ನೆಹರು ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ
ಶಿವಮೊಗ್ಗ,ಫೆ.21:
ಜಿಲ್ಲೆಯಲ್ಲಿ ಕ್ರೀಡೆ ಹಾಗೂ ಕ್ರೀಡಾಪಟುಗಳನ್ನು ಉತ್ತೇಜಿಸುವ ನಿಟ್ಟಿನಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳೊಂದಿಗೆ ಸುಸಜ್ಜಿತವಾದ ಕ್ರೀಡಾಂಗಣವನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ ಎಂದು ಕೇಂದ್ರ ಯುವಜನ ವ್ಯವಹಾರ ಮತ್ತು ರಾಜ್ಯ ಕ್ರೀಡಾ ಸಚಿವ ಕಿರಣ್ ರಿಜಿಜು ಅವರು ಹೇಳಿದರು.
ಅವರು ಇಂದು ನಗರದ ನೆಹರು ಕ್ರೀಡಾಂಗಣದಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಏರ್ಪಡಿಸಲಾಗಿದ್ದ ನೆಹರು ಕ್ರೀಡಾಂಗಣ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಈ ಕ್ರೀಡಾಂಗಣದ ಸರ್ವಾಂಗೀಣ ವಿಕಾಸಕ್ಕಾಗಿ ರಾಜ್ಯ ಸರ್ಕಾರವು ಈಗಾಗಲೇ 25 ಕೋಟಿ ಗಳನ್ನು ಮಂಜೂರು ಮಾಡಿದೆ ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರವು 50 ಕೋಟಿ ರೂಗಳ ಅನುದಾನವನ್ನು ಮಾಡಿರುವುದಾಗಿ ತಿಳಿಸಿದರು.
ಕ್ರೀಡೆ ಕೇವಲ ಶೈಕ್ಷಣಿಕ ಚಟುವಟಿಕೆಯ ಭಾಗವಾಗಿರದೆ
ಅದು ವಿಜ್ಞಾನ- ಅಂತೆಯೇ ತಂತ್ರಜ್ಞಾನವು ಆಗಿದೆ. ಅದು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಿದೆ ಎಂದು ಅವರು ವಿಶ್ವದ ಅತಿ ಹೆಚ್ಚಿನ ಯುವಸಮುದಾಯವನ್ನು ಹೊಂದಿರುವ ದೇಶದಲ್ಲಿ ಜಗತ್ತಿನ ಪ್ರತಿಷ್ಠಿತ ಒಲಂಪಿಕ್ ಕ್ರೀಡೆಗಳಲ್ಲಿ ಪದಕ ಗಳಿಸಲು ಸಾಧ್ಯವಾಗದಿರುವುದು ಬೇಸರದ ಸಂಗತಿಯಾಗಿದೆ ಅದಕ್ಕೆ ಕಾರಣಗಳು ಹಲವು ಇರಬಹುದು. ಈ ನಿಟ್ಟಿನಲ್ಲಿ ಕ್ರೀಡೆಯನ್ನು ಉತ್ತೇಜಿಸಲು ಕೇಂದ್ರ ಸರ್ಕಾರವು ಹಲವು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಉದ್ದೇಶಿಸಿದೆ ಮುಂದಿನ ವರ್ಷಗಳಲ್ಲಿ ವಿಶ್ವದ ಆಯ್ದ ದೇಶಗಳಲ್ಲಿ ನಡೆಯುವ ಒಲಂಪಿಕ್ ಕ್ರೀಡೆಗಳಲ್ಲಿ ಭಾರತ ಆರಂಭದ 10 ಪ್ರಮುಖ ಸ್ಥಾನಗಳಲ್ಲಿ ಗುರುತಿಸಿಕೊಳ್ಳುವ ವಿಶ್ವಾಸ ತಮಗಿದೆ ಎಂದು ಅವರು ತಿಳಿಸಿದರು.
