ಶಿವಮೊಗ್ಗ,ಮಾ.೨೭: ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯ ಹೆಸರನ್ನು ಮರುಪರಿಶೀಲನೆ ಮಾಡಬೇಕು ಮತ್ತು ನನಗೆ ಸ್ಪರ್ಧಿಸಲು ಅವಕಾಶ ಮಾಡಿಕೊಡಬೇಕು ಎಂದು ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಲಾಗಿದೆ ಎಂದು ಎಸ್.ಪಿ.ದಿನೇಶ್ ಹೇಳಿದರು
.
ಅವರು ಇಂದು ಮತ್ತೊಬ್ಬ ಆಕಾಂಕ್ಷಿ ರಂಗಸ್ವಾಮಿ ಗೌಡ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಈಗಾಗಲೇ ಕೆಪಿಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ಬದಲಾಯಿಸುವಂತೆ ಮನವಿ ಮಾಡಲಾಗಿದೆ. ಕೆಪಿಸಿಸಿ ಅಧ್ಯಕ್ಷರಿಗೆ ಆಯನೂರು ಮಂಜುನಾಥ್ ಅವರಿಗೆ ಟಿಕೆಟ್ ಕೊಟ್ಟಿರುವುದೇ ಗೊತ್ತಿಲ್ಲ . ನಾವು ಭೇಟಿ ಮಾಡಿದಾಗ ಅಚ್ಚರಿಯಾಗಿ ನಮ್ಮನ್ನೆ ಕೇಳಿದ್ದಾರೆ. ನಾನು ನನ್ನ ಮೊಬೈಲ್‌ನಲ್ಲಿಯೇ ಎಐಸಿಸಿಯಿಂದ ಬಂದ ಪತ್ರವನ್ನು ಅವರಿಗೆ ತೋರಿಸಿದ್ದೇವು. ಅವರು ನಮ್ಮ ನಮ್ಮ ಮನವಿಯನ್ನು ಪುರಸ್ಕರಿಸುವ ವಿಶ್ವಾಸವಿದೆ ಎಂದರು.
ದಿನದಿಂದ ದಿನಕ್ಕೆ ಪಕ್ಷ ಬದಲಾಯಿಸುವ ಆಯನೂರು ಮಂಜುನಾಥ್ ಅವರಿಗೆ ಅದು ಹೇಗೆ ಟಿಕೆಟ್ ಕೊಟ್ಟರೋ ಗೊತ್ತಿಲ್ಲ.
ಅದು ಅಲ್ಲದೆ ಬಹಿರಂಗವಾಗಿ ಈಶ್ವರಪ್ಪನವರಿಗೆ ನನ್ನ ಓಟು ಎಂದು ಹೇಳಿದ್ದಾರೆ. ರಾಹುಲ್‌ಗಾಂಧಿ, ಸಿದ್ದರಾಮಯ್ಯ, ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಅಂತಹವರ ಪರವಾಗಿ ಕಾರ್ಯಕರ್ತರು ಕೆಲಸ ಮಾಡಲು ಸಾಧ್ಯವೇ ಎಂದು ಪ್ರಶ್ನೆ ಮಾಡಿದರು.
ಅದು ಅಲ್ಲದೆ ಈಶ್ವರಪ್ಪ ಅವರಿಗೆ ಕಿಚಾಯಿಸಿ ಕಿಚಾಯಿಸಿ ಸ್ಪರ್ಧೆಗೆ ನಿಲ್ಲುವಂತೆ ಮಾಡಿದ್ದಾರೆ. ಈಶ್ವರಪ್ಪ ಸ್ಪರ್ಧೆ ಮಾಡಿದರೆ ಕಾಂಗ್ರೆಸ್‌ಗೆ ನಷ್ಟ ಎಂಬುದು ಅವರಿಗೆ ಏಕೆ ಅರ್ಥವಾಗಿಲ್ಲ. ಈಶ್ವರಪ್ಪ ಹಿಂದುಳಿದ ವರ್ಗಗಳ ಮತಗಳನ್ನು ಸೆಳೆದರೆ ಯಾರಿಗೆ ನಷ್ಟ ಎಂದು ಪ್ರಶ್ನಿಸಿದರು
.
