ಶಿವಮೊಗ್ಗ, ಡಿ.೦೬:
ಇಂದಿನಿಂದ ಆರಂಭವಾಗಲಿರುವ ಹಳೆ ಜೈಲು ಆವರಣ ದಲ್ಲಿ ಆರಂಭವಾಗಲಿರುವ ಸ್ವದೇಶಿ ಜಾಗರಣ ಮಂಚ್ ಕರ್ನಾಟಕ ಸ್ವದೇಶೀ ಮೇಳಕ್ಕೆ ಭರ್ಜರಿ ತಯಾರಿ ನಡೆದಿದೆ.
ಇಂದು ಸಂಜೆ ಇದರ ಉದ್ಘಾಟನಾ ಕಾರ್ಯಕ್ರಮ ಇರುತ್ತದೆ. ದಿನಾಂಕ ಡಿ.೦೬ರಿಂದ ರಿಂದ ಡಿ.೧೦ರ ತನಕ ಐದು ದಿನಗಳ ಬೃಹತ್ ಸ್ವದೇಶಿ ಮೇಳದ ಯಶಸ್ವಿಗಾಗಿ ಇಂದು ಬೆಳಗ್ಗೆ ಮೇಳದ ಆವರಣದಲ್ಲಿ ಗಣ ಹೋಮ ಮತ್ತು ಸಂಕಲ್ಪ ಪ್ರಾರ್ಥನೆ ನಡೆಯಿತು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ದಕ್ಷಿಣ ಪ್ರಾಂತ ಕಾರ್ಯವಾಹಕರಾದ ಪಟ್ಟಾಬಿರಾಮ್, ವಿಭಾಗ ಕಾರ್ಯವಾಹಕರಾದ ಗಿರೀಶ್ ಕಾರಂತ್, ಸಹ ಕಾರ್ಯವಾಹ ಮಧುಕರ್ ಮತ್ತೂರು, ಜಿಲ್ಲಾ ಕಾರ್ಯವಾಹ ಬಿ ಎ ರಂಗನಾಥ್, ಮೇಳದ ಉಸ್ತುವಾರಿಗಳಾದ ಜಗದೀಶ್, ಪ್ರಮುಖರಾದ ಡಾ.ಧನಂಜಯ್ ಸರ್ಜಿ, ಬಿ ಎಂ ಕುಮಾರಸ್ವಾಮಿ, ಹರ್ಷ ಕಾಮತ್, ಸಚ್ಚಿದಾನಂದ್, ಡಾ.ರವಿ ಕಿರಣ್, ನವೀನ್ ಸುಬ್ರಮಣ್ಯ, ಎಸ್ ದತ್ತಾತ್ರಿ, ಎಸ್.ಎಸ್. ಜ್ಯೋತಿ ಪ್ರಕಾಶ್, ಹಾಗೂ ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು.
ಮೇಳದಲ್ಲಿ ಈಗಾಗಲೇ ೨೨೪ ಸ್ಟಾಲ್‌ಗಳಿವೆ. ವಿವಿಧ ಬಗೆಯ ಕರ ಕುಶಲ ವಸ್ತುಗಳು, ತಿನಿಸು ಅಂಗಡಿಗಳು, ವಾಣಿಜ್ಯಕ್ಕೆ ಸಂಬಂಧಿಸಿದಂತೆ ಶೋ ರೂಂಗಳು, ಮಕ್ಕಳ ಆಟಿಕೆಗಳು ಹೀಗೆ ಹಲವು ಆಟೋಟ ವಸ್ತುಗಳು ಪ್ರದರ್ಶನದಲ್ಲಿ ಮೇಳೈಸಲಿವೆ. ದೇಶಿಯ ಆಹಾರ, ಕ್ರೀಡೆ, ಜಾನಪದ ಕಲಾ ವೈಭವ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ನಡೆಯಲಿವೆ.
ಆಹಾರ ಪ್ರಿಯರಿಗಂತೂ ಹಬ್ಬವೇ ಸರಿ, ಮೇಲ್ಕೋಟೆ ಪುಳಿಯೋಗರೆ, ದಾವಣಗೆರೆ ಬೆಣ್ಣೆದೋಸೆ, ಬಂಗಾರಪೇಟೆ ಚಾಟ್ಸ್, ಹುಬ್ಬಳ್ಳಿ ಗಿರಿಮಿಟ್ ಸಿರಿದಾನ್ಯಗಳ ರೊಟ್ಟಿ, ವಿವಿಧ ಬಗೆಯ ಚಟ್ನಿ, ಹಾಗೂ ಚಟ್ನಿ ಪುಡಿಗಳು, ಮೇಳದಲ್ಲಿ ಭರ್ಜರಿಯಾಗಿ ಕಾಣಿಸಿಕೊಳ್ಳಲಿದೆ.
ಆರ್ಯುವೇದ ಶಿಬಿರ ಸೇರಿದಂತೆ ಸಂವಾದ, ಯಕ್ಷಗಾನ, ಯೋಗಾಸನ, ಜಾದೂ ಪ್ರದರ್ಶನ, ಡಾ. ಪ್ರವೀಣ್ ಗೋಡ್ಖಿಂಡಿ, ರೈತರೊಂದಿಗೆ ಸಂವಾದ ಮುಂತಾದ ಕಾರ್ಯಕ್ರಮಗಳು ಪ್ರತಿದಿನವೂ ನಡೆಯಲಿದೆ.