ಶಿವಮೊಗ್ಗ, ಅ೨೫:
ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತದ ಶಿವಮೊಗ್ಗ ನಗರ ವ್ಯಾಪ್ತಿಯ ನೌಕರರ ಸಂಘದ ಚುನಾವಣೆ ಕಾನೂನು ಬಾಹಿರವಾಗಿ ನಡೆದಿದ್ದು, ಮತ ಎಣಿಕೆಯಲ್ಲಿ ತಿರಸ್ಕೃತಗೊಂಡ ಬ್ಯಾಲೆಟ್ ಪೇಪರ್‌ನ ಎಣಿಕೆ ಹಿನ್ನೆಲೆಯಲ್ಲಿ ನಮಗೆ ಅನ್ಯಾಯವಾಗಿದೆ ಎಂದು ಹಲವು ಚುನಾವಣಾ ಅಭ್ಯರ್ಥಿಗಳು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇವೆ ಎಂದು ಯುವಶಕ್ತಿ ತಂಡ ಗಂಭೀರವಾಗಿ ಆರೋಪಿಸಿದೆ.


ನಿನ್ನೆ ನಡೆದ ಚುನಾವಣೆಯಲ್ಲಿ ಪ್ರಾಥಮಿಕ ಸಮಿತಿಗೆ ಸಂಬಂಧಪಟ್ಟಂತೆ ಶಿವಮೊಗ್ಗ ನಗರದಲ್ಲಿ ಒಟ್ಟು ೧೪ ಅಭ್ಯರ್ಥಿಗಳು ಸ್ಪರ್ಧಿಸಿದ್ದು ಇದರಲ್ಲಿ ಯುವಶಕ್ತಿ ಬಣಕ್ಕೆ ಒಟ್ಟಾರೆಯಾಗಿ ಅನ್ಯಾಯವಾಗಿದೆ ಎಂದು ಆರೋಪಿಸಲಾಗಿದೆ.
ನಿನ್ನೆ ನಡೆದ ಚುನಾವಣೆಯಲ್ಲಿ ನಮ್ಮ ಬಣದ ಎಲ್ಲಾ ಸದಸ್ಯರು ಉತ್ತಮ ಮತಗಳನ್ನು ಪಡೆದಿದ್ದು, ಇದರಲ್ಲಿ ನಮ್ಮ ತಂಡದ ಹೆಚ್.ಬಿ.ಮಂಜುನಾಥ್ ಹಾಗೂ ಮಹೇಶ್ ಕುಮಾರ್ ಡಿ.ಎಂ. ಅವರ ವಿರುದ್ದದ ಪೈಪೋಟಿಯಲ್ಲಿ ಇಬ್ಬರಿಗೂ ಸಮಾನ ಮತಗಳು ಅಂದರೆ ೯೫ಮತಗಳು ಲಭಿಸಿದ್ದವು.


ನಂತರದ ಪ್ರಕ್ರಿಯೆಯಂತೆ ಲಾಟರಿ ಎತ್ತುವ ಮೂಲಕ ಫಲಿತಾಂಶವನ್ನು ನಿರ್ಣಯಿಸಬೇಕಿತ್ತು. ಆದರೆ ಕೆಲವರ ಪ್ರಚೋದನೆಯಿಂದ ಚುನಾವಣಾಧಿಕಾರಿಗಳು ಮತ್ತೋರ್ವ ಚುನಾವಣಾ ಅಧಿಕಾರಿಯ ಮಾತು ಕೇಳಿ ಮರು ಎಣಿಕೆಗೆ ಮುಂದಾದರು.
ಮೊದಲ ಹಂತದ ಮತ ಎಣಿಕೆಯಲ್ಲಿ ಮಂಜುನಾಥ್ ಅವರಿಗೆ ಬಿದ್ದಿದ್ದ ೩ ಮತಗಳನ್ನು ೨ನೇ ಹಂತದ ಮತ ಎಣಿಕೆಯಲ್ಲಿ ತಿರಸ್ಕೃತ ಎಂದು ಘೋಷಿಸಲಾಯಿತು. ಏಕೆಂದರೆ ಮತದಾರರು ಅಭ್ಯರ್ಥಿಯ ಕ್ರಮ ಸಂಖ್ಯೆಯ ಬಳಿ ಗುರುತನ್ನು ಮಾಡಿದ್ದು, ಅವುಗಳು ಮೊದಲ ಏಣಿಕೆಯಲ್ಲಿ ಸರಿಯಾಗಿದ್ದರೆ. ೨ನೇ ಎಣಿಕೆಯಲ್ಲಿ ಹೇಗೆ ತಪ್ಪು ಎಂಬುದು ನಮ್ಮ ಗಂಭೀರ ಪ್ರಶ್ನೆ ಎಂದಿದ್ದಾರೆ.


ಒಟ್ಟಾರೆಯಾಗಿ ಚುನಾವಣೆಯ ನಿಯಮದ ಪ್ರಕಾರ ಎಲ್ಲಿಯೂ ಮತವನ್ನು ಇಂತಹ ಕಡೆಯೇ ಹಾಕಬೇಕೆಂಬ ನಿಬಂಧನೆ ಇರುವುದಿಲ್ಲ. ಅಂತಹ ಪರಿಸ್ಥಿತಿ ಅಥವಾ ನಿಬಂಧನೆ ಇದ್ದಿದ್ದರೆ, ಮೊದಲ ಹಂತದಲ್ಲೇ ಈ ಮತಗಳು ತಿರಸ್ಕೃತವಾಗಬೇಕಿತ್ತು ಎಂಬುದು ಅವರ ಅಳಲಾಗಿದೆ. ಈ ಸಂಬಂಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಹಾಗೂ ನ್ಯಾಯಯುತವಾಗಿ ಚುನಾವಣೆಯನ್ನು ಮತ್ತೊಮ್ಮೆ ನಡೆಸಬೇಕೆಂದು ಒತ್ತಾಯಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!