ಅಭಿನಂದನಾ ಸಮಿತಿಯ ಅಧ್ಯಕ್ಷರು ಹಾಗೂ ನಂಜಪ್ಪ ಗ್ರೂಫ್ ಆಫ್ ಹಾಸ್ಪಿಟಲ್ ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಜಿ. ಬೆನಕಪ್ಪ ಮಾಹಿತಿ
ಶಿವಮೊಗ್ಗ : 75ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಇದೇ ಜ.27 ರಂದು ಅಮೃತಮಯಿ ಶೀರ್ಷಿಕೆಯಡಿ ನಗರದ ಸವಳಂಗ ರಸ್ತೆಯ ಸರ್ಜಿ ಕನ್ವೆನ್ಶನ್ ಹಾಲ್ನಲ್ಲಿ ಅದ್ಧೂರಿ ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಭಿನಂದನಾ ಸಮಿತಿಯ ಅಧ್ಯಕ್ಷರು ಹಾಗೂ ನಂಜಪ್ಪ ಗ್ರೂಫ್ ಆಫ್ ಹಾಸ್ಪಿಟಲ್ ನ ಮ್ಯಾನೇಜಿಂಗ್ ಟ್ರಸ್ಟಿ ಡಿ.ಜಿ. ಬೆನಕಪ್ಪ ಹೇಳಿದರು.
ಅವರು ಸೋಮವಾರ ಬೆಳಗ್ಗೆ ನಗರದ ಮಥುರಾ ಪ್ಯಾರಡೈಸ್ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಅಂದು ಸಂಜೆ 5-30 ಕ್ಕೆ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸುಪ್ರೀಂಕೋರ್ಟ್ನ ವಿಶ್ರಾಂತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ಉಪಸ್ಥಿತರಿರುವರು, ಮಾಜಿ ಮುಖ್ಯಮಂತ್ರಿಉಗಳಾದ ಬಿ.ಎಸ್. ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು, ಗೌಡರ ಬದುಕು-ಸಾಧನೆ ಕುರಿತ “ಎಸ್. ರುದ್ರೇಗೌಡ-ದಿ ಐರನ್ ಮ್ಯಾನ್” ಪುಸ್ತಕವನ್ನು ವಿಧಾನ ಪರಿಷತ್ ಸಭಾಪತಿಗಳಾದ ಶ್ರೀ ಬಸವರಾಜ್ ಹೊರಟ್ಟಿ ಅವರು ಬಿಡುಗಡೆ ಮಾಡಲಿದ್ದಾರೆ. ವಿಧಾನ ಪರಿಷತ್ ಮಾಜಿ ಸಭಾಪತಿಗಳಾದ ಶ್ರೀ ಬಿ.ಎಲ್ ಶಂಕರ್ ಅವರು ಗೌಡರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ ಎಂದು ತಿಳಿಸಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಡಾ.ಧನಂಜಯ ಸರ್ಜಿ ಮಾತನಾಡಿ, ಅಭಿನಂದನಾ ಸಮಿತಿಯನ್ನು ರಚಿಸಲಾಗಿದ್ದು, ಸಂಸದ ಬಿ.ವೈ.ರಾಘವೇಂದ್ರ ಅವರು ಗೌರವಾಧ್ಯಕ್ಷರಾಗಿದ್ದಾರೆ ಎಂದರು.
ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ಧಾರ್ಮಿಕವಾಗಿಯೂ ರುದ್ರೇಗೌಡರ ಕೊಡುಗೆ ದೊಡ್ಡದು. ಪರಿಸರ ಪ್ರಜ್ಞೆಯೇ ಸಮಾಜಸೇವೆ ಕುರಿತ ಮೊದಲ ಗೋಷ್ಟಿಯಲ್ಲಿ ತೇಜಸ್ವಿನಿ ಅನಂತಕುಮಾರ್ ಅವರು ಮಾತನಾಡುವರು, ಮೌಲ್ಯಾಧಾರಿತ ರಾಜಕಾರಣ ಕುರಿತ ಎರಡನೇ ಗೋಷ್ಟಿಯಯಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಮಾತನಾಡುವರು, ಸಾಧನೆಗೊಂದು ಗುರಿ ಮೂರನೇ ಗೋಷ್ಟಿಯಲ್ಲಿ ಕಿರ್ಲೋಸ್ಕರ್ ಕಂಪನಿಯ ಇಂಡಿಪೆಂಡೆಂಟ್ ಡೈರೆಕ್ಟರ್ ಬಿ.ಎಸ್. ಗೋವಿಂದ್ ಅವರು ಮಾತನಾಡುವರು, ಈ ಗೋಷ್ಟಿಗಳ ಅಧ್ಯಕ್ಷತೆ ಮತ್ತು ಉದ್ಘಾಟನೆಯನ್ನು ನಾಡೋಜ ಷಡಕ್ಷರಿ ಅವರು ನೆರವೇರಿಸಲಿದ್ದಾರೆ.
3 ರಿಂದ ಸಂಜೆ 5 ಗಂಟೆಯವರೆಗೆ ವಿವಿಧ ಕ್ಷೇತ್ರಗಳ ಆಯ್ದ ಯುವಕರೊಂದಿಗೆ ಶ್ರೀ ರುದ್ರೇಗೌಡರ ಬದುಕು-ಸಾಧನೆ ಕುರಿತು “ಅಂತರಂಗ-ಬಹಿರಂಗ” ಸಂವಾದ ಕಾರ್ಯಕ್ರಮವನ್ನು ಆಯೋಜಿಸಿದ್ದು, ಅವರ ಬೆಳವಣಿಗೆ, ಕಷ್ಟಗಳನ್ನು ಅವಕಾಶಗಳನ್ನಾಗಿಸಿಕೊಂಡು ಸಾಧಿಸಿದ ರೀತಿ, ಉದ್ಯಮಗಳನ್ನು ಕಟ್ಟಿದ ಶ್ರಮ, ಎಲ್ಲರನ್ನೂ ಜೊತೆಯಾಗಿ ಬೆಳೆಸಿದ ಪರಿ, ಈ ಎಲ್ಲ ವಿಚಾರಗಳನ್ನೂ ಅವರೊಂದಿಗಿನ ಆತ್ಮೀಯ ಸಂವಾದದಲ್ಲಿ ಅವರ ಪುತ್ರಿ ಶ್ರೀಮತಿ ಚೈತ್ರ ಅರುಣ್ ನಿರ್ವಹಿಸಲಿದ್ದಾರೆ ಎಂದರು.
ಮಲೆನಾಡಿನ ಹೆಸರಾಂತ ಕೈಗಾರಿಕೋದ್ಯಮಿ ಮತ್ತು ವಿಧಾನ ಪರಿಷತ್ ಸದಸ್ಯರೂ ಆಗಿರುವ ಶ್ರೀ. ಎಸ್. ರುದ್ರೇಗೌಡರು ಚನ್ನಗಿರಿ ತಾಲ್ಲೂಕಿನ ಪುಟ್ಟ ಗ್ರಾಮ ಲಿಂಗದಹಳ್ಳಿಯ ಸಾಮಾನ್ಯ ರೈತ ಕುಟುಂಬದಿಂದ ಬಂದು ಅತ್ಯುನ್ನತ ಸಾಧನೆಗೈದವರು. ಶ್ರೀ ರುದ್ರೇಗೌಡರ ವ್ಯಕ್ತಿತ್ವದ ಭಾಗವಾದ ರಾಜಕಾರಣ, ಸಮಾಜ ಸೇವೆ, ಕೈಗಾರಿಕೆಗಳ ವಿಸ್ತೃತ ಚರ್ಚೆಯನ್ನು ಯುವ ಪೀಳಿಗೆಗೆ ದಾಟಿಸಲು “ಶ್ರಮದಿಂದ ಸಾರ್ಥಕತೆಯೆಡೆಗೆ” ಎನ್ನುವ ವಿಚಾರ ಸಂಕಿರಣವನ್ನು ಆಯೋಜಿಸಲಾಗಿದೆ.ಮೂವರು ಸ್ಪೂರ್ತಿದಾಯಕ ಸಾಧಕರಿಂದ ಯುವಕರಿಗೆ ಮಾರ್ಗದರ್ಶನ ಮಾಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸ ಬಯಸುವವರು ಸಾಮಾಜಿಕ ಜಾಲತಾಣಗಳಲ್ಲಿ ಅನ್ನು ಅನುಸರಿಸಲು ಕೋರಲಾಗಿದೆ. ಶಿವಮೊಗ್ಗ ಜಿಲ್ಲೆಯ ಯುವಕ ಯುವತಿಯರು, ಯುವ ಉದ್ಯಮಿಗಳು, ಸಮಾಜ ಸೇವೆಯಲ್ಲಿ ತೊಡಗಿರುವವರು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಕೋರಿದರು.
