ಶಿವಮೊಗ್ಗ,ಫೆ.೧೩: ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾ ತನ್ನೆಲ್ಲ ಚಟುವಟಿಕೆಗಳನ್ನು ಚುರುಕುಗೊಳಿಸಿದ್ದು, ಶಿವಮೊಗ್ಗ ಜಿಲ್ಲೆಯಲ್ಲಿ ತನ್ನ ಸಂಚಲನವನ್ನು ಆರಂಭಿಸಿ ಚುನಾವಣೆಯ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದೆ ಎಂದು ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ಅಧ್ಯಕ್ಷೆ ಗಾಯಿತ್ರಿ ದೇವಿ ಮಲ್ಲಪ್ಪ ಹೇಳಿದರು.
ಅವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಿಳಾ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ವಾನತಿ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಇಡೀ ರಾಷ್ಟ್ರದಲ್ಲಿ ಬಿಜೆಪಿ ಮಹಿಳಾ ಪದಾಧಿಕಾರಿಗಳು ಚುನಾವಣೆಯಲ್ಲಿ ಸಕ್ರಿಯರಾಗಿದ್ದಾರೆ. ಶಿವಮೊಗ್ಗ ಜಿಲ್ಲೆಗೆ ಮಹಿಳೆಯರನ್ನು ಸಂಘಟಿಸಲು ತಮಿಳುನಾಡಿನ ಬಿಜೆಪಿ ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷೆ ಮತಿವದನಗಿರಿ ಸೆಲ್ವಾಕುಮಾರ್ ಅವರು ಉಸ್ತುವಾರಿಯಾಗಿ ೨ ದಿನಗಳ ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ ಎಂದರು.
ಅವರ ನೇತೃತ್ವದಲ್ಲಿ ಜಿಲ್ಲಾ ಮಹಿಳಾ ಮೋರ್ಚಾದ ಪದಾಧಿಕಾರಿಗಳೆಲ್ಲರು ಶಿಕಾರಿಪುರ, ಸಾಗರ, ಸೊರಬ, ಶಿವಮೊಗ್ಗ ಮುಂತಾದ ತಾಲ್ಲೂಕುಗಳಲ್ಲಿ ಈಗಾಗಲೇ ಸಂಚರಿಸಿದ್ದೇವೆ. ಮಾಜಿ ಉಪಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಸಾಗರದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ.ಮೇಘರಾಜ್ ಸೇರಿದಂತೆ ಬಿಜೆಪಿಯ ಮಹಿಳಾ ಮೋರ್ಚಾದ ಪದಾಧಿಕಾರಿಗಳೊಡನೆ ಹಲವು ಊರುಗಳಲ್ಲಿ ತೆರಳಿ ಸಂಘಟನೆಯನ್ನು ಬಲಗೊಳಿಸಿದ್ದೇವೆ ಎಂದರು.
ಶಿಕಾರಿಪುರದ ಉಡುಗಣೆಯ ಅಕ್ಕಮಹಾದೇವಿ ಕ್ಷೇತ್ರಕ್ಕೆ ಭೇಟಿಕೊಟ್ಟಿದ್ದೆವು. ಸಂಸದ ಬಿ.ವೈ.ರಾಘವೇಂದ್ರ ಅವರು, ಸುಮಾರು ೧೧ ಕೋಟಿ ರೂ.ವೆಚ್ಚದಲ್ಲಿ ಅಕ್ಕಮಹಾದೇವಿ ಪ್ರತಿಮೆಯನ್ನು ಸ್ಥಾಪಿಸಿರುವುದನ್ನು ಕಂಡು ಸಂತಸಗೊಂಡೆವು. ಕುಸ್ಕೂರು, ತಡಸನಹಳ್ಳಿ, ಸಾಗರ ಮುಂತಾದ ಅನೇಕೆ ಊರುಗಳಿಗೆ ತೆರಳಿ ಪ್ರಧಾನಮಂತ್ರಿಯವರ ವಿವಿಧ ಯೋಜನೆಗಳ ಬಗ್ಗೆ ತಿಳಿಸಿದೆವು. ಮತ್ತು ಫಲಾನುಭವಿಗಳೊಡನೆ ಚರ್ಚೆ ಮಾಡಿದೆವು ಎಂದರು.
ಮುಖ್ಯವಾಗಿ ಆವಾಸ್ ಯೋಜನೆ, ಉಜ್ವಲ ಯೋಜನೆ, ಆಯುಷ್ಮಾನ್ ಭಾರತ,ಮನೆ ಮನೆ ಗಂಗೆ, ಸುಕನ್ಯಾ ಸಮೃದ್ಧಿ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಲಾಯಿತು. ಬೂತ್ ಮಟ್ಟದ ಕಾರ್ಯಕರ್ತರನ್ನು ಭೇಟಿ ಮಾಡಿ ಸಂವಾದ ಮಾಡಿ ಸಲಹೆ ನೀಡಲಾಯಿತು. ಸಾಗರದ ಸರ್ಕಾರ ಆಸ್ಪತ್ರೆಗೆ ಭೇಟಿ ನೀಡಿ ವೀಕ್ಷಣೆ ಮಾಡಲಾಯಿತು. ಪರಿಶಿಷ್ಟರ ಮನೆಗಳಿಗೆ ಹೋಗಿ ಸಹಭೋಜನ ನಡೆಸಲಾಯಿತು ಎಂದರು.
