ಶಿವಮೊಗ್ಗ : ಫೆಬ್ರವರಿ ೧೫ : : ಫೆಬ್ರವರಿ ೨೪ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಸರ್ಕಾರದ ಹತ್ವಾಕಾಂಕ್ಷಿ ೫ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶವನ್ನು ಆಯೋಜಿಸಲು ಉದ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ತಿಳಿಸಿದರು.
ಅವರು ಇಂದು ತಮ್ಮ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಬೃಹತ್ ಸಮಾವೇಶದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲಾ ತಾಲೂಕುಗಳ ಅನ್ನಭಾಗ್ಯ, ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ ಮತ್ತು ಶಕ್ತಿ ಯೋಜನೆಗಳ ೨೫೦೦೦ಕ್ಕೂ ಹೆಚ್ಚಿನ ಫಲಾನುಭವಿಗಳು ಸೇರುವ ನಿರೀಕ್ಷೆ ಇದೆ ಎಂದವರು ನುಡಿದರು.

ಕಾರ್ಯಕ್ರಮಕ್ಕೆ ಆಗಮಿಸುವ ಫಲಾನುಭವಿಗಳಿಗೆ ಯಾವುದೇ ಅಡಚಣೆ ಉಂಟಾಗದಂತೆ ಮಧ್ಯಾಹ್ನದ ಊಟ, ಕುಡಿಯುವ ನೀರು ಹಾಗೂ ಶೌಚಾಲಯ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಕ್ರಮದಲ್ಲಿ ಯಾವುದೇ ನ್ಯೂನತೆಗಳುಂಟಾಗದಂತೆ ವಿಶೇಷ ಗಮನಹರಿಸಲು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳನ್ನು ಉಸ್ತುವಾರಿಗಾಗಿ ನಿಯೋಜಿಸಲಾಗುವುದು. ಅಲ್ಲದೇ ಜಿಲ್ಲೆಯ ಎಲ್ಲಾ ತಾಲೂಕುಗಳ ಗ್ರಾಮ ಪಂಚಾಯಿತಿಗಳಿಂದ ಜನರನ್ನು ಕರೆತರಲು ಹಾಗೂ ಅವರ ಸ್ಥಳಕ್ಕೆ ಬಿಟ್ಟು ಬರಲು ಅನುಕೂಲವಾಗುವಂತೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದರು.


ಇದೇ ಕಾರ್ಯಕ್ರಮದಲ್ಲಿ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳಿಂದ ವಂಚಿತರಾಗಿರುವವ ಅನುಕೂಲಕ್ಕಾಗಿ ಸ್ಥಳದಲ್ಲಿಯೇ ಹೆಸರನ್ನು ನೋಂದಾಯಿಸಿಕೊಂಡು ಸೌಲಭ್ಯ ಪಡೆದುಕೊಳ್ಳಲು ಅನುಕೂಲವಾಗುವಂತೆ ಸಾಮಾನ್ಯ ಸೇವಾ ಕೇಂದ್ರಗಳು ಸೇರಿದಂತೆ ಹಲವು ಕೌಂಟರ್‌ಗಳನ್ನು ತೆರೆಯಲಾಗುವುದು ಎಂದವರು ನುಡಿದರು.


ಕಾರ್ಯಕ್ರಮಕ್ಕೆ ಜನರನ್ನು ಆಹ್ವಾನಿಸಲು ಸರ್ಕಾರದ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮ ಇಲಾಖಾ ಸೌಲಭ್ಯ ಪಡೆದ ಫಲಾನುಭವಿಗಳು ಆಹ್ವಾನಿಸುವಂತೆ ತಿಳಿಸಿದ ಅವರು, ಕಾರ್ಯಕ್ರಮ ನಡೆಯುವ ಸ್ಥಳ ಸ್ವಚ್ಚವಾಗಿಟ್ಟುಕೊಳ್ಳುವಂತೆ ಹಾಗೂ ಕಾರ್ಯಕ್ರಮ ಸ್ಥಳದಲ್ಲಿ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕುವಂತೆ ಅವರು ಇದೇ ಸಂದರ್ಭದಲ್ಲಿ ಅಧಿಕಾರಿಗಳಿಗೆ ಸೂಚಿಸಿದ ಅವರು, ಕಾರ್ಯಕ್ರಮದ ಯಶಸ್ವಿಯಾಗುವ ನಿಟ್ಟಿನಲ್ಲಿ ಸಂಬಂಧಿತ ಇಲಾಖಾ ಅಧಿಕಾರಿಗಳ ನಡುವೆ ಸಮನ್ವಯತೆ ಅಗತ್ಯವಾಗಿದೆ ಎಂದರು.


ಇದೇ ಸಂದರ್ಭದಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅನುಷ್ಠಾನದಲ್ಲಿರುವ ಹಲವು ಯೋಜನೆಗಳಲ್ಲಿ ಫಲಾನುಭವಿಗಳಾಗಿರುವವರಿಗೆ ಸೌಲಭ್ಯಗಳನ್ನು ವಿತರಿಸಲು ಕ್ರಮವಹಿಸಲಾಗುವುದು. ಅಲ್ಲದೇ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಸರ್ಕಾರದ ಸಚಿವರು, ನಿಗಮ ಮಂಡಳಿಗಳ ಅಧ್ಯಕ್ಷರು, ವಿಧಾನಪರಿಷತ್ ಮತ್ತು ವಿಧಾನಸಭಾ ಶಾಸಕರು, ಅಧಿಕಾರಿಗಳು ಹಾಗೂ ಗಣ್ಯರನ್ನು ಆಹ್ವಾನಿಸಲಾಗುವುದು ಎಂದವರು ನುಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ನೇಹಲ್ ಸುಧಾಕರ್ ಲೋಖಂಡೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್‌ಕುಮಾರ್ ಭೂಮರೆಡ್ಡಿ, ಮಹಾನಗರಪಾಲಿಕೆ ಆಯುಕ್ತ ಮಾಯಣ್ಣಗೌಡ, ಸೂಡಾ ಆಯುಕ್ತ ವಿಶ್ವನಾಥ ಮುದ್ದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!