ಶಿವಮೊಗ್ಗ: ಕೇಂದ್ರದಲ್ಲಿ ೨೦೧೩ರಲ್ಲಿ ಡಾ.ಮನಮೋಹನ ಸಿಂಗ್ ನೇತೃತ್ವದ ಕಾಂಗ್ರೆಸ್ ಸರ್ಕಾರ ತಿದ್ದುಪಡಿ ಮಾಡಿ ಜಾರಿಗೆ ತಂದ ವಕ್ಫ್ ಕಾಯ್ದೆ ಒಂದು ಕರಾಳ ಶಾಸನವಾಗಿದ್ದು ಈಗ ಅದರ ಪೆಡಂಭೂತ ಶಿವಮೊಗ್ಗಕ್ಕೂ ವಕ್ಕರಿಸಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ ತಿಳಿಸಿದರು.


ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ವಕ್ಫ್ ಭೂತ ಈಗಾಗಲೇ ವಿಜಯಪುರ, ಕಲಬುರ್ಗಿ, ಬೆಳಗಾವಿ, ದಕ್ಷಿಣ ಕನ್ನಡ, ಉತ್ತರ ಕನ್ನಡ ಜಿಲ್ಲೆಗಳ ರೈತರ ನೆಮ್ಮದಿ ಕೆಡಿಸಿದೆ. ಈಗ ವಕ್ಫ್ ಕಾಯ್ದೆಯ ಕರಾಳ ಛಾಯೆ ಶಿವಮೊಗ್ಗಕ್ಕೂ ವಕ್ಕರಿಸಿದ್ದು, ಜಿಲ್ಲೆಯಲ್ಲಿ ೩೨ ಆಸ್ತಿಗಳು ವಕ್ಫ್ ಆಸ್ತಿಯೆಂದು ಪರಿಗಣಿಸಲು ಪ್ರಸ್ತಾವನೆಯೊಂದು ಜಿಲ್ಲಾಧಿಕಾರಿಗಳ ಕೈ ಸೇರಿದೆ. ಇದರ ವಿರುದ್ಧ ನ.೨೧ ಮತ್ತು ೨೨ರಂದು ರಾಜ್ಯಾದ್ಯಂತ ಪ್ರತಿಭಟಿಸಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ನ.೨೨ರಂದು ಡಿ.ಸಿ.ಕಚೇರಿ, ಎಲ್ಲ ತಾಲೂಕು ಕಚೇರಿಗಳ ಮುಂದೆ ಬೆಳಗಿನಿಂದ ಸಂಜೆಯವರೆಗೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದು. ಇದರಲ್ಲಿ ಮಠಾಧೀಶರು, ಸಂಸದರು, ಶಾಸಕರು, ಸಂಘ ಸಂಸ್ಥೆಯವರು, ಸಾರ್ವಜನಿಕರು ಭಾಗವಹಿಸುವರು ಎಂದು ಮಾಹಿತಿ ನೀಡಿದರು.


ರಾಜ್ಯದಲ್ಲಿ ರೈತರ, ಶಾಲಾ ಕಾಲೇಜು, ಮಠ ಮಾನ್ಯಗಳ ಆಸ್ತಿಯನ್ನು ವಕ್ಫ್ ಆಸ್ತಿಯನ್ನಾಗಿಸುವಲ್ಲಿ ವಸತಿ ಸಚಿವ ಜಮೀರ್ ಅಹಮ್ಮದ್ ಅವರ ಪಾತ್ರ ಪ್ರಮುಖವಾಗಿದೆ. ಜಿಲ್ಲಾವಾರು ಪ್ರಗತಿ ಪರಿಶೀಲನಾ ಸಭೆಯಲ್ಲೂ ಜಮೀರ್ ಅವರು ಅಧಿಕಾರಿಗಳಿಗೆ ಈ ಕುರಿತು ತಾಕೀತು ಮಾಡಿದ್ದಾರೆ. ರೈತ ವಿರೋಧಿ, ಜನ ವಿರೋಧಿ ಸಚಿವ ಜಮೀರ್ ಅಹಮ್ಮದ್ ಅವರನ್ನು ತಕ್ಷಣ ಸಂಪುಟದಿಂದ ವಜಾ ಮಾಡಬೇಕೆಂದು ಅವರು ಒತ್ತಾಯಿಸಿದರು.
ಬರುವ ವಿಧಾನಮಂಡಲದ ಚಳಿಗಾಲದ ಅಧಿವೇಶನದಲ್ಲಿ ವಕ್ಫ್ ಮಸೂದೆಗೆ ಇನ್ನ? ಶಕ್ತಿ ತುಂಬಲು ಅದಕ್ಕೆ ಶರವೇಗ ಸಿಕ್ಕಿದೆ ಎಂದು ಆರೋಪಿಸಿದರು.


ಎರಡನೇ ಹಂತದ ಹೋರಾಟವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ನೇತೃತ್ವದ ಮೂರು ತಂಡ ರಚನೆಯಾಗಿದ್ದು, ಅವರು ಕೂಡ ರಾಜ್ಯಾದ್ಯಂತ ಸಂಚರಿಸಿ ವಕ್ಫ್ ಕಾಯ್ದೆ ವಿರುದ್ಧ ಜನ ಜಾಗೃತಿ ಮೂಡಿಸಲಿದ್ದಾರೆ ಮತ್ತು ಸ್ಥಳಕ್ಕೆ ತೆರಳಿ ಅಹವಾಲು ಸ್ವೀಕರಿಸಲಿದ್ದಾರೆ. ಜಮೀರ್ ಅಹಮ್ಮದ್ ಅವರನ್ನು ಸಂಪುಟದಿಂದ ಕೈಬಿಡಬೇಕು. ವಕ್ಫ್ ಪರಮಾಧಿಕಾರವನ್ನು ಹಿಂಪಡೆಯಬೇಕು ಮತ್ತು ನಿಯಂತ್ರಣ ಹಾಕಬೇಕು ಎಂದು ಆಗ್ರಹಿಸಲಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸದ ಬಿ.ವೈ. ರಾಘವೇಂದ್ರ, ಪ್ರಮುಖರಾದ ಜ್ಞಾನೇಶ್ವರ್, ಮೋಹನ್ ರೆಡ್ಡಿ, ಶಿವರಾಜ್, ಹರಿಕೃಷ್ಣ, ಸಂತೋಷ್ ಬಳ್ಳೆಕೆರೆ ಜಗದೀಶ್, ಪ್ರಭು, ಚಂದ್ರಶೇಖರ್, ಹರೀಶ್ ಇತರರು ಇದ್ದರು

By admin

ನಿಮ್ಮದೊಂದು ಉತ್ತರ

error: Content is protected !!