” ಆದಿಶಕ್ತಿ ಸ್ವರೂಪಿಣಿ ಹಾಸನಾಂಬೆಗೆ ಹಿಂದಿನ ವರುಷ ಹಚ್ಚಿಟ್ಟಿದ್ದ ದೀಪವು ಆರದೇ, ಮುಡಿಸಿದ ಹೂ ಬಾಡದೇ ಹಾಗೂ ನೈವೇದ್ಯಕ್ಕಿಟ್ಟ ಅಕ್ಕಿಯು ಅನ್ನವಾಗಿರುವ ವಿಸ್ಮಯ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಭಕ್ತರು ಪುನೀತರಾಗುತ್ತಾರೆ. “

     ಹಾಸನ ಎಂದರೆ ತಕ್ಷಣ ನೆನಪಾಗುವುದು ಬೇಲೂರು-ಹಳೇಬೀಡಿನ ವಿಶ್ವವಿಖ್ಯಾತ ಶಿಲ್ಪಕಲೆ,ಹೊಯ್ಸಳರ ವಾಸ್ತುಶಿಲ್ಪಕ್ಕಾಗಿ ಪ್ರಪಂಚದಾದ್ಯಂತ ಹಾಸನ ಪ್ರಖ್ಯಾತವಾಗಿದೆ. ಹಾಸನ ಎಂಬ ಹೆಸರು, ಸಿಂಹಾಸನ ಪುರಿ ಎಂಬ ಹೆಸರಿನಿಂದ ಬಂದಿರುವ ಐತಿಹ್ಯವಿದೆ. ಈ ಪ್ರದೇಶಕ್ಕೆ ಹಾಸನ ಎಂಬ ಹೆಸರು ಬರಲು ಮತ್ತೊಂದು ಕಾರಣ ಜಿಲ್ಲೆಯ ಅಧಿದೇವತೆ, ಶಕ್ತಿ ದೇವತೆ ಹಾಸನಾಂಬೆ.

     ಸಪ್ತಮಾತ್ರಿಕೆ ಎಂದು ಕರೆಯಲ್ಪಡುವ ಹಾಸನಾಂಬೆ ದೇವಾಲಯ ವರ್ಷಕ್ಕೊಮ್ಮೆ ಬಾಗಿಲು ತೆಗೆಯುವ ವಿಶಿಷ್ಟ ಪದ್ಧತಿಯಿಂದ ಅತ್ಯಂತ ಪ್ರಸಿದ್ಧಿ ಪಡೆದಿದ್ದು, ದೀಪಾವಳಿ ಸಂದರ್ಭದಲ್ಲಿ ದೇಶ-ವಿದೇಶಗಳಿಂದ ಪ್ರವಾಸಿಗರು ಹಾಸನಾಂಬೆಯ ದೇವಾಲಯಕ್ಕೆ ಬೇಟಿನೀಡಿ ಅಪರೂಪದ ದೇವಿಯ ದಿವ್ಯದರ್ಶನ ಮಾಡುತ್ತಾರೆ.

ಹಾಸನಾಂಬೆಯ ಪೂಜಾ ವಿಧಾನ:- ಅಶ್ವಯುಜ ಮಾಸದ ಹುಣ್ಣಿಮೆಯ ನಂತರ ಬರುವ ಗುರುವಾರದಂದು ಹಾಸನಾಂಬೆಯ ಬಾಗಿಲನ್ನು ತೆರೆಯುವ ದಿನ. ಎಲ್ಲಾ ತಳವಾರ ಮನೆತನದವರು ಹಾಜರಿರುತ್ತಾರೆ. ಗರ್ಭಗುಡಿಯ ಮುಂದೆ ಬಾಳೆಯ ಕಂದನ್ನು ಅರಸುಮನೆತನದವರಿಂದ ನೆಟ್ಟು ದೇವಿಯನ್ನು ಭಜಿಸುತ್ತಾ ಮನೆತನದವರಾದ ನರಸಿಂಹರಾಜ ಅರಸು ಬಾಳೆ ಕಂದನ್ನು ಕತ್ತರಿಸಿದ ನಂತರವೇ ದೇವಾಲಯದ ಬಾಗಿಲನ್ನು ತೆರೆಯುವುದು ಇಲ್ಲಿನ ಸಂಪ್ರದಾಯ.

