ಎಸ್.ಕೆ.ಗಜೇಂದ್ರಸ್ವಾಮಿ
ಶಿವಮೊಗ್ಗ, ಏ.೦೫:
ಮನೆ ಚೆಂದೈತೆ, ಚಂದಾ ಹಾಲ್, ಬೆಡ್‌ರೂಂ ಅಂತೂ ಸೂಪರ್, ಅಡುಗೆ ಕೋಣೆಯಿಂದ ವರಾಂಡಕ್ಕೆ ಹೋಗುವ ಜಾಗ ಹಾಗೂ ವರಾಂಡ ಪಸಾಂದಗೈತೆ.. ಆಶ್ರಯ ಯೋಜನೆಯಡಿ ಶಿವಮೊಗ್ಗ ಬಳಿಯ ಗೋವಿಂದಾಪುರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಾದರಿ ಮನೆಗಳನ್ನು ವೀಕ್ಷಿಸಿದ ಬಹುತೇಕ ಮಹಿಳೆಯರು ಹೀಗಿತ್ತು.
ಶಿವಮೊಗ್ಗ ಗೋವಿಂದಾಪುರದಲ್ಲಿ ಇಂದು ಸುಮಾರು ೨ಸಾವಿರದಷ್ಟು ಜನ ತಮ್ಮ ಕನಸ್ಸಿನ ಮನೆಯನ್ನು ವೀಕ್ಷಿಸುವ ಸೌಭಾಗ್ಯ ಆಶ್ರಯ ಸಮಿತಿಯಿಂದ ದೊರೆತ್ತಿತ್ತು. ನಾ ಮುಂದೂ ತಾ. ಮುಂದೂ ಎಂದು ಮನೆಯ ಸಂದಿ, ಮೂಲೆಗಳನ್ನು ನೋಡಿ ಮನದ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದ ಜನರು ಅದರಲ್ಲೂ ಹೆಚ್ಚಾಗಿ ಮಹಿಳೆಯರು ಮೆಟ್ಟಿಲು ಹತ್ತಿ ಮೂರನೇ ಮಹಡಿಗೂ ಹೋಗಿ ಎಲ್ಲಾ ಮನೆಗಳನ್ನು ಒಂದೊಂದು ಸುತ್ತು ಹಾಕಿಬಂದರು. ಬಹಳಷ್ಟು ಜನ ಮನೆಗಳ ಶೈಲಿ ಹಾಗೂ ಕೆಲಸಕ್ಕೆ ಶಹಬ್ಬಾಸ್ ಹೇಳಿದರು.
ಶಿವಮೊಗ್ಗ ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್ ನೇತೃತ್ವದ ತಂಡ ಸ್ಥಳೀಯ ಶಾಸಕರು ಹಾಗೂ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರ ಗರಡಿಯಲ್ಲಿ ಸುಮಾರು ೪ಸಾವಿರ ಜನರಿಗೆ ಜಿ+೨ ಮಾದರಿಯಲ್ಲಿನ ಮನೆಗಳನ್ನು ನಿರ್ಮಿಸಿಕೊಡುವ ಕಾರ್ಯದಲ್ಲಿ ದಿಟ್ಟ ಹೆಜ್ಜೆ ಇಡುತ್ತಿದ್ದಾರೆ.
ದಾರಿ ವಸಿ ದೂರ ಎಂದು ಹೇಳುವ ಫಲಾನುಭವಿ ೫೯ ವರ್ಷದ ಸಾವಿತ್ರಮ್ಮ ನಮಗೆ ಮೇಲಿನ ಮನೆ ಸಿಕ್ಕರೆ ನಾವು ಬದುಕೋದು ಕಷ್ಟ ಎನ್ನುತ್ತಾರೆ. ಅಂತೆಯೇ ೨೩ ವರ್ಷದ ಮೀನಾಕ್ಷಿ ಅವರು ನಮ್ಮತ್ತೆಗೆ ಈಗ ೮೩ ವರ್ಷ ಅವರು ನಮ್ಮ ಜೊತೆಗಿರುತ್ತಾರೆ. ಅರ್ಜಿ ಹಾಕಿರುವುದು ನಾನು. ಅರ್ಜಿದಾರರ ಆಧಾರದಲ್ಲಿ ನನಗೆ ೩ನೇ ಮಹಡಿ ಮನೆ ಸಿಕ್ಕರೆ ಅತ್ತೆಯನ್ನು ಹೇಗೆ ಇಟ್ಟುಕೊಳ್ಳಲಿ ಎಂದು ಪ್ರಶ್ನಿಸುತ್ತಾರೆ.
