ಶಿವಮೊಗ್ಗ : ನವೆಂಬರ್ ೨೭ : ಮಲೆನಾಡಿನ ಜನರ ಆರಾಧ್ಯದೈವ ಶ್ರೀ ರೇಣುಕಾದೇವಿ ಚಂದ್ರಗುತ್ತಿ ಕ್ಷೇತ್ರದ ವಿಕಾಸಕ್ಕೆ ಅಭಿವೃದ್ಧಿ ಪ್ರಾಧಿಕಾರ ರಚನೆ, ೧೨ನೇ ಶತಮಾನದ ಪ್ರಸಿದ್ಧ ಶರಣ ಹಾಗೂ ಮೊದಲ ಸಂಸತ್ತಿನ ಮೊದಲ ಪೀಠಾಧ್ಯಕ್ಷ ಅಲ್ಲಮಪ್ರಭುದೇವರ ಜನ್ಮಸ್ಥಳ ಬಳ್ಳಿಗಾವೆ ಹಾಗೂ ಶಿವಮೊಗ್ಗ ನಗರದಲ್ಲಿ ನೂತನವಾಗಿ ಹೆಸರಿಸಲಾದ ಅಲ್ಲಮಪ್ರಭು(ಪ್ರೀಡಂ ಪಾರ್ಕ್) ಮೈದಾನವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಉದ್ದೇಶಿಸಿರುವುದಾಗಿ ರಾಜ್ಯ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಅವರು ಹೇಳಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈಗಾಗಲೇ ಸಮಾಲೋಚನೆ ನಡೆಸಿದಂತೆ ಜಿಲ್ಲೆಯ ಜಿಲ್ಲಾಧಿಕಾರಿಗಳ ಕಚೇರಿ ಕಟ್ಟಡ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಕಟ್ಟಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಕಟ್ಟಡಗಳನ್ನು ಒಂದೇ ಕಟ್ಟಡ ಸಂಕೀರ್ಣದಲ್ಲಿ ನಿರ್ಮಿಸಲು ಈಗಾಗಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯ ಹಿಂದಿನ ನಿವೇಶನವನ್ನು ಕಾಯ್ದಿರಿಸಲಾಗಿದ್ದು, ಜಿಲ್ಲೆಯ ಜನರಿಗೆ ಎಲ್ಲಾ ರೀತಿಯ ಅನುಕೂಲವಾಗುವಂತೆ ಅತ್ಯಾಧುನಿಕ ಹಾಗೂ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಲು ಮುಂದಿನ ಬಜೆಟ್‌ನಲ್ಲಿ ಅಗತ್ಯ
ಅನುದಾನ ಕಾಯ್ದಿರಿಸಲು ಮಾನ್ಯ ಮುಖ್ಯಮಂತ್ರಿಗಳನ್ನು ಕೋರಲಾಗುವುದು. ಈಗಾಗಲೇ ಈ ಸಂಬಂಧ ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಸಮಾಲೋಚಿಸಿದ್ದು, ಮುಖ್ಯಮಂತ್ರಿಗಳು ಉತ್ಸುಕರಾಗಿರುವುದಾಗಿ ತಿಳಿಸಿದ ಅವರು, ನಿರ್ಮಿಸುವ ಕಟ್ಟಡದ ವಿನ್ಯಾಸವು ಮಾದರಿ ಹಾಗೂ ಅತ್ಯಾಧುನಿಕವಾಗಿರುವಂತೆ ನೋಡಿಕೊಳ್ಳುವಂತೆ ಅವರು ಸಲಹೆ ನೀಡಿದರು.
ನಗರ ಅಲ್ಲಮಪ್ರಭು ಮೈದಾನದ ಅಭಿವೃದ್ಧಿ ಲೋಕೋಪಯೋಗಿ ಇಲಾಖೆಯು ಸುಮಾರು ೫ಕೋಟಿ ರೂ.ಗಳನ್ನು ಕಾಯ್ದಿರಿಸಿದೆ. ಈ ಅನುದಾನಕ್ಕೆ ಸಹಕಾರಿಯಾಗುವಂತೆ ಸರ್ಕಾರದಿಂದ ಇನ್ನಷ್ಟು ಅನುದಾನವನ್ನು ಬಿಡುಗಡೆ ಮಾಡುವಂತೆ ಮಾನ್ಯ ಮುಖ್ಯಮಂತ್ರಿಗಳನ್ನು ಕೋರಲಾಗುವುದು. ಮೈದಾನವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿ, ಸಲ್ಲಿಸುವಂತೆ ಅವರು ಲೋಕೋಪಯೋಗಿ ಇಲಾಖೆಯ ಅಭಿಯಂತರರಿಗೆ ಸೂಚಿಸಿದರು.
