ಶಿವಮೊಗ್ಗ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ 1982 ನೇ ಸಾಲಿನಲ್ಲಿ ಭರ್ತಿಯಾದ ಪುರುಷ ಪೊಲೀಸ್ ನೌಕರರಿಗೆ ಜೇಷ್ಠತೆ ಆಧಾರದಲ್ಲಿ ಅವರ ಹುದ್ದೆಯನ್ನು ನಿರ್ಧರಿಸಲು ರಾಜ್ಯ ಸರ್ಕಾರ, ಗೃಹ ಸಚಿವರು ಹಾಗೂ ಕೆ.ಎ.ಟಿ ಉಚ್ಚ ನ್ಯಾಯಾಲಯ ಸೂಚನೆ ನೀಡಿದ್ದರೂ ಆಡಳಿತ ವಲಯದ ಹಿರಿಯ ಪೊಲೀಸ್ ಅಧಿಕಾರಿಗಳು ಮುಂದಾಗದಿರುವುದನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗಮನಿಸುವ ಅಗತ್ಯವಿದೆ.
ಪೋಲಿಸ್ ಇಲಾಖೆಯಲ್ಲಿ ಅಂದಿನಿಂದಲೂ ಪುರುಷ ಪೊಲೀಸ್ ನೌಕರರನ್ನು ಕಡೆಗಣಿಸುತ್ತಿರುವುದು ಗಂಭೀರ ಹಾಗೂ ಗಮನಿಯ ವಿಷಯ. 1982 ರ ಸಾಲಿನಿಂದ ಪೊಲೀಸ್ ಕಾನ್ಸ್ಟೇಬಲ್ ಆಗಿ ನೇಮಕಗೊಂಡ ಪುರುಷ ಉದ್ಯೋಗಿಗಳಿಗಿಂತ ಮೊದಲೇ 1997 ರಲ್ಲಿ ಮಹಿಳಾ ಉದ್ಯೋಗಿಗಳಿಗೆ ಮುಂಬಡ್ತಿ ನೀಡಿರುವುದು ಎಷ್ಟರ ಮಟ್ಟಿಗೆ ಸರಿ..?ಇಲ್ಲಿ ಕಿರಿಯ ಮಹಿಳಾ ಪೊಲೀಸ್ ಉದ್ಯೋಗಿಗಳಿಗೆ ಬಡ್ತಿ ನೀಡಿದ ಜೊತೆಗೆ ಪುರುಷ ಪೊಲೀಸ್ ಕಾನ್ಸ್ಟೇಬಲ್ ಗಳನ್ನು ಯಥಾವತ್ತಾದ ಹುದ್ದೆಯಲ್ಲೇ ಮುಂದುವರೆಯುವಂತೆ ಮಾಡಿರುವುದು ಎಷ್ಟರ ಮಟ್ಟಿಗೆ ಸರಿಯೆಂದು ರಾಜ್ಯದ ಪುರುಷ ಪೊಲೀಸ್ ನೌಕರರು ಒತ್ತಾಯಿಸಿದ್ದಾರೆ.
ಹಿಂದೆ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮಂಗಳೂರಿನ ನಾಗೇಶ್ ಉಚ್ಚಿಲ್ ಎಂಬುವವರು ಕೆಎಟಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದು ನ್ಯಾಯಾಲಯವು 2014ರಂದು ಪುರುಷ ಹಾಗೂ ಮಹಿಳೆಯರ ಪುನರ್ ಪರಿಶೀಲನೆ ನಂತರ ಜೇಷ್ಠತೆಯನ್ನು ನಿಗದಿಪಡಿಸಲು ಆದೇಶಿಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ.
ನಂತರ ತುಮಕೂರಿನ ನರಸಿಂಹಯ್ಯ ಅವರು ಇದೇ ನ್ಯಾಯಾಲಯಕ್ಕೆ ಮೊರೆ ಹೋಗಿ ವಿಚಾರಣೆ ನಡೆಸಿದಾಗ ಹಳೆಯ ತೀರ್ಪಿನಂತೆ ಪುನರ್ ಪರಿಶೀಲಿಸಲು 2018ರಂದುಆದೇಶ ಬಂದಿರುತ್ತದೆ. ಈ ಸಂದರ್ಭದಲ್ಲಿ ಪೊಲೀಸ್ ಇಲಾಖೆಯು ಸರ್ಕಾರದ ಮುಖ್ಯಕಾರ್ಯದರ್ಶಿಯವರಿಗೆ ಕಾನೂನು ಸಲಹೆ ಕೋರಿದ್ದು ಅರ್ಜಿಯನ್ನು ಪರಿಶೀಲಿಸಿದ ಅಂದಿನ ಅಪರ ಮುಖ್ಯ ಕಾರ್ಯದರ್ಶಿ ವಿ. ಸುಶೀಲ್ ಅವರು ಜೇಷ್ಠ ತೆಯ ಪುನರ್ ನಿಗದಿಪಡಿಸಲು ನಿರ್ದೇಶನ ನೀಡಿದ್ದರು. ಆದರೆ ಅಂದಿನ ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಅವರು ರಾಜ್ಯ ಸರ್ಕಾರದ ಆದೇಶಕ್ಕೆ ಎಳ್ಳುನೀರು ಬಿಟ್ಟಿದ್ದರು.
ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಕಳೆದ ಜುಲೈ ತಿಂಗಳಿನಲ್ಲಿ ಗುಲ್ಬರ್ಗದ ನಾಗಭೂಷಣ್ ಅವರು ಮತ್ತೆ ಕೆಎಟಿ ಮೊರೆಹೋಗಿದ್ದು ಆಗಲೂ ಸಹ ಜೇಷ್ಠತೆ ಪುನರ್ ನಿಗದಿಪಡಿಸಲು ಆದೇಶಿಸಲಾಗಿತ್ತು. ಕಳೆದ 2020ರಡಿಸೆಂಬರ್ 11ರಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಯವರಿಗೆ ಅರ್ಜಿ ಪರಿಶೀಲಿಸಲು ಕೋರಿದಾಗ ಅಧೀನ ಕಾರ್ಯದರ್ಶಿ ಶ್ಯಾಮ್ ಹೊಳ್ಳ ಅವರು ಮೇಲ್ಮನವಿ ಆಧಾರದಲ್ಲಿ ಪುನರ್ ಪರಿಶೀಲಿಸಿ ಪುರುಷರಿಗೂ ಆದ್ಯತೆ ನೀಡುವ ಬಗ್ಗೆ ಪರಿಷ್ಕರಿಸುವಂತೆ ಸೂಚಿಸಿದ್ದರು.
ಸರ್ಕಾರ ಕಳೆದ 20 ದಿನಗಳ ಹಿಂದೆ ಪೊಲೀಸ್ ನೌಕರರ ಜೇಷ್ಠತೆ ಪರಿಶೀಲನೆಗೆ ಸೂಚಿಸಿದ್ದರೂ ಸಹ ಕರ್ನಾಟಕ ರಾಜ್ಯದ ಪೊಲೀಸ್ ಮಹಾ ನಿರೀಕ್ಷಕರು ಹಾಗೂ ನಿರ್ದೇಶಕರು ಕ್ರಮ ಕೈಗೊಳ್ಳದಿರುವುದು ಪುರುಷ ಪೊಲೀಸ್ ಉದ್ಯೋಗಿಗಳ ತಲೆಕೆಡಿಸಿದೆ. ಈ ಸಂಬಂಧ ಪುರುಷ ಪೊಲೀಸ್ ಉದ್ಯೋಗಿಗಳು ರಾಜ್ಯದಲ್ಲೆಡೆ ರಾಜ್ಯ ಸರ್ಕಾರದ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಯಾಮರಣಕ್ಕೆ ಮನವಿ
ಈ ವಿಷಯಕ್ಕೆ ಸಂಬಂಧಪಟ್ಟಂತೆ ಈಗಾಗಲೇ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯ ಎಎಸ್ ಐ ಲಕ್ಷ್ಮಣ್ ಅವರು ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣಕ್ಕಾಗಿ ವಿನಂತಿಸಿದ್ದಾರೆ. ಅವರು ಪೊಲೀಸ್ ಉದ್ಯೋಗಿಗಳ ಜೇಷ್ಠತೆ ಸರಿಯಾಗಿಲ್ಲದೇ ಇರುವ ಹಿನ್ನೆಲೆಯಲ್ಲಿ ಇಂತಹ ಮರಣಕ್ಕಾಗಿ ಕೋರಿರುವುದಾಗಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿದ್ದಾರೆ. ಇಂತಹ ಪ್ರಕರಣಗಳು ನಡೆಯುವ ಮುನ್ನ ಹಾಗೂ ಅವಘಡಗಳು ಸಂಭವಿಸುವ ಮುನ್ನ ತವರಿನಲ್ಲಿಯೇ ಇರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಈ ಸಂಬಂಧ ಕೂಡಲೇ ಸೂಕ್ತ ಪರಿಶೀಲನೆ ನಡೆಸಿ ಪೊಲೀಸ್ ಇಲಾಖೆಯ ನಿರ್ದೇಶಕರಿಗೆ ಹಾಗೂ ನಿರೀಕ್ಷಕರಿಗೆ ಸೂಚನೆ ನೀಡುವ ಮೂಲಕ ಜೇಷ್ಠತೆಯನ್ನು ಸಮಗ್ರವಾಗಿ ಪರಿಶೀಲಿಸಿ ಪುರುಷ ಪೊಲೀಸ್ ಉದ್ಯೋಗಿಗಳಿಗೂ ಸಹ ನ್ಯಾಯ ಒದಗಿಸಲು ಕೋರಿದ್ದಾರೆ. ಜಿಲ್ಲೆಯ ಪೊಲೀಸ್ ಉದ್ಯೋಗಿಗಳನ್ನು ಯಡಿಯೂರಪ್ಪ ಗಮನಿಸುತ್ತಾರೆ ಎಂದು ಪೊಲೀಸ್ ನೌಕರರು ನಂಬಿದ್ದಾರೆ.
ಅದು ಸಾದ್ಯವೇ…?