ಶಿವಮೊಗ್ಗ,ಏ.: ಗೀತಾ ಶಿವರಾಜ್ ಕುಮಾರ್ ಅವರು ಅತ್ಯಂತ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಹಾಗೂ ನಗರಸಭೆ ಮಾಜಿ ಅಧ್ಯಕ್ಷ ಎಲ್. ಸತ್ಯನಾರಾಯಣರಾವ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಿಂದುಳಿದ ವರ್ಗಗಳ ಅಡಿಯಲ್ಲಿ ಸುಮಾರು 164ಕ್ಕೂ ಹೆಚ್ಚು ಸಮಾಜಗಳಿವೆ. ಎಲ್ಲಾ ಸಮಾಜಗಳ ಪ್ರಮುಖರು ಕಾಂಗ್ರೆಸ್ ಗೆ ಬೆಂಬಲ ನೀಡುತ್ತಾರೆ. ಮಡಿವಾಳ, ಬಲಿಜ, ಗಂಗಾಮತ, ಸವಿತ, ಉಪ್ಪಾರ, ಬಾಹುಸಾರ, ಮುಂತಾದ ಸಮಾಜದ ಮುಖಂಡರುಗಳು ಈಗಾಗಲೇ ಪಕ್ಷದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಲು ಕಳೆದ ಹಲವು ದಿನಗಳಿಂದ ಸಾಮಾನ್ಯ ಕಾರ್ಯಕರ್ತರಾಗಿ ದುಡಿಯುತ್ತಿದ್ದಾರೆ. ಈ ಬಾರಿ ಅವರು ಗೆದ್ದೇ ಗೆಲ್ಲುತ್ತಾರೆ ಎಂದರು.
ಗ್ಯಾರಂಟಿಗಳು ಪ್ರಮುಖ ಅಸ್ತ್ರವಾಗಿವೆ. ಎಲ್ಲಿ ಪ್ರಚಾರಕ್ಕೆ ಹೋದರೂ ಕೂಡ ಮತದಾರರೇ ಗ್ಯಾರಂಟಿಗಳ ಪರವಾಗಿ ಮಾತನಾಡಿ ನಾವು ಗೆದ್ದೇ ಗೆಲ್ಲಿಸುತ್ತೇವೆ ಎನ್ನುತ್ತಿದ್ದಾರೆ. ಕಾಂಗ್ರೆಸ್ ಮೇಲೆ ಭರವಸೆ ಇಟ್ಟಿದ್ದಾರೆ. ಜಿತೆಗೆ ರಾಷ್ಟ್ರಿಯ ಕಾಂಗ್ರೆಸ್ ನ ಗ್ಯಾರಂಟಿಗಳು ಕೂಡ ಬಡಜನರ ಉದ್ಧಾರಕ್ಕಾಗಿಯೇ ಇವೆ. ಅದರಲ್ಲೂ ಮಹಿಳೆಯರ ಕಲ್ಯಾಣಕ್ಕಾಗಿ ಇವೆ. ಹೀಗಾಗಿ ನಮ್ಮ ಮಹಿಳಾ ಅಭ್ಯರ್ಥಿಯನ್ನು ಎಲ್ಲಾ ಹಿಂದುಳಿದ ವರ್ಗಗಳು ಬೆಂಬಲಿಸುತ್ತವೆ ಎಂದರು.
ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಇಕ್ಕೇರಿ ರಮೇಶ್ ಮಾತನಾಡಿ, ಬಿಜೆಪಿಯು ಶೋಷಿತರ ಪರವಾಗಿ ಇಲ್ಲ. ಅದು ಹಿಂದುಳಿದ ವರ್ಗಗಳನ್ನು ಕಡೆಗಾಣಿಸುತ್ತಿದೆ. ಮೋದಿಯವರೇ ಹಿಂದುಳಿದ ವರ್ಗಗಳ ಬಗ್ಗೆ ಅಲಕ್ಷ್ಯವಾಗಿ ಮಾತನಾಡುತ್ತಾರೆ. ಹಾಗಾಗಿ ಶೋಷಿತರೆಲ್ಲರೂ ಸೇರಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಅಹಿಂದ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ಪ್ರಮುಖರಾದ ಶ್ರೀಧರ ಮೂರ್ತಿ ನವುಲೆ, ಎಸ್.ಬಿ. ಅಶೋಕ್ ಕುಮಾರ್, ಹೆಚ್.ಆರ್. ಮಹೇಂದ್ರ, ಜಿ. ಪದ್ಮನಾಭ್, ಪುಷ್ಪಕ್ ಕುಮಾರ್ ಇದ್ದರು.