    ಗರ್ಭಗುಡಿಯ ಬಾಗಿಲು ತೆರೆದ ಕೂಡಲೇ ಭಕ್ತರು ಹಾಸನಾಂಬೆಯ ದರ್ಶನ ಮಾಡಬಾರದು ಎನ್ನುವ ನಿಯಮವಿದೆ. ಇದರಿಂದ ಅಪಾಯವಾಗುವ ಸಾಧ್ಯತೆ ಹೆಚ್ಚು ಎನ್ನುವುದು ಜನರ ನಂಬಿಕೆ. ಈ ಕಾರಣಕ್ಕಾಗಿ ದೃಷ್ಟಿ ನಿವಾರಣೆಗೆ ಬಾಳೆ ಮರವನ್ನು ಕಡಿದ ಬಳಿಕ ಮರುದಿನ ಭಕ್ತರಿಗೆ ಪ್ರವೇಶವನ್ನು ನೀಡಲಾಗುತ್ತದೆ. ಮಾರನೇ ದಿನ ಹಾಸನಾಂಬೆಗೆ ಯಾವುದೇ ರೀತಿಯ ಅಲಂಕಾರವನ್ನು ಮಾಡಲಾಗುವುದಿಲ್ಲ, ಎರಡನೇ ದಿನ ದೇವಿಯ ಆಭರಣ, ವಸ್ತ್ರಗಳನ್ನು ಜಿಲ್ಲಾ ಖಜಾನೆಯಿಂದ ಪಲ್ಲಕ್ಕಿಯೊಂದಿಗೆ ದೇವಾಲಯಕ್ಕೆ ತಂದು ತಾಯಿಯನ್ನು ಅಲಂಕರಿಸಿ ಪೂಜೆ ಮಾಡಿ, ನೈವೇದ್ಯಗಳನ್ನು ಅರ್ಪಿಸಲಾಗುತ್ತದೆ.

    ದೇವಿಯ ವಸ್ತ್ರಗಳನ್ನು ಹುಣಸಿನ ಕೆರೆಯಲ್ಲಿರುವ ಮಡಿವಾಳರು ಒಗೆದ ನಂತರ ಪುರೋಹಿತರು ಮಡಿಯಲ್ಲಿ ಅಮ್ಮನವರ ಮೀಸಲು ಮನೆಯಲ್ಲಿ ನಮಸ್ಕರಿಸಿ ಇಡುತ್ತಾರೆ.ಹತ್ತರಿಂದ ಹದಿನೈದು ದಿನಗಳ ಕಾಲ ಹಾಸನಾಂಬೆಯ ದರ್ಶನ ಇರಲಿದೆ. ಬಲಿಪಾಡ್ಯಮಿಯಂದು ತುಪ್ಪದ ದೀಪವನ್ನು ಬೆಳಗಿಸಿ, ಹಾಸನಾಂಬೆಯ ಗರ್ಭಗುಡಿಯೊಳಗೆ ಇಡಲಾಗುತ್ತದೆ. ಜೊತೆಗೆ ಹೂವುಗಳೊಂದಿಗೆ,ಬೇಯಿಸಿದ ಅನ್ನವನ್ನು ನೈವೇದ್ಯವಾಗಿ ಇಡಲಾಗುತ್ತದೆ. ಪವಾಡ ವೆಂದರೆ ಮುಂದಿನ ವರ್ಷ ಬಾಗಿಲು ತೆಗೆಯುವವರೆಗೂ ದೀಪ ಉರಿಯುತ್ತಲೇ, ಇದ್ದ ಹೂವುಗಳು ತಾಜಾ ವಾಗಿರುತ್ತದೆ ಹಾಗೂ ಪ್ರಸಾದವು ಕೂಡ ಹಾಳಾಗದೆ ಇರುತ್ತದೆ.

