ಶಿವಮೊಗ್ಗ,ಜು೧೬: ಜಿಲ್ಲೆಯಲ್ಲಿ ಸಂಪೂರ್ಣ ಕಾಡು ನಾಶವಾಗುತ್ತಿದೆ. ಮಲೆನಾಡು ಭಾಗದಲ್ಲಿ ಬಿಸಿಲಿನ ತಾಪ ೪೦ರಿಂದ ೪೨ ಡಿಗ್ರಿ ತಲುಪುತ್ತಿದೆ. ಇದನ್ನು ತಪ್ಪಿಸಲು ಹಸೀರಿಕರಣಕ್ಕೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಜಿಲ್ಲಾ ಶಾಖೆ, ಶಿವಮೊಗ್ಗ ಪ್ರೆಸ್‌ಕ್ಲಬ್, ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾಡಳಿತ ಇವರ ಸಂಯುಕ್ತಾಶ್ರಯದಲ್ಲಿ ನಗರದ ವಿವಿಧ ಬಡಾವಣೆಗಳಲ್ಲಿ ಒಂದು ಸಾವಿರ ಸಸಿ ನೆಡುವ ಕಾರ್ಯಕ್ರಮಕ್ಕೆ ಇಂದು ಸೋಮಿನಕೊಪ್ಪದಲ್ಲಿರುವ ನ್ಯಾಯಾಂಗ ಬಡಾವಣೆಯಲ್ಲಿ ಹಿರಿಯ ರಂಗ ಕರ್ಮಿ ಕೆ.ವಿ.ಸುಬ್ಬಣ್ಣನವರ ಸಂಸ್ಮರಣೆಯಲ್ಲಿ ಸಸಿ ನೆಟ್ಟು ನಂತರ ಅವರು ಮಾತನಾಡಿದರು.

ಕಾಡು ಮತ್ತು ಪ್ರಕೃತಿ ಮೇಲೆ ಇಂದು ದಬ್ಬಾಳಿಕೆ ನಡೆಯುತ್ತಿದೆ. ಪ್ರಕೃತಿ ಮುನಿಸನ್ನು ತಣ್ಣಗೆ ಮಾಡಬೇಕಾಗಿದೆ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ರಕೃತಿ ವಿಕೋಪಗಳು ಹೆಚ್ಚಾಗಲಿವೆ.  ಎಲ್ಲಾ ಇಲಾಖೆಗಳು ಬೇರೆ ಬೇರೆ ಮಾಡುವ ಅಭಿವೃದ್ಧಿ ಕಾರ್ಯದಿಂದ ಕೆಲವು ಸಂದರ್ಭದಲ್ಲಿ ಮರಗಳನ್ನು ಕಡಿಯಲೇಬೇಕಾಗುತ್ತದೆ. ಇದರಿಂದ ಬಿಸಿಲಿನ ತಾಪ ಹೆಚ್ಚಾಗುತ್ತದೆ. ದೇಶ ಮತ್ತು ರಾಜ್ಯ ಉಳಿವಿಗಾಗಿ ಇಂದು ನಾವು ಕಾಡನ್ನು ಬೆಳೆಸಲು ಹೆಚ್ಚು ಒತ್ತು ನೀಡಬೇಕಾಗಿದೆ ಎಂದರು.

