಾವುದೇ ಕಾರಣಕ್ಕೂ ತಿಂಡಿ/ಊಟದ ವ್ಯವಸ್ಥೆಯನ್ನು ಮಸೀದಿಯಲ್ಲಿ ಮಾಡಬಾರದು.
ಮಸೀದಿಗಳಲ್ಲಿ ಮಾರ್ಗಸೂಚಿ ಪಾಲನಾ ಸಮಿತಿಗಳನ್ನು ರಚಿಸಿ, ಕಾಲಕಾಲಕ್ಕೆ ಸರ್ಕಾರ ಹೊರಡಿಸುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕ್ರಮವಹಿಸುವುದು. ರಾಜ್ಯ ಸರ್ಕಾರದ ಸೂಚನೆಯನ್ನು ಪಾಲಿಸುತ್ತಾ ಕೋವಿಡ್ 19 ಸಾಂಕ್ರಾಮಿಕ ರೋಗದ 2ನೇ ಅಲೆಯನ್ನು ನಿಯಂತ್ರಿಸಲು ಪಾಲಿಕೆಯೊಂದಿಗೆ ಸಹಕರಿಸುವಂತೆ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.