ಸ್ಥಳಪುರಾಣ :- ವಾಯು ವಿಹಾರಕ್ಕೆಂದು ಬಂದಿದ್ದ ಸಪ್ತ ಮಾತೃಕೆಯರಲ್ಲಿ ವೈಷ್ಣವಿ, ಮಹೇಶ್ವರಿ ಹಾಗೂ ಕೌಮಾರಿಯರು ಈ ದೇವಾಲಯದಲ್ಲಿ ಹುತ್ತದ ರೂಪದಲ್ಲಿ ನೆಲೆಸಿದರೆ, ಬ್ರಾಹ್ಮಿ ದೇವಿಯು ಕೆಂಚಮ್ಮನ ಹೊಸಕೋಟೆಯಲ್ಲಿ ನೆಲೆಸುತ್ತಾಳೆ. ಇನ್ನುಳಿದ ಚಾಮುಂಡಿ, ವರಾಹಿ, ಇಂದ್ರಾಣಿ ಯರು ನಗರದ ಮಧ್ಯಭಾಗದಲ್ಲಿರುವ ದೇವಿಗೆರೆಯಲ್ಲಿ ನೆಲೆಸಿದರು ಎಂಬುದು ಪುರಾಣಗಳಿಂದ ತಿಳಿದು ಬರುತ್ತದೆ.

      ಐತಿಹಾಸಿಕ ಕಥೆಯ ಪ್ರಕಾರ ಹಾಸನವು ಚೋಳರ ಅರಸರ ಅಧಿಪತಿಯಾದ ಬುಕ್ಕ ನಾಯಕ ಮತ್ತು ಅವನ ವಂಶಸ್ಥರಾದ ಹೊಯ್ಸಳರಿಗೂ ಪೂರ್ವ ಕಾಲದಲ್ಲಿ ಇದು ಗಂಗರ ಆಡಳಿತಕ್ಕೆ ಒಳಪಟ್ಟಿತ್ತು, ಬುಕ್ಕ ನಾಯಕನ ನಂತರ 12ನೆಯ ಶತಮಾನದಲ್ಲಿ ಕೃಷ್ಣಪ್ಪನಾಯಕ ಎಂಬ ಪಾಳೇಗಾರನಿಗೆ ಸೇರಿತ್ತು, ನಾಯಕನು ಒಮ್ಮೆ ಪ್ರಯಾಣ ಹೊರಟಾಗ ಮೊಲವೊಂದು ಅಡ್ಡ ಬಂದು ಪಟ್ಟಣವನ್ನು ಪ್ರವೇಶಿಸಿತು. ಈ ಅಪಶಕುನದಿಂದ ನಾಯಕನು ನೊಂದುಕೊಂಡನು, ಆಗ ಅವನಿಗೆ ಹಾಸನಾಂಬೆ ಪ್ರತ್ಯಕ್ಷಳಾಗಿ ನೊಂದುಕೊಳ್ಳಬೇಡ ಈ ಸ್ಥಳದಲ್ಲಿ ಕೋಟೆಯನ್ನು ಕಟ್ಟಿ ಎಂದು ಹೇಳಿದಳಂತೆ, ಹೀಗಾಗಿ ಕೋಟೆಯನ್ನು ಕಟ್ಟಿದ ಕೃಷ್ಣಪ್ಪನಾಯಕನು ಒಂದು ಕೋಟೆಯನ್ನು ಕಟ್ಟಿ ಅದಕ್ಕೆ ಹಾಸನಾಂಬ ಎಂದು ಹೆಸರಿಟ್ಟನು, ಹಾಸನ ತಾಲೂಕಿನ ಕುದುರೆಗುಂದಿ ಎಂಬ ಗ್ರಾಮದಲ್ಲಿರುವ ಕ್ರಿ. ಶ.1140 ರ ವೀರಗಲ್ಲಿನ ಶಿಲಾ ಶಾಸನದಲ್ಲಿ ಇದನ್ನು ವಿವರಿಸಲಾಗಿದೆ.