ವಿಶ್ವದ ಯಾವುದೇ ದೊಡ್ಡ ಕಾರ್ಯಕ್ರಮ ಎಂದರೆ ಅದು ಕ್ರೀಡೆಯೇ ಆಗಿರುತ್ತದೆ. ಮಾತ್ರವಲ್ಲ ಒಂದು ದೇಶದ ಕೀರ್ತಿ ಪ್ರತಿಷ್ಠೆಯು ಆಗಿದೆ ಎಂದ ಅವರು ಇತ್ತೀಚಿನ ದಿನಗಳಲ್ಲಿ ವಿಶ್ವದ ಎಲ್ಲ ರಾಷ್ಟ್ರಗಳು ಕ್ರೀಡೆಗೆ ಆದ್ಯತೆ ನೀಡಿವೆ ಎಂದು ಅವರು ಹೇಳಿದರು
ಅನೇಕ ಕ್ರೀಡಾ ಯೋಜನೆಗಳಲ್ಲಿ ಬದಲಾವಣೆ ತರಲಾಗಿದೆ. ಕ್ರೀಡಾ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿಗಳಿಗೆ ಪೌಷ್ಟಿಕ ಆಹಾರ ಮತ್ತು ಊಟೋಪಹಾರ ವ್ಯವಸ್ಥೆ ಕಲ್ಪಿಸಲಾಗಿದೆ. ಕ್ರೀಡೆಗಳಲ್ಲಿ ಭಾಗವಹಿಸುವ ಕ್ರೀಡಾಪಟುಗಳಿಗೆ ಮಾಸಿಕವಾಗಿ 50 ಸಾವಿರ ರೂಗಳ ಗೌರವಧನ ನೀಡಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಅವಕಾಶ ವಂಚಿತ ಗ್ರಾಮೀಣ ಮಕ್ಕಳಿಗೂ ಸ್ಪರ್ಧೆ ಏರ್ಪಡಿಸಿ ಪ್ರತಿಭಾವಂತ ಕ್ರೀಡಾಪಟುಗಳಿಗೆ ವಸತಿ ಯುಕ್ತ ಸೌಲಭ್ಯ ನೀಡಿ ಕ್ರೀಡಾ ತರಬೇತಿ ನೀಡಲು ಉದ್ದೇಶಿಸಲಾಗಿದೆ. ಅಲ್ಲದೆ ಅನೇಕ ಮಹತ್ವದ ಕ್ರಾಂತಿಕಾರಿ ಬದಲಾವಣೆಗಳನ್ನು ಮಾಡಲಾಗಿದೆ ಎಂದ ಅವರು, ಪ್ರತಿವರ್ಷ ಡಿಸೆಂಬರ್ ಮಾಹೆಯಲ್ಲಿ ಫಿಟ್ ಇಂಡಿಯಾ ಸಪ್ತಾಹ ವನ್ನು ಆಚರಿಸಲು ಉದ್ದೇಶಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸಂಸದ ಬಿ.ವೈ. ರಾಘವೇಂದ್ರ ಅವರು ಮಾತನಾಡಿ, ದಕ್ಷಿಣದ ಕೆಲವು ರಾಜ್ಯಗಳನ್ನು ಸೇರಿದಂತೆ ಬೆಂಗಳೂರಿನಲ್ಲಿ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದ ಕಚೇರಿಯನು ಆರಂಭಿಸಲಾಗಿದೆ ಅದರ ಉಪ ಪ್ರಾದೇಶಿಕ ಕೇಂದ್ರವನ್ನು ಶಿವಮೊಗ್ಗದಲ್ಲಿ ಆರಂಭಿಸುವಂತೆ ಕೇಂದ್ರ ಕ್ರೀಡಾ ಸಚಿವರನ್ನು ಒತ್ತಾಯಿಸಿದರು.
ರಾಜ್ಯದಲ್ಲಿಯೂ ಈಜು ಹಾಕಿ ಸೇರಿದಂತೆ ಅನೇಕ ಕ್ರೀಡೆಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳಿದ್ದು ಮುಂದಿನ ಒಲಂಪಿಕ್ ಕ್ರೀಡೆಗಳಲ್ಲಿ ದೇಶಕ್ಕೆ ಪದಕ ತರುವ ನಿರೀಕ್ಷೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಜಿಲ್ಲಾ ಸಚಿವ ಕೆ ಎಸ್ ಈಶ್ವರಪ್ಪ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಕೆ ಸಿ ನಾರಾಯಣ ಗೌಡ, ಸೂಡಾ ಅಧ್ಯಕ್ಷ ಜ್ಯೋತಿಪ್ರಕಾಶ್, ಕಾಡ ಅಧ್ಯಕ್ಷೆ ಪವಿತ್ರ ರಾಮಯ್ಯ, ಮಹಾನಗರ ಪಾಲಿಕೆ ಮೇಯರ್ ಸುವರ್ಣ ಶಂಕರ್, ಮೇಯರ್ ಸುರೇಖಾ ಮುರಳಿಧರ್, ಕ್ರೀಡಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಶಾಲಿನಿ ರಜನೀಶ್, ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂಎಲ್ ವೈಶಾಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು, ಮಹಾನಗರಪಾಲಿಕೆ ಆಯುಕ್ತ ಚಿದಾನಂದ ವಠಾರೆ, ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ್ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಅಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.