ಶಿವಮೊಗ್ಗ,ಜ.25: ರೈತರ ಮಧ್ಯಮಾವಧಿ ಹಾಗೂ ಧೀರ್ಘಾವಧಿ ಸಾಲ ಪಡೆದು ಸುಸ್ತಿಯಾಗಿರುವ ರೈತರು ಅಸಲನ್ನು ಫೆಬ್ರವರಿ ಅಂತ್ಯದೊಳಗೆ ಮರುಪಾವತಿ ಮಾಡಿದರೆ, ಸಂಪೂರ್ಣವಾಗಿ ಬಡ್ಡಿಯನ್ನು ಮನ್ನಾ ಮಾಡಲಾಗುವುದು. ರೈತರು ಇದರ ಪ್ರಯೋಜನ ಪಡೆಯಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ್ ಗೌಡ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯ ಸರ್ಕಾರ ರೈತರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಲ್ಯಾಂಪ್ಸ್ ಸಹಕಾರ ಸಂಘಗಳು, ಡಿಸಿಸಿ ಬ್ಯಾಂಕ್ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್‍ಗಳಿಂದ ಸಾಲಪಡೆದು 2023ರ ಡಿ.31ಕ್ಕೆ ಸುಸ್ತಿಯಾಗಿರುವ ಮಧ್ಯಾಮವಧಿ ಮತ್ತು ಧೀರ್ಘಾವಧಿ ಮತ್ತು ಕೃಷಿ ಸಂಬಂಧಿತ ಸಾಲಗಳಿಗೆ ಈ ಬಡ್ಡಿ ಮನ್ನಾ ಯೋಜನೆಯನ್ನು ಜಾರಿಗೆ ತಂದಿದೆ. ರಾಜ್ಯದಲ್ಲಿ ಸಾವಿರಾರು ರೈತರು ಇದರ ಪ್ರಯೋಜನ ಪಡೆಯಲಿದ್ದಾರೆ. ಜಿಲ್ಲೆಯಲ್ಲಿ ಕೂಡ ನೂರಾರು ರೈತರು ಇದರ ಪ್ರಯೋಜನ ಪಡೆಯುತ್ತಾರೆ. ರಾಜ್ಯ ಸರ್ಕಾರಕ್ಕೆ ಅಭಿನಂದನೆ ಅಂದರು.

ರೈತರು ಫೆ.29ರೊಳಗೆ ಸುಸ್ತಿಯಾಗಿರುವ ಕಂತುಗಳ ಅಸಲುಗಳನ್ನು ಕಟ್ಟಬೇಕು. ಇದೊಂದು ಮಹತ್ವದ ಯೋಜನೆಯಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಬರಗಾಲದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಸುಸ್ತಿದಾರ ರೈತರನ್ನು ಋಣಮುಕ್ತರನ್ನಾಗಿರುಸುವ ದೃಷ್ಠಿಯಲ್ಲಿ ಈ ಯೋಜನೆ ತಂದಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಹಾಗೆಯೇ ಕೃಷಿಯೇತರ ಸಾಲಗಳನ್ನು ಪಡೆದವರಿಗೂ ಬಡ್ಡಿ ಮನ್ನಾ ಯೋಜನೆಯನ್ನು ರಾಜೀ ಸಂದಾನದ ಇತ್ಯಾರ್ಥದ ಮೂಲಕ ಬಗೆಹರಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಬ್ಯಾಂಕಿನ ಎಲ್ಲಾ ಕ್ರಮಗಳ ಹೊರತಾಗಿಯೂ ವಸೂಲಾಗದಿರುವ ಅನುತ್ಪಾದಕ ಸಾಲಗಳನ್ನು ರಾಜಿ ಸಂಧಾನದ ಇತ್ಯಾರ್ಥದ ಮೂಲಕ ವಸೂಲಾತಿ ಮಾಡಿ ಬ್ಯಾಂಕಿನ ಆರ್ಥಿಕ ಸದೃಢತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕೆಲವು ಷÀರತ್ತುಗಳನ್ನು ವಿಧಿಸಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದರು.