ಈಶ್ವರಪ್ಪ ನಮಗೆ ಎದುರಾಳಿಯೇ ಅಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಮಾತ್ರ ಪೈಪೋಟಿ. ಕೆಪಿಸಿಸಿ ಅಧ್ಯಕ್ಷರ ಗಮನಕ್ಕೆ ಬಾರದೆ ಘೋಷಣೆಯಾಗಿದೆ ಎಂಬ ಅಂಶವನ್ನು ಅಧ್ಯಕ್ಷರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ನನಗೆ ವೋಟ್ ಹಾಕಿದರೆ ಯಡೊಯೂರಪ್ಪನವರಿಗೆ ವೋಟ್ ಹಾಕಿದಂತೆ. ದಿನೇಶ್ ಗೆ ಹಾಕಿದರೆ ಸಿದ್ದರಾಮಯ್ಯಗೆ ಎಂದು ಹೇಳಿ ಪ್ರಚಾರ ಮಾಡಿದ್ದರು. ಗೋಡ್ಸೆ ಸಂತತಿ ಎಂದು ಟೀಕೆ ಮಾಡಿದ್ದರು.
ಪಕ್ಷದಲ್ಲಿ ದುಡಿದಿರುವ ಯಾರಿಗೆ ಬೇಕಾದರೂ ಕೊಡಲಿ. ಕೆಲಸ ಮಾಡುತ್ತೇವೆ. ಆದರೆ ಆಯನೂರು ಮಂಜುನಾಥ್ ಪರ ಕೆಲಸ ಮಾಡಲು ಕಷ್ಟವಾಗುತ್ತದೆ ಮತ್ತು ಇಷ್ಟ ಇಲ್ಲ. ನಾವು ಈಗಾಗಲೇ ನೋಂದಣಿಯನ್ನು ಸಾಕಷ್ಟು ಮಾಡಿದ್ದೇವೆ. ಶ್ರಮ ಪಟ್ಟಿದ್ದೇವೆ. ನಮಗೆ ಟಿಕೆಟ್ ಕೊಡಿ ಎಂದು ಕೇಳುತ್ತಿದ್ದೇವೆ ಹೊರತು ಇದು ಪಕ್ಷ ವಿರೋಧಿ ಚಟುವಟಿಕೆಯಲ್ಲ. ಈ ಹಿಂದೆ ಎಷ್ಟೋ ಬಾರಿ ಟಿಕೆಟ್ ಅನೌನ್ಸ್ ಮಾಡಿ ಬದಲಾವಣೆ ಮಾಡಿದ ಉದಾಹರಣೆ ಇದೆ. ಹಾಗೆಯೇ ನನಗೂ ಮಾಡಲಿ. ಒಂದು ಪಕ್ಷ ಬದಲಾವಣೆ ಸಾಧ್ಯವಾಗದೆ ಇದ್ದರೆ ನಮಗೆ ಮುಂದಿನ ನಿರ್ಧಾರವನ್ನು ಮುಂದೆ ತಿಳಿಸುತ್ತೇವೆ ಎಂದರು.
ಮತ್ತೊಬ್ಬ ಆಕಾಂಕ್ಷಿಯಾಗಿದ್ದ ರಂಗಸ್ವಾಮಿ ಗೌಡ ಮಾತನಾಡಿ, ೯೨ ರಿಂದ ನಾನು ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಪಕ್ಷದಲ್ಲಿ ದುಡಿದವರಿಗೆ ಅವಕಾಶ ನೀಡಿ. ಬೇರೆ ಪಕ್ಷದಿಂದ ಬಂದು ಅಧಿಕಾರ ಅನುಭವಿಸಲು ಬಂದರೆ ಹೇಗೆ? ನಿಮ್ಮ ಶಕ್ತಿ ಬಳಕೆಯಾಗಿದೆ. ಸಾಕು ನಮಗೆ ಅವಕಾಶ ನೀಡಿ. ಕಾಂಗ್ರೆಸ್ ನಲ್ಲಿದುಡಿದವರಿಗೆ ಅವಕಾಶ ನೀಡಿ. ನಮ್ಮಪಕ್ಷ ನಮ್ಮ ಹಕ್ಕು. ನಮ್ಮಹಕ್ಕನ್ನು ನಮ್ಮ ಅಪ್ಪನ ಬಳಿಯೇ ಕೇಳಬೇಕು. ಹಾಗೆ ನಾವು ಕೂಡ ನಮ್ಮ ಹಕ್ಕನ್ನು ನಮ್ಮಅಧ್ಯಕ್ಷರ ಬಳಿಯೇ ಕೇಳಬೇಕಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ವಿಶ್ವನಾಥಕಾಶಿ, ಜ್ಯೋತಿ ಅರಳಪ್ಪ, ಜಗದೀಶ್ ಮಹಾಲಿಂಗೇಗೌಡ, ಸತೀಶ್‌ಕುಮಾರ್, ಕುಮಾರ್, ಮಹೇಶ್ ಇದ್ದರು.