      ಹಾಸನಾಂಬೆ ದೇವಾಲಯದ ಬಗ್ಗೆ ಮತ್ತೊಂದು ಸ್ವಾರಸ್ಯಕರವಾದ ಸಂಗತಿ ಇದೆ. ಒಮ್ಮೆ ದೇವಿಯ ಆಭರಣಗಳನ್ನು ಅಪಹರಿಸುವ ಉದ್ದೇಶದಿಂದ ನಾಲ್ಕು ಜನ ಕಳ್ಳರು ಒಳ ನುಗ್ಗಿ ಆಭರಣಗಳಿಗೆ ಕೈಹಾಕಿದಾಗ ಕುಪಿತಳಾದ ದೇವಿ,ನಾಲ್ಕು ಮಂದಿ ಕಳ್ಳರಿಗೆ ಕಲ್ಲಾಗಿ ಹೋಗಿ ಎಂಬ ಶಾಪ ಕೊಟ್ಟಳು, ಅದರ ಪರಿಣಾಮವಾಗಿ ಆ ನಾಲ್ಕು ಜನ ಕಳ್ಳರು ಕಲ್ಲಾದರು. ಇಲ್ಲಿ ಕಳ್ಳತನ ಮಾಡಲು ಬಂದು ಕಲ್ಲಾ ದವರಿಗೂ ಗುಡಿ ನಿರ್ಮಿಸಲಾಗಿದ್ದು, ಕಳ್ಳಪ್ಪನ ಗುಡಿ ಎಂದೇ ಪ್ರಸಿದ್ಧಿ ಪಡೆದಿದೆ.

ಸಿದ್ದೇಶ್ವರ ದೇವಸ್ಥಾನ:- ಸಿದ್ದೇಶ್ವರನ ದೇವಾಲಯವು ಹಾಸನಾಂಬೆ ದೇವಾಲಯದ ದ್ವಾರದಿಂದ ಒಳಪ್ರವೇಶಿಸಿದ ತಕ್ಷಣವೇ ಕಾಣುತ್ತದೆ. ಈ ದೇವಾಲಯದಲ್ಲಿ ಸಿದ್ದೇಶ್ವರ ಸ್ವಾಮಿಯನ್ನು ಲಿಂಗರೂಪದಲ್ಲಿ ಅಲ್ಲದೇ ಉದ್ಭವಮೂರ್ತಿ ಅರ್ಜುನನಿಗೆ ಈಶ್ವರನು ಪಾಶುಪತಾಸ್ತ್ರ ಕೊಡುವ ಆಕಾರದಲ್ಲಿದೆ. ಪ್ರತಿವರ್ಷವೂ ಈ ದೇವಾಲಯದ ಉತ್ಸವಮೂರ್ತಿಯು ಅಮವಾಸ್ಯೆಯಂದು ರಾವಣೋತ್ಸವ ಬಲಿಪಾಡ್ಯಮಿ, ಚಂದ್ರ ಮಂಡಲ ರಥೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.

      ಹಾಸನಾಂಬೆ ದೇವಿಯ ಮಡಿವಂತಿಕೆ, ನೈರ್ಮಲ್ಯ ನೇಮ ನಿಷ್ಠೆಗೆ ವರಕೊಡುವರೆಂಬುದು ಆಚಾರ-ವಿಚಾರಗಳಿಂದ ತಿಳಿದುಬಂದಿದೆ. ವರ್ಷಕ್ಕೊಮ್ಮೆ ಮಾತ್ರ ಭಕ್ತಾದಿಗಳು ಭಯ – ಭಕ್ತಿಯಿಂದ ದೇವಿಯ ದರ್ಶನ ಪಡೆಯಲು ಇಲ್ಲಿಗೆ ಬರುತ್ತಾರೆ, ಅಂದು ಹಾಸನದಲ್ಲಿ ಹಾಸನಂಬೆಯ ಜಾತ್ರೆ ನಡೆಯುತ್ತದೆ, ಆಸ್ತಿಕರಿಗೆ ನೋಡಲು ನಯನ ಮನೋಹರವಾಗಿದೆ.

  ರಾ. ಹ. ತಿಮ್ಮೇನಹಳ್ಳಿ, ಶಿವಮೊಗ್ಗ. 

By admin

ನಿಮ್ಮದೊಂದು ಉತ್ತರ

You missed

error: Content is protected !!