ಶಿವಮೊಗ್ಗ : ಅಕ್ಟೋಬರ್ ೦೭ : ಕಿತ್ತೂರು ರಾಣಿ ವೀರಚೆನ್ನಮ್ಮಾಜಿಯವರು ಅಂದು ನಾಡನ್ನು ಉಳಿಸಿಕೊಳ್ಳಲು ಬ್ರಿಟೀಷರ ವಿರುದ್ಧ ಸೆಣಸಾಡಿ ವೀರೋಚಿತ ಗೆಲುವನ್ನು ಸಾಧಿಸಿದ ೨೦೦ನೇ ವರ್ಷದ ಸಂಭ್ರಮ ನಾಡಿನೆಲ್ಲೆಡೆ ಅತೀವ

ಸಂಭ್ರಮ ಸಡಗರಗಳಿಂದ ಆಚರಿಸುವ ಮೂಲಕ ಅವರ ಹೋರಾಟದ ದಿನಗಳನ್ನು ನೆನಪಿಸಿಕೊಂಡು ಇಂದಿನ ಪೀಳಿಗೆಗೆ ಪರಿಚಯಿಸುತ್ತಿರುವುದು ಅತ್ಯಂತ ಸಂತಸದ ಸಂಗತಿ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಹೇಳಿದರು.


ಅವರು ಇಂದು ಐತಿಹಾಸಿಕ ಕಿತ್ತೂರು ಉತ್ಸವ-೨೦೨೪ರ ವಿಜಯಜ್ಯೋತಿ ರಥಯಾತ್ರೆಯು ಇಂದು ಶಿವಮೊಗ್ಗಕ್ಕೆ ಆಗಮಿಸಿದ ಸಂದರ್ಭದಲ್ಲಿ ಜಿಲ್ಲಾಡಳಿತದ ಪರವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಆತ್ಮೀಯವಾಗಿ ಸ್ವಾಗತಿಸಿ, ರಾಣಿ ಚೆನ್ನಮ್ಮಾಜಿಯವರ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಿದ್ದರು. ಈ ರಥಯಾತ್ರೆಯು ನಾಡಿನೆಲ್ಲೆಡೆ ಸಂಚರಿಸಿ, ಜನಸಾಮಾನ್ಯರಲ್ಲಿ ರಾಣಿಚೆನ್ನಮ್ಮಾಜಿಯವರ ಸಾಹಸಮಯ

ಯಶೋಗಾಥೆ ಅವರ ಜೀವನ ಚರಿತ್ರೆಯನ್ನು ತಿಳಿಸುವ ಹಾಗೂ ಅವರ ಸಂದೇಶವನ್ನು ಮನೆಮನೆಗಳಿಗೆ ತಲುಪಿಸುವ ಕಾರ್ಯ ನಡೆಯಲಿದೆ ಎಂದರು.


ಕಿತ್ತೂರು ರಾಣಿ ಅವರನ್ನು ನಮ್ಮ ನಾಡಿನ ಸ್ವಾಭಿಮಾನದ ಸಂಕೇತವಾಗಿ ಗುರುತಿಸಲಾಗುತ್ತಿದೆ. ಬ್ರಿಟೀಷರು ಜಾರಿಗೆ ತಂದಿದ್ದ ತೆರಿಗೆ ನೀತಿ ಮತ್ತು ದತ್ತುಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ವಿರೋಧಿಸಿ, ಬ್ರಿಟೀಷರ ಈ ನೀತಿಯನ್ನು ಈ ದೇಶದ ಯಾವುದೇ ಪ್ರಜೆಗಳು ಅನುಸರಿಸದಂತೆ

ಸೂಚನೆ ನೀಡಿದ್ದರು ಎಂದ ಅವರು, ಸಂಗೊಳ್ಳಿ ರಾಯಣ್ಣನಂತಹ ಅಸಾಧಾರಣ ವ್ಯಕ್ತಿತ್ವ ಹೊಂದಿದ್ದ ಪರಾಕ್ರಮಿ ಚೆನ್ನಮ್ಮಾಜಿಯವರ ಸೈನ್ಯದಲ್ಲಿ ಇದ್ದರು ಎಂದವರು ನುಡಿದರು.


೨೦೦ವರ್ಷ ತುಂಬಿದ ಬ್ರಿಟೀಷರ ವಿರುದ್ಧದ ವಿಜಯೋತ್ಸವ ಹಾಗೂ ರಾಣಿ ಚೆನ್ನಮ್ಮಾಜಿಯವರ ನಾಡಭಕ್ತಿ ಮತ್ತು ಸ್ವಾಭಿಮಾನದ ಪ್ರತೀಕವಾಗಿ ಅಕ್ಟೋಬರ್ ೨೩ರಿಂದ ೩ದಿನಗಳ ಕಾಲ ಕಿತ್ತೂರಿನಲ್ಲಿ ಕಿತ್ತೂರು ವಿಜಯೋತ್ಸವ ನಡೆಯಲಿದೆ. ನಿನ್ನೆ ಆಗುಂಬೆಯಿಂದ ಹೊರಡ ಈ ರಥಯಾತ್ರೆಯು ಶಿವಮೊಗ್ಗ ನಗರ ತಲುಪಿ, ಇಂದು ಶಿವಮೊಗ್ಗದಿಂದ ಚಿಕ್ಕಮಗಳೂರು ಜಿಲ್ಲೆಗೆ ತಲುಪಲಿದೆ.


ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಉಮೇಶ್ ಹೆಚ್. ವೀರಶೈವ ಮಹಾಸಭಾದ ಜಿಲ್ಲಾಧ್ಯಕ್ಷ ರುದ್ರಮುನಿ ಸಜ್ಜನ್, ಕರ್ನಾಟಕ ಸಂಘದ ಅಧ್ಯಕ್ಷ ಎಂ.ಎನ್.ಸುಂದರರಾಜ್

ಸಿದ್ದಪ್ಪ, ಚಂದ್ರಶೇಖರ್ ತಲಗಿಹಾಳ, ಮತ್ತಿತರರು ಉಪಸ್ಥಿತರಿದ್ದರು. ವಾದ್ಯಮೇಳದೊಂದಿಗೆ ಸ್ವಾಗತಿಸಿ, ಪುಷ್ಪನಮನ ಸಲ್ಲಿಸಿ, ಬೀಳ್ಕೊಡಲಾಯಿತು.

By admin

ನಿಮ್ಮದೊಂದು ಉತ್ತರ

error: Content is protected !!