ಶಿವಮೊಗ್ಗ,ಫೆ.02: ಕಾಂಗ್ರೆಸ್ ಸರ್ಕಾರ ನೀಡಿದ 5 ಗ್ಯಾರಂಟಿಗಳಲ್ಲಿ 2ನೇ ಗ್ಯಾರಂಟಿ ಗೃಹಜ್ಯೋತಿ ಯೋಜನೆಯನ್ನು ಯಶಸ್ವಿಯಾಗಿ ನೀಡಿದ ಇಂಧನ ಸಚಿವ ಕೆ.ಜೆ. ಜಾರ್ಜ್ ಮತ್ತು ಅರಣ್ಯ ಅಭಿವೃದ್ದಿ ಕೈಗಾರಿಕಾ ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಬೇಳೂರು ಗೋಪಾಲಕೃಷ್ಣ ನಾಳೆ ನಗರಕ್ಕೆ ಆಗಮಿಸಲಿದ್ದು, ಭವ್ಯ ಸ್ವಾಗತ ನೀಡಲಿದ್ದೇವೆ ಎಂದು ಕಾಂಗ್ರೆಸ್ ನಾಯಕ ಹೆಚ್.ಸಿ.ಯೋಗೀಶ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಇಬ್ಬರು ನಾಯಕರನ್ನು ಬೆಳಿಗ್ಗೆ 11.30ಕ್ಕೆ ಬೆಕ್ಕಿನ ಕಲ್ಮಠದಿಂದ ದೊಡ್ಡ ಸೇಬಿನ ಹಾರ ಹಾಕಿ ಸ್ವಾಗತಿಸಿ ಬೈಕ್ ರ್ಯಾಲಿ ಮೂಲಕ ಶಿವಪ್ಪನಾಯಕ ವೃತ್ತ , ಎ.ಎ.ವೃತ್ತ, ಗೋಪಿ ವೃತ್ತ ಮೂಲಕ ಕಾಂಗ್ರೆಸ್ ಕಚೇರಿಗೆ ಕರೆತರಲಾಗುವುದು. ಪಕ್ಷದ ಕಚೇರಿಯಲ್ಲಿ ಅವರಿಗೆ ಅಭಿನಂದನ ಸಮಾರಂಭವಿದೆ ಎಂದರು.

ದೇಶದಲ್ಲೇ 200 ಯೂನಿಟ್ ಉಚಿತ ನೀಡಿದ ಪ್ರಥಮ ರಾಜ್ಯ ಹಾಗೂ 1.59ಕೋಟಿ ಫಲಾನುಭವಿಗಳಿಗೆ 4 ಸಾವಿರ ಕೋಟಿ ಹಣವನ್ನು ಈ ಯೋಜನೆಗೆ ಕಾಂಗ್ರೆಸ್ ಸರ್ಕಾರ ನೀಡಿದೆ. ಸಾರ್ವಜನಿಕರು ವಿದ್ಯುತ್ ಸಂಬಂಧಪಟ್ಟ ಯಾವುದೇ ಅಹವಾಲುಗಳನ್ನು ಸಚಿವರಿಗೆ  ನಾಳೆ ಸ್ಥಳದಲ್ಲೇ ಸಲ್ಲಿಸಬಹುದಾಗಿದೆ ಎಂದರು.

ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು. ಆಯನೂರು ಮಂಜುನಾಥ್ ಅವರ ಆತ್ಮ-ಪ್ರೇತಾತ್ಮ ಎಂಬ ಟೀಕೆಗೆ ನಾನು ಈ ಶುಭ ಸಂದರ್ಭದಲ್ಲಿ ಉತ್ತರ ಕೊಡಲ್ಲ. ಜೀವಂತವಿರುವ ಮನುಷ್ಯರಿಗೆ ಪ್ರೇತಾತ್ಮ ಎಂದು ಕರೆದ ಅವರಿಗೆ ಸೂಕ್ತ ಸಂದರ್ಭದಲ್ಲಿ ನಾಯಕರು ಉತ್ತರ ಕೊಡುತ್ತಾರೆ. ಯೋಗೀಶ್ ಯಾರು ಎಂಬುವುದು ನಗರದ 70000 ಮತದಾರರಿಗೆ ಗೊತ್ತಿದೆ. ಆಯನೂರು ಮಂಜುನಾಥ್ ಹೇಳಬೇಕಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್‍ನ ಪ್ರಮುಖರಾದ ದೇವೇಂದ್ರಪ್ಪ, ಶಿವಕುಮಾರ್, ವಿಜಯಲಕ್ಷ್ಮೀ ಪಾಟೀಲ್, ಪಿ.ಎಸ್. ಗಿರೀಶ್‍ರಾವ್, ವಿಶ್ವನಾಥ್ ಕಾಶಿ, ಅಲ್ತಾಫ್ ಫರ್ವೀಜ್ ಮತ್ತಿತರರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!