ಕಮಲಮ್ಮ ಅವರ ಪತಿ ಸುಬ್ಬಣ್ಣ ಅವರು ಕೂಲಿ ಮಾಡುವ ಜನರು ನಾವು ಮನೆಯಿಂದ ಕೂಲಿ ಕೆಲಸಕ್ಕೆ ಹೋಗಲು ಸುಮಾರು ೧೦ ಕಿ.ಮೀ ನಡೆಯಲು ಸಾಧ್ಯವೆ..? ತುಂಬಾ ದೂರವಾಯಿತು. ಮೊದಲು ನೋಡಿದ್ದೇವು. ಆದರೆ ಮನೆ ಸಿಗುತ್ತದೆ ಎಂಬ ಆಸೆಗೆ ಅರ್ಜಿ ಹಾಕಿದ್ದೇವು. ಇಲ್ಲಿ ನಮ್ಮ ಮಕ್ಕಳು ಅಥವಾ ಮೊಮ್ಮಕ್ಕಳು ಇರುತ್ತಾರೆ ಎನ್ನುತ್ತಾರೆ.
ಗೋಪಶೇಟ್ಟಿಕೊಪ್ಪದಲ್ಲಿ ನಿರ್ಮಾಣವಾಗುತ್ತದೆ ಎಂದು ನಾವು ನಂಬಿಕೆ ಇಟ್ಟುಕೊಂಡಿದ್ದೇವು. ಇದು ಅದಕ್ಕಿಂತ ದೂರವಾಯಿತು. ಮೊದಲು ಅರ್ಜಿ ನೀಡಿದ ನಮಗೆ ಗೋಪಶೆಟ್ಟಿಕೊಪ್ಪದಲ್ಲಿ ನಮಗೆ ಮನೆ ನೀಡಬಹುದಿತ್ತು. ಹೇಗೋ ಕಷ್ಟಪಟ್ಟು ೮೦ಸಾವಿರ ರೂ ಜೋಡಿಸಿಕಟ್ಟಿದ್ದೇವೆ. ಮನೆ ಆಗುತ್ತಿದೆ. ಮುಂದೆ ನೋಡೋಣ ಎಂದು ಸುಶೀಲಮ್ಮ ನಿಟ್ಟಿಸಿರು ಬಿಡುತ್ತಾರೆ.
ಜೀವನದಲ್ಲಿ ಒಮ್ಮೆಯಾದರೂ ಶಿವಮೊಗ್ಗದಲ್ಲೊಂದು ಮನೆ ತಗೋಬೇಕು ಎಂದು ಕೆಲಸ ಮಾಡುತ್ತಿದ್ದೆ. ಹಮಾಲಿ ಕೆಲಸದಲ್ಲಿ ಬದುಕು ಸಾಗಿಸುವುದೇ ಕಷ್ಟ ಇಂತಹದೊಂದು ಯೋಜನೆ ಬಂದಾಗ ಮೊದಲು ಅರ್ಜಿ ಹಾಕಿದೆ ನಾನು ನನ್ನ ಹೆಂಡತಿ ಹೆಸರಿನಲ್ಲಿ ಮನೆ ತೆಗೆದುಕೊಳ್ಳುವ ಸೌಭಾಗ್ಯ ಸಿಕ್ತು ಬೇಗನೆ ಮನೆ ಆದರೆ ಸಾಕು ಈಶ್ವರಪ್ಪರಿಗೆ, ಶಶಿ ಅಣ್ಣನಿಗೆ ಹಾಗೂ ಪ್ರಸನ್ನಣ್ಣನಿಗೆ ಹಾಗೂ ಎಲ್ಲರಿಗೂ ನನ್ನ ನಮುಸ್ಕಾರಗಳು ಎಂದು ಸುಬ್ಬಣ್ಣ ತುಂಗಾ ತರಂಗ ಪತ್ರಿಕೆ ಯೊಂದಿಗೆ ಮನಸ್ಸು ಹಂಚಿಕೊಂಡು ಮಾತನಾಡಿದರು.
ಹಿಂದಿನ ಶಾಸಕ ಕೆ.ಬಿ.ಪ್ರಸನ್ನಕುಮಾರ್ ನೇತೃತ್ವದ ತಂಡಕ್ಕೆ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಿದ್ದ ಇಂತಹದೊಂದು ಯೋಜನೆಯಲ್ಲಿ ೮೬೦೦ ಮನೆಗಳನ್ನು ನಿರ್ಮಿಸಿಕೊಡುವ ಕಾಯಕಕ್ಕೆ ಮುಂದಾಗಿತ್ತು. ಅದಕ್ಕೂ ಪೂರ್ವದಲ್ಲಿ ಆಶ್ರಯ ನಿವೇಶನಕ್ಕೆ ಅರ್ಜಿ ಸಲ್ಲಿಸಿದ್ದವರು ಹೊಸದಾಗಿ ೮ಸಾವಿರ ಕಟ್ಟಿ ನೊಂದಣಿಯಾಗುವ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಇದರ ಪರಾಮರ್ಶೆ ನಡುವೆ ಆಯ್ಕೆಯಾದ ಸುಮಾರು ೪ಸಾವಿರ ಜನರಿಗೆ ಮನೆ ಕಟ್ಟಿಕೊಡುವ ಕಾರ್ಯ ನಡೆಯುತ್ತಿದೆ.