ಶಿವಮೊಗ್ಗ ನಗರ ವೇಗವಾಗಿ ಬೆಳೆಯುತ್ತಿದೆ. ಬಡವರಿಗೆ ನಿವೇಶನವನ್ನು ಕಡಿಮೆ ದರದಲ್ಲಿ ನೀಡುವಂತಾಗಬೇಕು. ಕೆಲವೊಮ್ಮೆ ಕಾನೂನಿನ ಪ್ರಕಾರ ಇದನ್ನು ನೀಡಲಾಗುತ್ತಿಲ್ಲ. ಸೂಡಾದಿಂದ ೧೪ವರ್ಷಗಳ ಹಿಂದೆಯೇ ೧೦೪ ಎಕರೆ ಜಮೀನನ್ನು ಗೋಪಿಶೆಟ್ಟಿಕೊಪ್ಪದಲ್ಲಿ ವಶಪಡಿಸಿಕೊಳ್ಳಲಾಗಿತ್ತು. ಅಲ್ಲಿನ ಕೆಲವು ರೈತರು ಜಮೀನು ಕೊಡಲು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರ ಮನವೊಲಿಸುವ ಪ್ರಯತ್ನ ನಡೆಯುತ್ತಿದೆ ಎಂದರು.

ಆದರೆ ರೈತರಿಗೆ ಮಾರುಕಟ್ಟೆಯ ದರದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ಹಾಗಾಗಿ ನಿವೇಶನ ಮಾಡುವುದೇ ಕಷ್ಟವಾಗಿದೆ. ಗೋಪಿಶೆಟ್ಟಿಕೊಪ್ಪದಲ್ಲಿ ಡಿನೋಟಿಫೈ ಮಾಡುವ ಹುನ್ಬಾರ ನಡೆದಿದೆ. ಅದನ್ನು ತಡೆಹಿಡಿಯುವಂತೆ ಸರ್ಕಾರಕ್ಕೆ ಡಿನೋಟಿ ಫೈ ಮಾಡದಂತೆ ಪತ್ರ ಬರೆಯಲಾಗಿದೆ. ಊರುಗಡೂರಿನಲ್ಲಿ ನಾಲ್ಕು ಎಕರೆ ಜಾಗದಲ್ಲಿ ಶೀಘ್ರವೇ ನಿವೇಶನ ಹಂಚಲು ಯೋಚಿಸಲಾಗಿದೆ. ಅದೇ ರೀತಿ ಸೋಮಿನಕೊಪ್ಪದಲ್ಲಿ ಎರಡು ಎಕರೆಯಲ್ಲಿ ಮತ್ತೆರಡು ಅಪಾರ್ಟ್‌ಮೆಂಟ್ ನಿರ್ಮಿಸಲು ಯೋಚಿಸಲಾಗಿದೆ ಎಂದರು.

ಸೂಡಾ ಆಯುಕ್ತ ವಿಶ್ವನಾಥ್ ಮುದ್ದಜ್ಜಿ, ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ ಕಾರ್ಯದರ್ಶಿ ಪಾರ್ವತಮ್ಮ, ಶಿವಮೊಗ್ಗ ಟ್ರಸ್ಟ್  ಕಾರ್ಯದರ್ಶಿ ನಾಗರಾಜ್ ನೆರಿಗೆ, ಹಿರಿಯ ಪತ್ರಕರ್ತರಾದ ಗೋಪಾಲ ಯಡಗೆರೆ, ಶ್ರೀಕಾಂತ್ ಕಾಮತ್, ಮಾರ್ತಾಧಿಕಾರಿ ಮಾರುತಿ, ಸಂಘದ ಉಪಾಧ್ಯಕ್ಷರಾದ ವೈದ್ಯನಾಥ್, ಹಾಲಸ್ವಾಮಿ, ನಗರ ಕಾರ್ಯದರ್ಶಿ ಕೆ.ಆರ್.ಸೋಮನಾಥ್ ಉಪಸ್ಥಿತರಿದ್ದರು.  

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಸಂಘದ ಜಿಲ್ಲಾ ಕಾರ್ಯದರ್ಶಿ ವಿ.ಟಿ.ಅರುಣ್ ಸ್ವಾಗತಿಸಿದರು. ಉಪಾಧ್ಯಕ್ಷ ದೀಪಕ್ ಸಾಗರ್ ನಿರೂಪಿಸಿದರು.

By admin

ನಿಮ್ಮದೊಂದು ಉತ್ತರ

error: Content is protected !!