ಶಿವಮೊಗ್ಗ, ಡಿ.೦೯: ವಿರೋಧ ಪಕ್ಷವಾಗಿ ಸಮರ್ಥವಾಗಿ ಸದನದಲ್ಲಿ ಕೆಲಸ ನಿರ್ವಹಿಸಲು ಬಿಜೆಪಿ ವಿಫಲವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಎಸ್. ಸುಂದರೇಶ್ ಹೇಳಿದರು.


ಅವರು ಇಂದು ಕಾಂಗ್ರೆಸ್ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಹಲವು ಸಮಸ್ಯೆಗಳು ಇವೆ, ಬರಗಾಲ ಬಂದಿದೆ, ರೈತರು ಸಂಕಷ್ಠದಲ್ಲಿದ್ದಾರೆ, ಕುಡಿಯುವ ನೀರಿಗೆ ತೊಂದರೆ ಇದೆ ಹೀಗೆ ಹಲವು ಸಮಸ್ಯೆಗಳಿಗೆ ಸಂಬಂಧಿಸಿದಂತೆ ಗಂಭೀರ ಚರ್ಚೆ ಮಾಡುವುದು ಬಿಟ್ಟು ಬೇಡವಾದ ವಿಚಾರವನ್ನು ಎತ್ತಿಕೊಂಡು ಸದನದ ಸಮಯವನ್ನು ಸಂಪೂರ್ಣವಾಗಿ ಹಾಳುಗೆಡವಿದ್ದಾರೆ ಎಂದು ಆರೋಪಿಸಿದರು.
ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ವಿಜಯೇಂದ್ರನಿಗೆ ಯಾವ ಅನುಭವವು ಇಲ್ಲ. ಕೇವಲ ಯಡಿಯೂರಪ್ಪನ ಮಗ ಎಂಬ ಹಿನ್ನಲೆಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ನೀಡಲಾಗಿದೆ

. ಸದನದಲ್ಲಿ ಏನು ಮಾತಾನಾಡಬೇಕು, ಹೇಗೆ ಮಾತನಾಡಬೇಕು ಎಂಬುವುದು ಗೊತ್ತಿಲ್ಲ. ಹಾಗೆಯೇ ಅಶೋಕ್‌ರವರಿಗೂ ಸಹ ಪ್ರಸ್ತುತ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತುವುದನ್ನೇ ಮರೆತಿದ್ದಾರೆ. ಅವರ ಪಕ್ಷದ ಶಾಸಕರೇ ಅವರಿಗೆ ಸಹಮತ ನೀಡಲಿಲ್ಲ. ಅವರ ಪಕ್ಷದಲ್ಲಿಯೇ ನಾಲ್ಕು ಗುಂಪುಗಳಾಗಿ ಬಿಟ್ಟಿದೆ. ಯತ್ನಾಳ್ ಒಂದು ಕಡೆ, ಈ ಇಬ್ಬರು ಒಂದು ಕಡೆ ಆಗಿದ್ದಾರೆ. ವಿಜಯೇಂದ್ರ ಮತ್ತು ಅಶೋಕ್ ಒಂಟಿಯಾಗಿಯೇ ಕಂಡರು ಎಂದರು.


ಯತ್ನಾಳ್ ಒಬ್ಬ ಹಿರಿಯ ರಾಜಕಾರಣಿ ಅಪಪ್ರಚಾರ ಮಾಡಲು ಸಮಯ ತೆಗೆದುಕೊಂಡರು, ತನ್ವೀರ್ ಫೀರಾ ಅವರೊಂದಿಗೆ ಕಾಂಗ್ರೆಸ್ ಮುಖಂಡರ ಸಂಬಂಧವಿದೆ ಎಂದರು. ಆದರೆ ಅವರ ತಂದೆಯವರೇ ತನ್ವಿರ್ ಜೊತೆ ವ್ಯವಹಾರ ಮಾಡಿದ್ದಾರೆ. ಅವರ ಜೊತೆ ಬಿಜೆಪಿ ರಾಷ್ಟ್ರ ನಾಯಕರು ಪೋಟೋ ತೆಗೆಸಿಕೊಂಡಿದ್ದಾರೆ. ಅವರ ಮೇಲೆ ಅವರೇ ಚಪ್ಪಡಿ ಎಳೆದುಕೊಂಡಿದ್ದಾರೆ. ಬೇಡವಾದ ವಿಷಯದ ಬಗ್ಗೆ ಅಪಪ್ರಚಾರ ಮಾಡಲು ಹೋದರೆ ಇದೇ ಗತಿ ಎಂದು ಕಟುಕಿದರು.