2023ರ ಮಾರ್ಚ್ ಅಂತ್ಯಕ್ಕೆ ಸಾಲವೂ ಸುಸ್ತಿಯಾಗಿರಬೇಕು. ಕನಿಷ್ಠ 3 ವರ್ಷಗಳಾಗಿರಬೇಕು. ಈ ಯೋಜನೆಯೂ ಬಿಡಿ ವ್ಯಕ್ತಿಯಲ್ಲದೆ, ಸಹಕಾರ ಸಂಘಗಳು ಸ್ವಸಹಾಯ ಗುಂಪುಗಳು ಇತರ ಸಂಸ್ಥೆಗಳು ಪಡೆದಿರುವ ಎಲ್ಲಾ ರೀತಿಯ ಕೃಷಿ ಮತ್ತು ಕೃಷಿಯೇತರ ಸಾಲಗಳಿಗೆ ಷರತ್ತಿಗೊಳಪಟ್ಟು ಅನ್ವಯವಾಗುತ್ತದೆ. ರಾಜೀ ಸಂಧಾನ ಇತ್ಯರ್ಥಕ್ಕೆ ಅರ್ಜಿ ಸಲ್ಲಿಸುವವರು, ಸಾಲ ಬಾಕಿಯ ಕನಿಷ್ಠ ಶೇ.50ರಷ್ಟನ್ನು ಶಾಖೆಯ ಅಮಾನತ್ತು ಖಾತೆಗೆ ಜಮಾ ಮಾಡಿರಬೇಕು. ನ್ಯಾಯಾಲಯದಲ್ಲಿ ಪ್ರಕರಣವಿದ್ದರೆ ಸದರಿ ನ್ಯಾಯಾಲಯದ ಒಪ್ಪಿಗೆ ತೀರ್ಪು ಪಡೆಯಬೇಕು ಎಂದು ವಿವರಿಸಿದರು. 

ಯಶಸ್ವಿನಿ ಆರೋಗ್ಯ ರಕ್ಷಣ ಯೋಜನೆ ಕಳೆದ 23ರಿಂದಲೇ ಪ್ರಾರಂಭವಾಗಿದ್ದು, ಜ.31ರವರೆಗೆ ಮುಂದುವರೆಯಲಿದೆ. ಎಂದಿನಂತೆ ಗ್ರಾಮೀಣ ಪ್ರದೇಶದ ಸಂಘಗಳ ಸದಸ್ಯರುಗಳಿಗೆ 4 ಸದಸ್ಯರ ಕುಟುಂಬಕ್ಕೆ ವಾರ್ಷಿಕ 500 ರೂ. ನಗರ ಪ್ರದೇಶದವರಿಗೆ 1000 ರೂ. ವಂತಿಗೆ ನಿಗಧಿಪಡಿಸಲಾಗಿದೆ. ಪರಿಶಿಷ್ಟ ಪಂಗಡ ಮತ್ತು ವರ್ಗದವರ ಹಣವನ್ನು ಸರ್ಕಾರವೇ ಭರಿಸುತ್ತದೆ. ಇದರ ಚಿಕಿತ್ಸಾ ಅವಧಿ ಏ.24ರಿಂದ 2025ರ ಮಾಚ್ರ್ವರೆಗೆ ಮುಂದುವರೆಯುತ್ತದೆ. ಈಗಾಗಲೇ ಶಿವಮೊಗ್ಗ ಜಿಲ್ಲೆಯಲ್ಲಿ 2.33ಲಕ್ಷ ಸದಸ್ಯರು ನೊಂದಾಯಿಸಿದ್ದಾರೆ. ಅಲ್ಲದೇ 36500 ರೋಗಿಗಳು 61 ಕೋಟಿ ಮೊತ್ತದ ಚಿಕಿತ್ಸೆಯನ್ನು ಪಡೆದಿದ್ದಾರೆ. ಇದರ ಸದುಪಯೋಗವನ್ನು ಕೂಡ ಪಡೆದುಕೊಳ್ಳಬೇಕು ಎಂದರು.

ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕರಾದ ಯೋಗೀಶ್, ಸುದೀರ್, ದುಗ್ಗಪ್ಪ ಗೌಡ, ಎಂ.ಡಿ. ವಾಸುದೇವ್, ವಸೂಲಾಧಿಕಾರಿ ಸತೀಶ್ ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!