ವಿಧಾನ ಪರಿಷತ್ ಮಾಜಿ ಸದಸ್ಯರು ಹಾಗೂ ಅಭಿನಂದನಾ ಸಮಿತಿಯ ಪ್ರಮುಖರಾದ ಆರ್. ಕೆ. ಸಿದ್ರಾಮಣ್ಣ ಅವರು ಮಾತನಾಡಿ, ಶಿವಮೊಗ್ಗದ ಮೌಲ್ಯಾಧಾರಿತ ರಾಜಕಾರಣಿ ಹಾಗೂ ಕೈಗಾರಿಕಾ ಕ್ಷೇತ್ರದ ಬಹುದೊಡ್ಡ ಸಾಧಕರು ರುದ್ರೇಗೌಡರು, ಸರಳ, ಸಜ್ಜನರು ಹಾಗೂ ಕೊಡುಗೈ ದಾನಿಯೂ ಆಗಿರುವ ಅವರು ನಿಸ್ವಾರ್ಥ ಸೇವೆಯೊಂದಿಗೆ ಸಮಾಜಕ್ಕೆ ಮಾದರಿ ಆಗಿದ್ದಾರೆ, 75 ವರ್ಷದ ತುಂಬಿದ ಹಿನ್ನೆಲೆಯಲ್ಲಿ ಅವರಿಗೆ ಅಭಿನಂದನೆ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಅಭಿನಂದನಾ ಸಮಿತಿಯ ಪ್ರಮುಖರಾದ ಎಸ್.ಎಸ್. ಜ್ಯೋತಿ ಪ್ರಕಾಶ್, ಉದ್ಯಮಿ, ಜಿಲ್ಲಾ ವಾಣಿಜ್ಯ ಸಂಘದ ಅಧ್ಯಕ್ಷ ಎನ್ . ಗೋಪಿನಾಥ್, ಓಪನ್ ಮೈಂಡ್ ವರ್ಲ್್ಡ ಸ್ಕೂಲ್ ನ ಟ್ರಸ್ಟಿ ಕೆ.ಕಿರಣ್ ಕುಮಾರ್, ಮಾಚೇನಹಳ್ಳಿ ಕೈಗಾರಿಕಾ ಸಂಘದ ಅಧ್ಯಕ್ಷರಾದ ರಮೇಶ್ ಹೆಗಡೆ, ಮಾಜಿ ಪಾಲಿಕೆ ಸದಸ್ಯ ವಿ.ವಿಶ್ವಾಸ್, ಉದ್ಯಮಿ ಹರ್ಷ ಕಾಮತ್, ಹಂಜಿ ರುದ್ರಣ್ಣ, ಬಾಳೆಕಾಯಿ ಮೋಹನ್ ಮತ್ತಿತರರು ಉಪಸ್ಥಿತರಿದ್ದರು.