ಶಿವಮೊಗ್ಗ : ರಕ್ತದಾನ ಮಾಡುವುದರ ಮೂಲಕ ಜೀವ ಉಳಿಸುವ ಉತ್ತಮ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಿ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಹೇಳಿದರು.
ಗುರುವಾರ ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದಲ್ಲಿ ಎನ್.ಎಸ್.ಎಸ್ ಘಟಕ ಹಾಗೂ ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಜಗತ್ತಿನಲ್ಲಿ ಅತಿ ಹೆಚ್ಚು ಸಾವಿನ ಪ್ರಮಾಣ ಉಂಟಾಗುವುದು ಅಪಘಾತದಿಂದ. ಸರಿಯಾದ ಸಮಯಕ್ಕೆ ಅಗತ್ಯ ಪ್ರಮಾಣದ ರಕ್ತ ಸಿಗದೆ ಇಂತಹ ಸಮಸ್ಯೆಗಳಾಗುತ್ತಿದೆ. ಅಂತಹ ರಕ್ತದ ಕೊರತೆಯನ್ನು ನೀಗಿಸುವಲ್ಲಿ ಅನೇಕ ರಕ್ತ ಕೇಂದ್ರಗಳು ಶ್ರಮಿಸುತ್ತಿರುವುದು ಅತ್ಯಂತ ಕೃತಜ್ಞತಾ ವಿಚಾರವಾಗಿದೆ.
ರಕ್ತದಾನ ಮಾಡಲು ಅಂಜಿಕೆ ಬೇಡ, ದಾನ ಮಾಡಿದ ಕೆಲವೇ ಗಂಟೆಗಳಲ್ಲಿ ಹೊಸ ರಕ್ತ ಉತ್ಪಾದನೆಯಾಗಲಿದ್ದು, ಇದರಿಂದ ಹೃದಯ ಸಂಬಂಧಿ ಕಾಯಿಲೆಗಳಿಗೆ ತಡೆಯಬಹುದಾಗಿದೆ. ಉತ್ತಮ ಆರೋಗ್ಯಕ್ಕೆ ರಕ್ತದಾನ ಪ್ರಕ್ರಿಯೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಪ್ರಾಂಶುಪಾಲರಾದ ಡಾ.ಜಿ.ನಾರಾಯಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ರೆಡ್ ಕ್ರಾಸ್ ಸಂಜೀವಿನಿ ರಕ್ತ ಕೇಂದ್ರದ ಧರಣೇಂದ್ರ ದಿನಕರ್, ಎನ್.ಎಸ್.ಎಸ್ ಘಟಕದ ಅಧಿಕಾರಿ ಎಂ.ಎಸ್.ಸಿದ್ದಲಿಂಗಸ್ವಾಮಿ ಉಪಸ್ಥಿತರಿದ್ದರು.