ನಗರದ ಹೊರವಲಯದಲ್ಲಿ ಆರಂಭಗೊಂಡಿರುವ ಷಾಹಿ ಗಾರ್ಮೆಂಟ್ಸ್‌ಗೆ ಭೂಮಿ ಮಂಜೂರಾತಿಯಲ್ಲಿ ನಿಯಮ ಪಾಲನೆಯಾಗದಿರುವುದು ಕಂಡುಬಂದಿದೆ. ಅಲ್ಲದೇ ಸದರಿ ಕೈಗಾರಿಕೆಯಿಂದಾಗಿ ಭಾರೀ ಪ್ರಮಾಣದ ಪರಿಸರ ಮಾಲಿನ್ಯವಾಗುತ್ತಿರುವ ಬಗ್ಗೆ ಸಾರ್ವಜನಿಕ ವಲಯದಿಂದ ದೂರುಗಳು ಕೇಳಿಬರುತ್ತಿವೆ. ಸಂಬಂಧಿಸಿದ ಇಲಾಖಾಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಕೂಡಲೇ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಸಚಿವರು ಸೂಚಿಸಿದರು.
ನಗರದಲ್ಲಿ ಫುಡ್‌ಪಾರ್ಕ್ ನಿರ್ಮಾಣಕ್ಕೆ ಈಗಾಗಲೇ ಮಂಜೂರಾತಿ ದೊರೆತಿದ್ದು, ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಿಗೆ ಸೂಚಿಸಿದ ಸಚಿವರು, ೬೬೦ಕೋಟಿ ರೂ.ಗಳ ವೆಚ್ಚದಲ್ಲಿ ಶರಾವತಿಯಿಂದ ಸೊರಬ, ಆನವಟ್ಟಿ ಮತ್ತು ಶಿರಾಳಕೊಪ್ಪ ಪಟ್ಟಣ ಪ್ರದೇಶಕ್ಕೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಕಾಮಗಾರಿಗೆ ಶೀಘ್ರ ಚಾಲನೆ ದೊರೆಯಲಿದೆ. ಅಂತೆಯೇ ಶಿಕಾರಿಪುರ ತಾಲೂಕಿನ ಅಂಜನಾಪುರ ಜಲಾಶಯದಿಂದ ಶಿಕಾರಿಪುರ ಪಟ್ಟಣದ ನಿವಾಸಿಗಳಿಗೆ ವರ್ಷಪೂರ್ತಿ ಶುದ್ಧಕುಡಿಯುವ ನೀರು ಒದಗಿಸುವುದಲ್ಲದೇ ಕೃಷಿ ಚಟುವಟಿಕೆಗಳಿಗೂ ನೀರು ಒದಗಿಸಲು ಇರುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸುವಂತೆ ಅವರು ಸೂಚಿಸಿದರು.
ಚಂದ್ರಗುತ್ತಿ ಧರ್ಮಕ್ಷೇತ್ರದ ದೇವಾಲಯದ ಸರ್ವಾಂಗೀಣ ವಿಕಾಸ ಹಾಗೂ ಪ್ರವಾಸಿತಾಣವನ್ನಾಗಿ ಪರಿವರ್ತಿಸಲು ಉದ್ದೇಶಿಸಿದ್ದು, ಅರಣ್ಯ ಇಲಾಖೆಯ ಅನುಮೋದನೆಗಾಗಿ ಕಡತ ಮಂಡಿಸಲಾಗಿದೆ. ಈ ಸಂಬಂಧ ಅರಣ್ಯ ಇಲಾಖಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಲಾಗಿದೆ. ಮುಂದಿನ ಜನವರಿ ಮೊದಲ ಮಾಸಾಂತ್ಯದೊಳಗಾಗಿ ವಿಮಾನದ ನೈಟ್ ಲ್ಯಾಂಡಿಂಗ್ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ. ಇದರಿಂದಾಗಿ ವಿಮಾನ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಲು ಸೂಚಿಸಲಾಗಿದೆ. ಮುಂದಿನ ತಿಂಗಳಲ್ಲಿ ಜನಸ್ಪಂದನ ಕಾರ್ಯಕ್ರಮವನ್ನು ಜಿಲ್ಲೆಯ ಹೊಸನಗರದಲ್ಲಿ ನಡೆಸಲು ಈಗಾಗಲೇ ನಿರ್ಣಯಿಸಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್.ಹೇಮಂತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಅಪರ ಜಿಲ್ಲಾಧಿಕಾರಿ ಸಿದ್ಧಲಿಂಗರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಉಪಸ್ಥಿತರಿದಿದ್ದರು