ತಮಿಳು ನಾಡಿನ ಮಹಿಳಾ ಮೋರ್ಚಾದ ರಾಜ್ಯ ಉಪಾಧ್ಯಕ್ಷ ಮತಿವದನಗಿರಿ ಸೆಲ್ವಕುಮಾರ್ ಮಾತನಾಡಿ, ಮುಖ್ಯವಾಗಿ ಕಮಲಮಿತ್ರ ಯೋಜನೆಯಡಿಯಲ್ಲಿ ಬರುವ ಸುಮಾರು ೧೫ ಕಾರ್ಯಕ್ರಮಗಳ ವಿವರಗಳ ಕಾರ್ಯಕ್ರಮಗಳನ್ನು ಮಹಿಳೆಯರಿಗೆ ತಿಳಿಸಲಾಯಿತು. ಸಂಘ ಸಂಸ್ಥೆಗಳು, ಎನ್.ಜಿ.ಓ.ಗಳೊಂದಿಗೆ ಗ್ರೂಫ್ ಸಂವಾದ ಮಾಡಲಾಯಿತು. ಸೆಲ್ಪಿ ವಿತ್ ಲಾಭಾರ್ಥಿ ಮತ್ತು ನಮೋ ಆಫ್ಗೆ ಅಪ್ಲೋಡು ಮಾಡಲಾಯಿತು ಎಂದರು.
ಶಿವಮೊಗ್ಗ ಜಿಲ್ಲೆಯ ಅಭಿವೃದ್ಧಿಯನ್ನು ನೋಡಿ ಸಂತೋಷವಾಗಿದೆ. ಸಂಸದ ಬಿ.ವೈ.ರಾಘವೇಂದ್ರ ಅವರು ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಇಲ್ಲಿ ಮಹಿಳಾ ಮೋರ್ಚಾ ತುಂಬ ಸಂಘಟನಾತ್ಮಕವಾಗಿ ಇದೆ. ಮೋದಿಯ ಜನಪ್ರಿಯತೆ ಹೆಚ್ಚಿದೆ. ಅವರ ಜನಪ್ರಿಯ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸಲಾಗುವುದು. ಜಿಲ್ಲೆಯಲ್ಲಿ ಸುಮಾರು ೧೫ ಲಕ್ಷ ಲೋಕಸಭಾ ಮತದಾರರು ಇದ್ದಾರೆ. ಅದರಲ್ಲಿ ಅರ್ಧದಷ್ಟು ಹೆಣ್ಣು ಮಕ್ಕಳೇ ಇದ್ದಾರೆ ಎಂದರು.
ರಾಜ್ಯ ಸರ್ಕಾರದ ಗ್ಯಾರಂಟಿಗಳೆಲ್ಲ ವಿಫಲವಾಗಿವೆ. ಶೇ.೧೦ ರಷ್ಟು ಫಲಾನುಭವಿಗಳನ್ನು ಅದು ತಲುಪಿಲ್ಲ. ಮುಖ್ಯಮಂತ್ರಿಗಳು ರಾಷ್ಟ್ರಪತಿಗಳ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಉರುಳುವುದು ದೂರವಿಲ್ಲ. ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ೨೮ ಸ್ಥಾನಗಳನ್ನು ಬಿಜೆಪಿ ಗೆಲ್ಲುತ್ತದೆ. ಮಹಿಳಾ ಮೋರ್ಚಾದ ತನ್ನದೇ ಆದ ಪಾತ್ರವನ್ನು ಚುನಾವಣೆಯಲ್ಲಿ ಬಲಿಷ್ಟವಾಗಿ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಮೋರ್ಚಾದ ಪದಾಧಿಕಾರಿಗಳಾದ ಮಂಗಳ ನಾಗೇಂದ್ರ, ಪ್ರತಿಮಾ ದಿನೇಶ್ ಶೇಟ್, ವಿಜಯಲಕ್ಷ್ಮಿ, ವೀಣಾ ನಾಗರಾಜ್, ಸುಲೋಚನಾ ಪ್ರಕಾಶ್, ವನಜಾಕ್ಷಿ, ಆರ್. ಶಾರದ ಶ್ರೀಧರಮೂರ್ತಿ, ಸುಮಿತ್ರ ರಂಗನಾಥ್, ಸಂಧ್ಯಾ ನಾಗರಾಜ್, ಹರಿಕೃಷ್ಣ ಮುಂತಾದವರು ಇದ್ದರು.