ಶಿವಮೊಗ್ಗ,ಡಿ.೩೦: ಕೋರೊನ ಸಂದರ್ಭದಲ್ಲಿ ಬಿಜೆಪಿಯ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬಾರೀ ಭ್ರಷ್ಟಾಚಾರ ಮಾಡಿದ್ದು, ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆಯಾಗಬೇಕು ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಎಸ್. ಸುಂದರೇಶ್ ಆಗ್ರಹಿಸಿದರು.
ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,

ಜಿಲ್ಲಾ ಕಾಂಗ್ರೆಸ್ ಕೋರೊನಾ ಸಂದರ್ಭದಲ್ಲಿಯೇ ಭ್ರಷ್ಟಾಚಾರದ ಬಗ್ಗೆ ಬೆಳಕು ಚೆಲ್ಲಿತ್ತು. ರಾಜ್ಯ ಸರ್ಕಾರ ಸುಮಾರು ೪೦ ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದರೆ, ಕೇಂದ್ರ ಸರ್ಕಾರ ಕೂಡ ೩,೩೦೦ ಕೋಟಿ ಗೂ ಹೆಚ್ಚು ಭ್ರಷ್ಟಾಚಾರ ಮಾಡಿದೆ. ಆ ಸಂದರ್ಭದಲ್ಲಿ ರೋಗಿಗಳ ಸಾವಿನ ಜೊತೆ ಎರಡು ಸರ್ಕಾರಗಳು ಆಟವಾಡಿದ್ದವು ಎಂದರು.

ರಾಜ್ಯದಲ್ಲಿ ಶ್ರೀರಾಮುಲು ಮತ್ತು ಸುಧಾಕರ್ ಸಚಿವರಾಗಿದ್ದರು. ಇವರ ಕಾಲದಲ್ಲಿ ಸಾಕಷ್ಟು ಭ್ರಷ್ಟಾಚಾರವಾಗಿದೆ ಎಂದು ಬಿಜೆಪಿ ಪಕ್ಷದವರೇ ಆದ ಬಸವನಗೌಡ ಪಾಟೀಲ್ ಯತ್ನಾಳ್‌ಯವರು ಸುಮಾರು ೪೦ ಸಾವಿರ ಕೋಟಿ ಭ್ರಷ್ಟಾಚಾರವಾಗಿದೆ ಎಂದು ನೇರ ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಸತ್ಯವಿದೆ. ಸತ್ಯವನ್ನೇ ಹೇಳಿದ್ದಾರೆ, ಅವರು ಇಂತಹ ಭ್ರಷ್ಟಾಚಾರದ ಪಕ್ಷದಲ್ಲಿ ಇರಬಾರದು ಮತ್ತು ಅವರಿಂದಲೇ ತನಿಖೆಯನ್ನು ಆರಂಭಿಸಿದರೆ, ಎಲ್ಲ ಸತ್ಯಗಳು ಹೊರಬರುತ್ತವೆ ಎಂದರು.


ಆರೋಗ್ಯಕಿಟ್, ಆಕ್ಸಿಜನ್ ಸಿಲಿಂಡರ್, ಮಾಸ್ಕ್, ವೆಂಟಿಲೇಟರ್, ಬೆಡ್, ಔಷಧಿಗಳು, ಮಾತ್ರೆಗಳು, ಸ್ಯಾನಿಟೈಜರ್, ಸೇರಿದಂತೆ ಕೋರೊನಾ ಚಿಕಿತ್ಸೆಯ ಎಲ್ಲ ಪರಿಕರಗಳಿಗೂ ೧೦-೧೫ರಷ್ಟು ಹೆಚ್ಚು ಹಣವನ್ನು ಹಾಕಿದೆ. ಒಂದು ಮಾಸ್ಕ್‌ಗೆ ೪೫ ರೂ.ಗಳಿದ್ದರೆ ೪೫೦ ಚಾರ್ಜ್ ಮಾಡಲಾಗಿದೆ. ಹಾಗೆಯೇ ವೆಂಟಿಲೇಟರ್‌ಗೆ ೪ ಲಕ್ಷದಿಂದ ೧೮ ಲಕ್ಷದವರೆಗೆ ಮಾಡಲಾಗಿದೆ. ಬೆಡ್‌ಗಳಲ್ಲಿಯೂ ಕೂಡ ಒಂದು ದಿನಕ್ಕೆ ೮೦೦ ಇದ್ದರೆ, ೨೦ ಸಾವಿರದವರೆಗೂ ತೋರಿಸಲಾಗಿದೆ. ಹೀಗೆ ಖರೀದಿಯ ಎಲ್ಲಾ ಹಂತಗಳಲ್ಲೂ ೨೦-೩೦ ರಷ್ಟು ಹೆಚ್ಚು ಬಿಲ್ಲನ್ನು ತೋರಿಸಲಾಗಿದೆ. ಹಾಗೆಯೇ ವ್ಯಾಕ್ಸಿಲೇಷನ್‌ನಲ್ಲಿಯೂ ಕೂಡ ಕೋಟ್ಯಾಂತರ ಹಣ ಭ್ರಷ್ಟಾಚಾರವಾಗಿದೆ. ಒಟ್ಟಾರೆ ಕೋಟಿ ಕೋಟಿ ಹಣ ಕೋರೊನಾ ಸಂದರ್ಭದಲ್ಲಿ ಭ್ರಷ್ಟಾಚಾರವಾಗಿದ್ದು ಸ್ಪಷ್ಟವಾಗಿದೆ. ಅದೆಲ್ಲ ಈಗ ತನಿಖೆಯಾಗಬೇಕು ಎಂದರು.


