ಶಿವಮೊಗ್ಗ,ಆ.೯: ಶಿವಮೊಗ್ಗ ಮಹಾನಗರ ಪಾಲಿಕೆಗೆ ತಕ್ಷಣ ಚುನಾವಣೆ ನಡೆಸುವಂತೆ ನಿನ್ನೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ರಾಜ್ಯ ಚುನಾವಣಾ ಆಯೋಗದ ನಡೆಯನ್ನು ಶಿವಮೊಗ್ಗ ನಗರ ಜೆಡಿಎಸ್ ಘಟಕ ಸ್ವಾಗತಿಸಿದೆ.
ಕಳೆದ ಹಲವಾರು ತಿಂಗಳುಗಳಿಂದ ಪಾಲಿಕೆಯಲ್ಲಿ ಚುನಾಯಿತಾ ಪ್ರತಿನಿಧಿಗಳಿಲ್ಲದ ಕಾರಣ ನಗರಾಡಳಿತ ಸಂಪೂರ್ಣ ನೆಲಕಚ್ಚಿದೆ. ಜನಸಾಮಾನ್ಯರ ಕಷ್ಟ ಕಾರ್ಪಣ್ಯಗಳನ್ನು ಕೇಳುವವರೇ ಇಲ್ಲದಂತಾಗಿದೆ ಎಂದು ನಗರ ಜೆಡಿಎಸ್ ಘಟಕದ ಅಧ್ಯಕ್ಷ ದೀಪಕ್ ಸಿಂಗ್ ಪತ್ರಿಕಾಭಟನೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗ ನಗರದಲ್ಲಿ ಸ್ವಚ್ಛತಾ ಕಾರ್ಯ ಸರಿಯಾಗಿ ನಡೆಯದ ಕಾರಣ ಎಲ್ಲೆಡೆ ಡೆಂಗ್ಯೂ, ಮಲೇರಿಯಾ ಸೋಂಕು ಹೆಚ್ಚಾಗಿದೆ. ಕುಡಿಯುವ ನೀರಿನ ವ್ಯವಸ್ಥೆ ಸರಿಯಾಗಿ ನಿರ್ವಾಹಣೆ ಆಗದೆ ಹಲವೆಡೆ ನಲ್ಲಿ ನೀರಿನೊಂದಿಗೆ
ಮಲಿನ ನೀರು ಸೇರುತ್ತಿರುವ ಕಾರಣ ನಗರದಲ್ಲಿ ಜಾಂಡಿಸ್ ನಿಂದ ಬಳಲುತ್ತಿರುವವರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿದೆ. ನಗರದ ಅಭಿವೃದ್ಧಿ ಕೆಲಸವೂ ಸಹ ಕುಂಟಿತಗೊಂಡಿದೆ. ಬೀದಿ ದೀಪಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂದು ದೂರಿದ್ದಾರೆ.
ಪಾಲಿಕೆ ಅಧಿಕಾರಿಗಳಿಗೆ ಸಮಸ್ಯೆಗಳ ಬಗ್ಗೆ ಗಮನಕ್ಕೆ ತಂದರೂ ಸಹ ಕೆಲಸಗಳು ಆಗುತ್ತಿಲ್ಲ ಎಂದು ಸಾರ್ವಜನಿಕರು ನಿತ್ಯ ದೂರುವಂತಾಗಿದೆ. ಪಾಲಿಕೆಯಲ್ಲಿ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ ಕೇಂದ್ರ ಸರ್ಕಾರದ ಅನುಧಾನಗಳು
ಸಹ ಶಿವಮೊಗ್ಗ ನಗರಕ್ಕೆ ಸಿಗದಂತಾಗಿದೆ. ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಹಾಗೂ ರಾಜ್ಯ ಚುನಾವಣಾ ಆಯೋಗದ ಸೂಚನೆಯಂತೆ ರಾಜ್ಯ ಸರ್ಕಾರ ಶಿವಮೊಗ್ಗ ಮಹಾನಗರ ಪಾಲಿಕೆಗೆ ಶೀಘ್ರ ಚುನಾವಣೆ ನಡೆಸುವ
ನಿಟ್ಟಿನಲ್ಲಿ ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿರುವ ಅವರು ನ್ಯಾಯಾಲಯ ಅನುಮತಿ ನೀಡಿದರೆ ೬ ತಿಂಗಳುಗಳೊಳಗೆ ಚುನಾವಣೆ ನಡೆಸಲಾಗು ವುದು ಎಂದು ಆಯೋಗ ತಿಳಿಸಿರುವುದಕ್ಕೆ ಸ್ವಾಗತಿಸಿದ್ದಾರೆ.