ತಾಳ್ಮೆಯ ನಡುವೆ ಒಂದಿಷ್ಟು ದುಗುಡ ಕಂಡು ಕಾಣಿಸಿಕೊಳ್ಳದಂತೆ ಮುದುಡಿದ್ದು ಸುಳ್ಳೇನಲ್ಲ ಅಲ್ಲವೇ?


ಗಜೇಂದ್ರ ಸ್ವಾಮಿ
ಶಿವಮೊಗ್ಗ, ಡಿ.5:
ನಿಮಗೆ 75 ವರ್ಷ ವಯಸ್ಸಾಗುತ್ತಿದೆ. ವಯಸ್ಸಾಗಿದೆ. ಇನ್ನು ಮುಂದೆ ನೀವು ಚುನಾವಣಾ ಕಣದಲ್ಲಿ ಇರುವುದು ಬೇಡ. ಹೊಸಬರಿಗೆ ಅವಕಾಶ ನೀಡಬೇಕಾಗಿದೆ. ತಾವು ಪಕ್ಷದ ಕೆಲಸ ಮಾಡಿ ಎಂದು ನಿಯತ್ತಾಗಿ ಉದ್ದುದ್ದ ಭಾಷಣ ಮಾಡಿದ್ದ ಬಿಜೆಪಿಯ ಕೇಂದ್ರ ನಾಯಕರು ಈಗ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ.


ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟಕ್ಕಿಳಿದಿದ್ದ ಭಾರತೀಯ ಜನತಾ ಪಕ್ಷ ಹೊಸತನದ ಪ್ರಯೋಗಕ್ಕೆ ಮುಂದಾಗಿತ್ತು. ಅಂತೆಯೇ ಹಿರಿಯ ನಾಯಕರುಗಳನ್ನು ವಯಸ್ಸಾದ ಹಿನ್ನೆಲೆಯಲ್ಲಿ ಚುನಾವಣೆಯಿಂದ ಸ್ಪರ್ಧಿಸದಂತೆ ಮಾಡುವ ಜೊತೆಗೆ ಪಕ್ಷದ ಚೌಕಟ್ಟಿನಲ್ಲಿ ಅವರಿಗೆ ಕೆಲಸ ಮಾಡಲು ಹಚ್ಚಿ, ಹೊಸಬರಿಗೆ ಅವಕಾಶ ನೀಡಲು ಮುಂದಾಗಿತ್ತು.


ಈ ಪ್ರಯೋಗದ ಹಿನ್ನೆಲೆ ಗಮನಿಸಿದಾಗ ಶಿವಮೊಗ್ಗದ ಶಾಸಕ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಕೆಎಸ್ ಈಶ್ವರಪ್ಪ ಅವರನ್ನು ಹೊರತುಪಡಿಸಿ ಉಳಿದ ಬಹಳಷ್ಟು ನಾಯಕರು ಪಕ್ಷದ ವಿರುದ್ಧ ಸೆಡ್ಡು ಮಸೆದು ಬೇರೆ ಪಕ್ಷದಲ್ಲಿ ಗುರುತಿಸಿಕೊಂಡದ್ದೂ ಹೌದು. ಈ ಎಲ್ಲ ಹಿನ್ನೆಲೆ ಗಮಿನಿಸಿದಾಗ ಹೊಸ ಪ್ರಯೋಗ ಫಲಪ್ರದವಾಗಲೇ ಇಲ್ಲ. ಹಿರಿಯರು ಇರಲೇಬೇಕು ಎನ್ನುವ ಕಾಳಜಿ ಕಳಕಳಿ ಹೊತ್ತ ಕಾಂಗ್ರೆಸ್ ಹಿರಿಯರಿಗೆ ಕಿರಿಯರಷ್ಟೇ ಸಮಾನ ಅವಕಾಶಗಳನ್ನು ನೀಡಿ ಚುನಾವಣಾ ಅಂಕಣದಲ್ಲಿ ಸ್ಪರ್ಧಿಸಿತ್ತು.
ಆಗ ಮಾಜಿ ಮುಖ್ಯಮಂತ್ರಿ ಬಿಜೆಪಿಯ ಜಗದೀಶ್ ಶೆಟ್ಟರ್ ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಸೇರಿದಂತೆ ಹಲವರು ಬಿಜೆಪಿ ಪಕ್ಷದ ಚೌಕಟ್ಟಿನಿಂದ ಹೊರಬಂದದ್ದು ಗಮನೀಯವಾಗಿತ್ತು. ಅಂತೆಯೇ ಪಲಿತಾಂಶ ಪ್ರಕಟವಾದ ನಂತರ ಬಿಜೆಪಿ ತನ್ನ ಕಳೆದ ಬಾರಿಯ ವರ್ಚಸ್ಸನ್ನು ಸಹ ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಅಂತೆಯೇ ಕಾಂಗ್ರೆಸ್ ಅತ್ಯಧಿಕ ಬಹುಮತದೊಂದಿಗೆ ಕರ್ನಾಟಕ ರಾಜ್ಯ ಸರ್ಕಾರದ ಆಡಳಿತ ಚುಕ್ಕಾಣಿ ಹಿಡಿಯಿತು. ಇದು ರಾಷ್ಟ್ರೀಯ ಕಾಂಗ್ರೆಸ್ ನಲ್ಲಿ ಹೊಸತನವನ್ನು ಬೆಳೆಸಿ ಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಹೊಸ ಪ್ರಯೋಗಗಳಿಗೆ ಮುಂದಾಗಿತ್ತು.


