ಶಿವಮೊಗ್ಗ,ಜ.೦೮: ಹೆಸರಾಂತ ಕೈಗಾರಿಕೋದ್ಯಮಿ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ ಅವರನ್ನು ಜ.೯ರಂದು ಸವಳಂಗ ರಸ್ತೆಯ ಸರ್ಜಿ ಕನ್ವೆಂಷನ್ ಹಾಲ್‌ನಲ್ಲಿ ಅಮೃತಮಯಿ ಹೆಸರಿನಲ್ಲಿ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷ ಡಿ.ಜಿ.ಬೆನಕಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರುದ್ರೇಗೌಡರು ಚನ್ನಗಿರಿ ತಾಲೂಕಿನ ಪುಟ್ಟ ಗ್ರಾಮ ಲಿಂಗದಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದು ಸಾಧನೆ ಮಾಡಿದವರು. ಅವರಿಗೆ ಇದೇ ಜ.೯ಕ್ಕೆ ೭೪ವರ್ಷಗಳು ತುಂಬಿ ೭೫ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಈ ಸಂಭ್ರಮದಲ್ಲಿ ಅವರನ್ನು ಸನ್ಮಾನಿಸಲಾಗುತ್ತದೆ ಎಂದರು.
ಈ ಅಭಿನಂದನಾ ಕಾರ್ಯಕ್ರಮವು ಬೆಳಗ್ಗಿನಿಂದ ಸಂಜೆಯವರೆಗೆ ನಡೆಯುತ್ತದೆ. ಬೆಳಿಗ್ಗೆ ೧೦.೩೦ಕ್ಕೆ ವಿಚಾರಗೋಷ್ಠಿ ಏರ್ಪಡಿಸಲಾಗಿದೆ. ಗೋಷ್ಠಿಯನ್ನು ನಾಡೋಜ ಷಡಾಕ್ಷರಿ ಉದ್ಘಾಟಿಸುವರು. ಈ ಗೋಷ್ಠಿಯಲ್ಲಿ ರುದ್ರೇಗೌಡರ ವ್ಯಕ್ತಿತ್ವ ಭಾಗವಾದ ರಾಜಕಾರಣ, ಸಮಾಜಸೇವೆ, ಕೈಗಾರಿಕಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪರಿಸರ ಪ್ರಜ್ಞೆ, ಮೌಲ್ಯಧಾರಿತ ರಾಜಕಾರಣ, ಸಾಧನೆಯ ಗುರಿ ಕುರಿತು ತೇಜಸ್ವಿ ಅನಂತಕುಮಾರ್, ಗೋವಿಂದ್, ಶಾಸಕ ಸುನೀಲ್‌ಕುಮಾರ್ ಮಾತನಾಡಲಿದ್ದಾರೆ. ಇದು ಯುವಕರಿಗೆ ಮಾರ್ಗದರ್ಶಗವಾಗಲಿದೆ ಎಂದರು.
ನಂತರ ಮಧ್ಯಾಹ್ನ ೩ರಿಂದ ಸಂಜೆ ೫ಗಂಟೆಯವರೆಗೆ ವಿವಿಧ ಕ್ಷೇತ್ರಗಳಲ್ಲಿ ಆಯ್ದ ಯುವಕರೊಂದಿಗೆ ಬದುಕು ಸಾಧನೆ ಕುರಿತು ಅತರಂಗ-ಬಹಿರಂಗ ಸಂವಾದ ಕಾರ್ಯಕ್ರಮ ನಡೆಯುತ್ತದೆ. ಈ ಸಂವಾದ ಕಾರ್ಯಕ್ರಮವನ್ನು ಅವರ ಪುತ್ರಿ ಚೈತ್ರ ಅರುಣ್ ನಿರ್ವಹಿಸುವರು ಎಂದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ರುದ್ರೇಗೌಡರು ಸಾಧನೆಯ ಹರಿಕಾರರು. ಎಲ್ಲರ ಪ್ರೀತಿಗೆ ಪಾತ್ರರಾಗಿದ್ದಾರೆ. ಅವರು ಯುವಕರಿಗೆ ಸ್ಪೂರ್ತಿಯಾಗಿದ್ದರು. ಸಜ್ಜನ ರಾಜಕಾರಣಿ, ಸತತ ಪರಿಶ್ರಮದಿಂದ ಮೇಲೆ ಬಂದವರು. ರಾಜಕಾರಣವನ್ನು ಕೂಡ ಅತ್ಯಂತ ಪ್ರೀತಿಯಿಂದ ಮಾಡುತ್ತಾರೆ. ಇತಂಹ ಮಹನ್ ವ್ಯಕ್ತಿಯನ್ನು ಅಭಿನಂದಿಸುವುದು ನಮಗೆ ಹೆಮ್ಮೆ ಎಂದರು.
ಸಂಜೆ ೫.೩೦ಕ್ಕೆ ನಡೆಯುವ ಅಭಿನಂದನಾ ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ರುದ್ರೇಗೌಡರನ್ನು ಅಭಿನಂದಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದೇ ಸಂದರ್ಭದಲ್ಲಿ ರುದ್ರೇಗೌಡರ ಬದುಕು ಸಾಧನೆ ಕುರಿತ ಎಸ್.ರುದ್ರೇಗೌಡ-ದಿ ಐರನ್ ಮ್ಯಾನ್ ಎಂಬ ಪುಸ್ತಕವನ್ನು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟಿ ಬಿಡುಗಡೆ ಮಾಡಲಿದ್ದಾರೆ. ಮಾಜಿ ಸಭಾಪತಿ ಬಿ.ಎಲ್.ಶಂಕರ್. ರುದ್ರೇಗೌಡರನ್ನು ಕುರಿತು ಅಭಿನಂದನಾ ಭಾಷಣ ಮಾಡುವರು ಎಂದರು.
ಅಭಿನಂದನಾ ಸಮಿತಿಯ ಆರ್.ಕೆ.ಸಿದ್ದರಾಮಣ್ಣ ಮಾತನಾಡಿ, ರುದ್ರೇಗೌಡರನ್ನು ಜಾತ್ಯಾತೀತ, ಪಕ್ಷಾತೀತವಾಗಿ ಅಭಿನಂದಿಸಲಾಗುವುದು. ಸಂಸದ ವಿ.ವೈ.ರಾಘವೇಂದ್ರ, ಶಾಸಕರಾದ ಡಿ.ಎಸ್.ಅರುಣ್, ಎಸ್.ಎನ್.ಚನ್ನಬಸಪ್ಪ, ಮಾಜಿ ಶಾಸಕರಾದ ಹೆಚ್.ಎಂ.ಚಂದ್ರಶೇಖರಪ್ಪ, ಆರ್.ಪ್ರಸನ್ನಕುಮಾರ್ ಸೇರಿದಂತೆ ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದ ಅವರು, ರುದ್ರೇಗೌಡರು ಉದ್ಯಮಿಯಾಗಿ ಉದ್ಯೋಗ ಸೃಷ್ಠಿಸುವಲ್ಲಿ ಯಶಸ್ವಿ ಕಂಡವರು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಎಸ್.ಎಸ್.ಜ್ಯೋತಿ ಪ್ರಕಾಶ್, ಎನ್.ಗೋಪಿನಾಥ್, ಕೆ.ಕಿರಣ್‌ಕುಮಾರ್, ವಿಶ್ವಾಸ್, ಹರ್ಷ ಕಾಮತ್, ಎಂ.ಎ.ರಮೇಶ್ ಹೆಗ್ಡೆ ಸೇರಿದಂತೆ ಹಲವರಿದ್ದರು.