ಪ್ರಧಾನಿ ಫಂಡ್‌ಗೆ ೬೦ ಸಾವಿರ ಕೋಟಿ ಹಣ ಸಂಗ್ರಹವಾಗಿತ್ತು. ಅದರಲ್ಲಿ ಕೇವಲ ೩೩೦೦ ಕೋಟಿ ಹಣ ಖರ್ಚು ಮಾಡಲಾಗಿದೆ ಅಷ್ಟೇ ಉಳಿದ ಹಣ ಎಲ್ಲಿಗೆ ಹೋಯಿತು. ಮತ್ತು ಕೈಗಾರಿಕಾ ಮರುಸ್ಥಾಪನೆಗಾಗಿ ಕೇಂದ್ರ ಸರ್ಕಾರ ೨೦ಲಕ್ಷ ಸಾವಿರ ಬಜೆಟ್‌ನ್ನು ಮಂಡಿಸಲಾಗಿತ್ತು. ಕೋರೋನ ಸಂದರ್ಭದಲ್ಲಿ ಮುಚ್ಚಿದ ಯಾವ ಕೈಗಾರಿಕೆಗಳು ಮತ್ತೆ ಸ್ಥಾಪನೆಯಾಗಿಲ್ಲ ಎಂದರು.


ಎಂ.ಪಿ. ಚುನಾವಣೆ ಹತ್ತಿರ ಬರುತ್ತಿದ್ದಂತ್ತೆಯೇ ಬಿಜೆಪಿಯವರು ಅಭಿವೃದ್ಧಿಯ ಬಗ್ಗೆ ಮಾತನಾಡದೇ, ಧರ್ಮದ ಹಿಂದೆ ಓಡಿದ್ದಾರೆ. ಆಯೋಧ್ಯೆಯ ರಾಮ ಎಲ್ಲರಿಗೂ ಸೇರಿದವರು, ಇವರಿಗೆ ಮಾತ್ರವಲ್ಲ. ಆದರೆ, ಈ ಬಿಜೆಪಿಯವರು ಮನೆಮನೆಗೆ ಹೋಗಿ ಮಂತ್ರಾಕ್ಷತೆಯನ್ನು ನೀಡುವ ಮೂಲಕ ಓಟು ಬೇಡುವ ಹುನ್ನಾರ ನಡೆಸಿದ್ದಾರೆ ಎಂದು ಟೀಕಿಸಿದರು.


ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಎಸ್.ಟಿ.ಚಂದ್ರಶೇಖರ್, ಕಲೀಂ ಪಾಷಾ, ಎಂ.ಪಿ.ದಿನೇಶ್ ಪಾಟೀಲ್, ಗಿರೀಶ್‌ರಾವ್ ಪಿ.ಎಸ್., ಪ್ರವೀಣ್‌ಕುಮಾರ್ ಎನ್.ಡಿ., ಚಂದನ್, ಅಪ್ರೀದಿ, ಮುಜಾಬಿನ್ ಪಾಶಾ ಮುಂತಾದವರು ಇದ್ದರು.

By admin

ನಿಮ್ಮದೊಂದು ಉತ್ತರ

error: Content is protected !!