ಇಲ್ಲಿನ ಸೋಲನ್ನು ಗಂಭೀರವಾಗಿ ಗಮನಿಸಿದ ಕೇಂದ್ರ ಬಿಜೆಪಿ ನಾಯಕರು ಈಗ ಹಿರಿಯರಿಗೆ ಅವಕಾಶ ನೀಡುವ ವಯೋಮಿತಿಯ ಆಧಾರ ತೆಗೆದುಹಾಕುವ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಅಂತೆಯೇ ಈಗ ರಾಷ್ಟ್ರದ ಮೂರು ರಾಜ್ಯಗಳಲ್ಲಿ ಬಿಜೆಪಿ ಕಂಡ ಜಯವೂ ಹೌದು. ಏನಾದರೂ ಆಗಲಿ ಕರ್ನಾಟಕ ಬಿಜೆಪಿಯ ಹೊಸ ಪ್ರಯೋಗಕ್ಕೆ ವೇದಿಕೆಯಾಗಬೇಕಿತ್ತಾ? ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದಾಗಲೇ ಪಕ್ಷಕ್ಕೆ ಅರ್ಧ ವರ್ಚಸ್ಸು ಕಡಿಮೆಯಾಗಿತ್ತು. ಅಂತೆಯೇ ನಂತರ ಬಂದ ವಿಧಾನಸಭಾ ಚುನಾವಣೆಯಲ್ಲಿ ಈಶ್ವರಪ್ಪ, ಜಗದೀಶ್ ಶೆಟ್ಟರ್, ಲಕ್ಷ್ಮಣ್ ಸವದಿ ಸೇರಿದಂತೆ ಹಲವಾರು ನಾಯಕರನ್ನು ಚುನಾವಣೆಯಿಂದ ದೂರ ಸರಿಯುವಂತೆ ಮಾಡಿದ್ದರು. ಆಗ ಪಕ್ಷದ ಹಿರಿಯರ ಮಾತಿಗೆ ಮನ್ನಣೆ ನೀಡಿದ ರಾಜ್ಯದ ಏಕೈಕ ನಾಯಕ ಎಂದರೆ ಅದು ಈಶ್ವರಪ್ಪ ಮಾತ್ರ. ನಿಕಟ ಪೂರ್ವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೊದಲೇ ತಾವು ನಂತರದ ಚುನಾವಣಾ ರಾಜಕಾರಣದಿಂದ ದೂರ ಇರುವುದಾಗಿ ತಿಳಿಸಿದ್ದರು.


ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ಅವರೇನಾದರೂ ಪಕ್ಷದ ಹಿರಿಯರ ಮಾತಿಗೆ ಮನ್ನಣೆ ನೀಡಿದ್ದರೆ ಬಿಜೆಪಿ ಇನ್ನೊಂದಿಷ್ಟು ಸ್ಥಾನಗಳನ್ನು ಪಡೆಯಬಹುದಿತ್ತೇನೋ?
ಹೊಸ ಪ್ರಯೋಗದ ಮೂಲಕ ಭಾರತೀಯ ಜನತಾ ಪಕ್ಷ ಕರ್ನಾಟಕವನ್ನು ವೇದಿಕೆ ಮಾಡಿಕೊಂಡು ಬಿಜೆಪಿ ಹಿರಿಯ ನಾಯಕನನ್ನು ಬಲಿಪಶು ಮಾಡಿದ್ದು ಎಷ್ಟರಮಟ್ಟಿಗೆ ಸರಿ? ಅದಕ್ಕೆ ಕರ್ನಾಟಕವೇ ಬೇಕಾಗಿತ್ತಾ ಎಂಬ ಗಂಭೀರ ಪ್ರಶ್ನೆ ಹಿಡಿದು ಪ್ರಶ್ನಿಸಿದಾಗ ಹೊರಬಂದ ಉತ್ತರಗಳು ಭಿನ್ನ ವಿಭಿನ್ನ.
ಇಂತಹದೊಂದು ಸುದ್ದಿಗೆ ಕಾರಣವಾಗಿದ್ದು ನಿನ್ನೆ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಅವರ ಪತ್ರಿಕಾಗೋಷ್ಠಿಯಲ್ಲಿ ಕೇಳಿದ ಪ್ರಶ್ನೆಯೊಂದು ಹೀಗಿತ್ತು. ಬರುವ ಚುನಾವಣೆಯಲ್ಲಿ ಮತ್ತೆ ಮೋದಿ ಅವರೇ ಪ್ರಧಾನಿಯಾಗುತ್ತಾರಾ? ಅವರಿಗೆ 75 ವರ್ಷ ವಯಸ್ಸಾಗಲ್ವಾ? ಅವಾಗ ಅವರೇ ಇರ್ತಾರಾ? ಎಂದು “ತುಂಗಾತರಂಗ” ಪ್ರಶ್ನಿಸಿದಾಗ ಈಶ್ವರಪ್ಪ ಸಮಗ್ರ ವಿವರ ನೀಡಿದ್ದು ಹೀಗಿತ್ತು. ಅವಕಾಶ ನೀಡಲು ಪ್ರಯೋಗಾತ್ಮಕವಾಗಿ ಹೊಸಬರಿಗೆ ಅವಕಾಶ ನೀಡಲು ಬಿಜೆಪಿ ನಾಯಕರುಗಳು ಹಿರಿಯರನ್ನು ಪಕ್ಷದ ಚೌಕಟ್ಟಿನಲ್ಲಿ ಉಳಿಸಲು ಹಾಗೂ ಪಕ್ಷವನ್ನು ಅಧಿಕಾರಕ್ಕೆ ತರಲು ನಿರ್ಧರಿಸಿದ್ದರು. ಕರ್ನಾಟಕ ರಾಜ್ಯದಲ್ಲಿ ಕಂಡ ಸೋಲಿನ ಹಿನ್ನೆಲೆಯಲ್ಲಿ ಈ ನಿರ್ಣಯವನ್ನು ವಾಪಸ್ ಪಡೆಯಲಾಗಿದೆ. ಮೋದಿಯವರು ಮುಂದಿನ ಐದು ವರ್ಷಗಳ ಕಾಲವೂ ಮತ್ತೆ ಪ್ರಧಾನಿಯಾಗುತ್ತಾರೆ ಎಂದರು.
ನಿಮಗೆಲ್ಲಾ ಅನ್ಯಾಯವಾಗಲಿಲ್ಲವೇ ಎಂದು ಪ್ರಶ್ನೆಗೆ ಅತ್ಯಂತ ತಾಳ್ಮೆಯಿಂದಲೇ ಬೇಸರ ವ್ಯಕ್ತಪಡಿಸದೆ, ಇದೊಂದು ಪ್ರಯೋಗ ಅಷ್ಟೇ. ಹೊಸಬರಿಗೆ ಅವಕಾಶ ನೀಡಬೇಕು ಎಂಬುದು ಮುಖ್ಯ ಉದ್ದೇಶವಾಗಿತ್ತು. ಪಕ್ಷದ ಗೆಲುವುಗಳಿಗೆ ನಾನು ಸದಾ ಸಿದ್ದ ಯಾವುದೇ ಕಾರಣಕ್ಕೂ ಬೇಸರ ಎಂಬುದು ನಮಗಲ್ಲ ಅನ್ಯಾಯ ಏನು ಆಗಿಲ್ಲ ಎಂದು ಹೇಳಿದರು.
ಅವರ ತಾಳ್ಮೆಯ ನಡುವೆ ಒಂದಿಷ್ಟು ದುಗುಡ ಕಂಡು ಕಾಣಿಸಿಕೊಳ್ಳದಂತೆ ಮುದುಡಿದ್ದು ಸುಳ್ಳೇನಲ್ಲ ಅಲ್ಲವೇ?

By admin

ನಿಮ್ಮದೊಂದು ಉತ್ತರ

You missed

error: Content is protected !!