ಶಿವಮೊಗ್ಗ,ಜು.4: ವಿದ್ಯಾರ್ಥಿಗಳ ಹಾಸ್ಟೆಲ್ ಪ್ರವೇಶಾತಿ ಆಯ್ಕೆ ಪ್ರಕ್ರಿಯೆಯಲ್ಲಿ ವಿಳಂಬ ಹಾಗೂ ವಿದ್ಯಾರ್ಥಿ ವೇತನವನ್ನು ನೀಡದ ರಾಜ್ಯ ಸರ್ಕಾರದ ವಿರುದ್ಧ ಶಿವಮೊಗ್ಗ ನಗರ ಯುವ ಜನತಾದಳ ಇಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ಗ್ರಾಮೀಣ ಭಾಗದಿಂದ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣ ಪಡೆಯುವ ಆಶಯದಿಂದ ನಗರಕ್ಕೆ ಬರುತ್ತಾರೆ. ಆ ವಿದ್ಯಾರ್ಥಿಗಳಿಗೆ ಸರ್ಕಾರ ಮೂಲಭೂತ ಸೌಲಭ್ಯ ಒದಗಿಸುವುದು ಆದ್ಯ ಕರ್ತವ್ಯವಾಗಿದ್ದು, ರಾಜ್ಯದಲ್ಲಿ ಕಾಲೇಜು ಮತ್ತು ಪ್ರೌಢಶಾಲೆಗಳು ಪ್ರಾರಂಭವಾಗಿ ಮೂರು ತಿಂಗಳವರೆಗೆ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿ ಸಿಗುತ್ತಿಲ್ಲ.
ಈಗ ಸೆಪ್ಟೆಂಬರ್‍ವರೆಗೆ ಪ್ರವೇಶಾತಿ ಸಿಗುವುದು ವಿಳಂಬವಾಗುವ ಸಾಧ್ಯತೆ ಇದೆ. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಕೂಡಲೇ ಹಾಸ್ಟೆಲ್‍ಗೆ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಆಯ್ಕೆ ಪ್ರಕ್ರಿಯೆಯನ್ನು ತಕ್ಷಣವೇ ಪೂರ್ಣಗೊಳಿಸಿ ಪ್ರವೇಶಾತಿ ಕಲ್ಪಿಸಬೇಕು ಎಂದು ಯುವ ಜನತಾದಳ ಆಗ್ರಹಿಸಿದೆ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಕೇಂದ್ರದ ವಸತಿ ನಿಲಯಗಳಲ್ಲಿ ಪ್ರವೇಶಾತಿ ಕಷ್ಟಕರವಾಗಿದೆ. ಹಾಸ್ಟೆಲ್‍ಗಳ ಸಂಖ್ಯೆಯನ್ನು ಸರ್ಕಾರ ಹೆಚ್ಚಳ ಮಾಡಬೇಕು. ಈಗಿರುವ ಹಾಸ್ಟೆಲ್‍ಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಬೇಕು. ವಿದ್ಯಾರ್ಥಿ ವೇತನವನ್ನೇ ಶಿಕ್ಷಣ ಪಡೆಯುತ್ತಿರುವ ಲಕ್ಷಾಂತರ ವಿದ್ಯಾರ್ಥಿಗಳಿಗೆ ಕಳೆದ ವರ್ಷದ ವಿದ್ಯಾರ್ಥಿ ವೇತನ ಸರ್ಕಾರದಿಂದ ಜಮೆಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ.
ಕಾರ್ಮಿಕರ ಮಕ್ಕಳ ವಿದ್ಯಾರ್ಥಿ ವೇತನವನ್ನು ಕಡಿತಗೊಳಿಸಿರುವುದು ವಿದ್ಯಾಸಿರಿ ವಿದ್ಯಾರ್ಥಿ ವೇತನ ಜಮೆಯಾಗದೇ ಇರುವುದು, ರೈತ ವಿದ್ಯಾನಿಧಿಯನ್ನು ರದ್ದುಗೊಳಿಸಿರುವುದು ಸೂಕ್ತ ಸಂದರ್ಭದಲ್ಲಿ ವಿದ್ಯಾರ್ಥಿ ವೇತನ ಜಮೆ ಮಾಡದೇ ವಿದ್ಯಾರ್ಥಿ ವಿರೋಧಿ ನೀತಿಯನ್ನು ಅನುಸರಿಸುತ್ತಿರುವ ಸರ್ಕಾರ ಮತ್ತು ಸಂಬಂಧಪಟ್ಟ ಸಚಿವರು ಕೂಡಲೇ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿ ಖಾತೆಗಳಿಗೆ ಜಮೆ ಮಾಡಬೇಕು ಎಂದು ನಗರ ಯುವ ಜನತಾದಳ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ನಗರ ಯುವ ಜನತಾದಳ ಅಧ್ಯಕ್ಷರಾದ ಸಂಜಯ್ ಕಶ್ಯಪ್, ಜಿಲ್ಲಾಧ್ಯಕ್ಷ ಮಧುಕುಮಾರ್, ಕಾರ್ಯಾಧ್ಯಕ್ಷ ಎನ್.ಎಲ್.ನಿಖಿಲ್ ಮತ್ತಿತರರು ಇದ್ದರು.