ರಾಜ್ಯಸ್ಥಾನ ಮಧ್ಯಪ್ರದೇಶ ಚುನಾವಣಾ ಫಲಿತಾಂಶಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಇ.ವಿ.ಎಂ. ಮಿಷನ್‌ಗಳ ದುರುಪಯೋಗವಾಗುತ್ತಿದೆ ಎಂದು ದೂರುಗಳು ಕೇಳಿ ಬರುತ್ತಿದೆ. ಈಗಾಗಲೇ ಸಂಶಯ ಭಲವಾಗುತ್ತಿದೆ. ಈ ತಾಂತ್ರಿಕ ಕಾಲದಲ್ಲಿ ಏನು ಬೇಕಾದರೂ ಮಾಡಬಹುದು. ಚುನಾವಣಾ ಆಯೋಗ ಕೇಂದ್ರ ಸರ್ಕಾರದ ಮಾತನ್ನು ಕೇಳುತ್ತಿದೆ. ಇವಿಎನ್ ಮಿಷನ್ ಬಿಟ್ಟು ಬ್ಯಾಲೆಟ್ ಪೇಪರ್‌ನಲ್ಲಿ ಮತ ಚಲಾವಣೆಯಾಗಬೇಕು ಎಂಬುವುದು ನಮ್ಮ ಒತ್ತಾಯ. ಆದರೆ ಇದಕ್ಕೆ ಬಿಜೆಪಿ ಒಪ್ಪುತ್ತಿಲ್ಲ. ಚುನಾವಣಾ ಆಯೋಗದ ಬಗ್ಗೆ ನಮಗೆ ನಂಬಿಕೆ ಇಲ್ಲಾ ಆದ್ದರಿಂದ ಈ ಚುನಾವಣೆಗೆ ಸಂಬಂಧಿಸಿದಂತೆ ಇವಿಎಂ ದುರುಪಯೋಗವಾದ ಬಗ್ಗೆ ಸುಪ್ರೀಂ ಕೋರ್ಟ್‌ನ ಮೊರೆ ಹೋಗುತ್ತೇವೆ ಎಂದರು.


ಇದೇ ಸಂದರ್ಭದಲ್ಲಿ ನಟಿ ಲೀಲಾವತಿ ನಿಧನಕ್ಕೆ ಸಂತಾಪ ವ್ಯಕ್ತಪಡಿಸಲಾಯಿತು. ಮತ್ತು ಸೋನಿಯಾ ಗಾಂಧಿಯವರ ಹುಟ್ಟುಹಬ್ಬಕ್ಕೆ ಅಭಿನಂದನೆ ಸಲ್ಲಿಸಲಾಯಿತು.


ಪತ್ರಿಕಾ ಗೋಷ್ಠಿಯಲ್ಲಿ ಪ್ರಮುಖರಾದ ಚಂದ್ರಭೂಪಾಲ್, ಎಸ್.ಟಿ. ಚಂದ್ರಶೇಖರ್, ಈಕ್ಕೇರಿ ರಮೇಶ್, ಮುಜೀಬ್, ಚಂದನ್, ಖಲೀಂ ಪಾಶಾ, ಶಾಮೀನ್ ಬಾನು, ಎನ್.ಡಿ. ಪ್ರವೀಣ್ ಕುಮಾರ್ ಸೇರಿದಂತೆ ಹಲವರಿದ್ದರು.

ನಾನು ಪ್ರಬಲ ಅಭ್ಯರ್ಥಿ
ಶಿವಮೊಗ್ಗ ಕ್ಷೇತ್ರದ ಲೋಕಸಭಾ ಚುನಾವಣೆಗೆ ನಾನು ಪ್ರಬಲ ಅಭ್ಯರ್ಥಿಯಾಗಿದ್ದೇನೆ. ಈ ಬಗ್ಗೆ ಟಿಕೇಟ್ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಪಕ್ಷವನ್ನು ಸಂಘಟಿಸಿದ ಅನುಭನ ನನಗಿದೆ. ನಾನು ಕೂಡ ಪಕ್ಷಕ್ಕಾಗಿ ದುಡಿದಿದ್ದೇನೆ. ಟಿಕೇಟ್ ಸಿಕ್ಕೆ ಸಿಗುತ್ತದೆ ಎಂಬ ವಿಶ್ವಾಸವನ್ನು ಹೆಚ್. ಎಸ್. ಸುಂದರೇಶ್ ವ್ಯಕ್ತಪಡಿಸಿದರು.
ಎಂ.ಪಿ. ಸ್ಥಾನಕ್ಕಾಗಿ ಕಾಂಗ್ರೆಸ್‌ನಲ್ಲಿ ನನ್ನ ಹಾಗೆಯೇ ಹಲವರು ಆಕಾಂಕ್ಷಿಗಳಿದ್ದಾರೆ ಎನ್ನುವುದು ನಿಜ. ಹೈಕಮಾಂಡ್ ಏನು ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾವು ಬದ್ಧರಾಗಿದ್ದೇವೆ. ಯಾರಿಗೆ ಟಿಕೇಟ್ ಸಿಕ್ಕರೂ ಕೂಡ ಅವರನ್ನು ಗೆಲ್ಲಿಸುತ್ತೇವೆ. ಈ ಬಾರಿ ಶಿವಮೊಗ್ಗವು ಸೇರಿದಂತೆ ರಾಜ್ಯದಲ್ಲಿ ಅತಿ ಹೆಚ್ಚು ಎಂ.ಪಿ. ಸ್ಥಾನವನ್ನು ನಾವು ಗೆಲ್ಲುತ್ತೇವೆ ಎಂದರು.

By admin

ನಿಮ್ಮದೊಂದು ಉತ್ತರ

error: Content is protected !!