ಶಿವಮೊಗ್ಗ: ಯಾವುದೇ ವ್ಯಕ್ತಿಯ ಬದುಕು ಅವರ ಸೇವೆಯ ಮೂಲಕ ಜೀವಂತವಾಗಿರುತ್ತದೆ ಇದಕ್ಕೆ ಸಾಕ್ಷಿಯಾಗಿ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನ ನಿರ್ದೇಶಕ ನಿವೃತ್ತ ಅಭಿಯಂತರ ಅನಂತ ಕೃಷ್ಣಮೂರ್ತಿ ನಿಲ್ಲುತ್ತಾರೆ ಎಂದು ಆದಿಚುಂಚನಗಿರಿ
ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ ಹೇಳಿದರು. ಅವರು ಬುಧವಾರ ಶರಾವತಿ ನಗರದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ
ಶ್ರೀ ಆದಿಚುಂಚನಗಿರಿ ಮಹಾಸಂಸನ ಮಠ ಶಿವಮೊಗ್ಗ ಶಾಖೆ ಹಾಗೂ ನಗರದ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸರಳ ಸಜ್ಜನಿಕೆಗೆ ನಿಜವಾದ ವ್ಯಕ್ತಿ ಅಂದರೆ ಅನಂತಕೃಷ್ಣಮೂರ್ತಿ ಅವರು ಶಿಸ್ತು ಹಾಗೂ ಸಮಯಪ್ರಜ್ಞೆ ಮತ್ತು ಕಾರ್ಯಕ್ಷಮತೆ ಅವರ ಸಾಧಕ ಮನಸ್ಸನ್ನು ಜಾಗೃತಗೊಳಿಸಿತ್ತು. ಜಾತಿಯಲ್ಲಿ ಒಕ್ಕಲಿಗರಾದರೂ, ಯಾವುದೇ ಕಾರಣಕ್ಕೂ ಜಾತಿ ಮತ ಧರ್ಮವನ್ನು ಮೀರಿ ನಿಶ್ವಾರ್ಥ ಸೇವೆ ಸಲ್ಲಿಸಿದ ಅನಂತ ಕೃಷ್ಣಮೂರ್ತಿ ಅವರ ಕಾರ್ಯ ಮೆಚ್ಚುವಂತದ್ದು ಎಂದು ಹೇಳಿದರು. ೩೩ ವರ್ಷಗಳಿಂದ ನಮ್ಮ ಮತ್ತು ಅವರ ನಡುವೆ ಒಳ್ಳೆಯ ಬಾಂಧವ್ಯವಿತ್ತು ಎಂದು ಅನಂತಕೃಷ್ಣಮೂರ್ತಿ ಅವರ ವ್ಯಕ್ತಿತ್ವವನ್ನು ಸ್ಮರಿಸಿದರು.
ಅನಂತ ಕೃಷ್ಣಮೂರ್ತಿ ಅವರ ಆತ್ಮಕ್ಕೆ ಭಗವಂತನು ಚಿರಶಾಂತಿ ನೀಡಲಿ ಅವರ ಆದರ್ಶಗಳು ಎಲ್ಲರಿಗೂ ಮಾದರಿಯಾಗಿ ದಾರಿದೀಪವಾಗಲಿ, ಅವರ ಅಗಲಿಕೆ ನೋವನ್ನು ಸಹಿಸುವ ಶಕ್ತಿಯನ್ನು ಭಗವಂತನು ಅವರ ಕುಟುಂಬಕ್ಕೆ ನೀಡಲಿ ಎಂದು ಪ್ರಾರ್ಥಿಸಿದರು.
ವಿಧಾನ ಪರಿಷತ್ ಸದಸ್ಯರಾದ ಎಸ್.ಎಲ್. ಬೋಜೇಗೌಡರು ಮಾತನಾಡಿ, ನಿಷ್ಠೆ, ಪ್ರಾಮಾಣಿಕತೆ, ಸರಳ ಜೀವನ ಮತ್ತು ವ್ಯಕ್ತಿತ್ವದ ಅನಂತ ಕೃಷ್ಣಮೂರ್ತಿ ಎಲ್ಲರಿಗೆ ಮಾದರಿಯಾಗಿದ್ದರು ಎಂದು ಹೇಳಿದರು. ಖ್ಯಾತ ಮನೋವೈದ್ಯ ಡಾ.ಕೆ.ಆರ್.ಶ್ರೀಧರ್, ಬಾಲ್ಯದ ಗೆಳೆಯ
ಉಮೇಶ್ ,ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಿ.ಮಂಜುನಾಥ್, ಶಿಕ್ಷಣ ಟ್ರಸ್ಟ್ನ ಸಲಹೆಗಾರರಾದ ವಿಜಯವಾಮನ ಮತ್ತಿತರರು ಮಾತನಾಡಿ ಅನಂತಕೃಷ್ಣಮೂರ್ತಿ ಅವರ ವ್ಯಕ್ತಿತ್ವ ಮತ್ತು ಒಡನಾಟವನ್ನು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಸ್ನೇಹಿತರು ಹಾಜರಿದ್ದರು. ಡಾ.ವಿವೇಕ್ ಅವರು ಸ್ವಾಗತಿಸಿದರು.