ಶಿವಮೊಗ್ಗ: ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಬಿಡುವುದನ್ನು ವಿರೋಧಿಸಿ ಇಂದು ಕರೆ ನೀಡಿದ್ದ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ರೈತ ಸಂಘದ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.


ಈ ವರ್ಷ ಕರ್ನಾಟಕ ಕರಾಳ ಬರಗಾಲದಲ್ಲಿದೆ. ಆದಾಗ್ಯೂ ಕಾವೇರಿ ನೀರು ನಿಯಂತ್ರಣ ಮಂಡಳಿ ತಮಿಳುನಾಡಿಗೆ ಪ್ರತಿನಿತ್ಯ ಮೊದಲು ೫೦೦೦ ಕ್ಯೂಸೆಕ್ಸ್, ಪ್ರತಿಭಟನೆಯ ನಂತರ ೩೦೦೦ಕ್ಯೂಸೆಕ್ಸ್ ನೀರನ್ನು ಬಿಡುವಂತೆ ಆದೇಶಿಸಿರುವುದು ಆಘಾತಕಾರಿಯಾಗಿದೆ. ಈ ನಿಯಂತ್ರಣ ಮಂಡಳಿಯ ಮುಂದೆ ಸಂಕಷ್ಟ ಕಾಲದ ಸೂತ್ರವನ್ನು ಜಾರಿಗೆ ತರುವಂತೆ ಗಮನಸೆಳೆಯುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.


ಕಾವೇರಿ ನೀರಿನ ಮೇಲೆ ಅವಲಂಬಿತರಾದ ಕೃಷಿಕರು ಸಂಪೂರ್ಣ ನಾಶವಾಗುತ್ತಾರೆ. ಅಲ್ಲದೆ ಕಾವೇರಿ ನದಿ ಪಾತ್ರದ ಅನೇಕ ಮಹಾನಗರ-ಪಟ್ಟಣಗಳ ನಾಗರೀಕರು ಜಲಕ್ಷಾಮಕ್ಕೆ ತುತ್ತಾಗಲಿದ್ದಾರೆ. ಆದ್ದರಿಂದ ಕೂಡಲೇ ಈ ಜಲಕ್ಷಾಮದ ಪರಿಸ್ಥಿತಿಯಲ್ಲಿ ಪ್ರಧಾನಿಗಳನ್ನು ಮಧ್ಯೆ ಪ್ರವೇಶಿಸುವಂತೆ ಮಾಡಿ ಕೂಡಲೇ ಸೂಕ್ತ ತೀರ್ಮಾನವನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದರು.


ಈ ವರ್ಷ ಹಿಂದಿನ ವರ್ಷಗಳಿಗಿಂತ ಅಣೆಕಟ್ಟೆಗೆ ಕಡಿಮೆ ಒಳಹರಿವು ಬಂದಿದ್ದು ಪೂರ್ಣ ಪ್ರಮಾಣದಲ್ಲಿ ಅಣೆಕಟ್ಟೆಗೆ ನೀರು ಬಂದಿರುವುದಿಲ್ಲ. ಆದರೂ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿದೆ ಇದನ್ನು ತಕ್ಷಣವೇ ನಿಲ್ಲಿಸಬೇಕು. ಮತ್ತು ಈ ರಾಜ್ಯದ ರೈತರ ಮತ್ತು ನಾಗರೀಕರ ಹಿತದೃಷ್ಟಿಯಿಂದ ಮುಂದಿನ ಎಲ್ಲ ಸಮಸ್ಯೆಗಳನ್ನು ಎದುರಿಸಲು ಸಜ್ಜಾಗಬೇಕು. ಶೀಘ್ರದಲ್ಲಿ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳುವ ಮುಖಾಂತರ ಕಾವೇರಿ ನೀರಿಗೆ ಪರ್ಯಾಯ ಸುರಕ್ಷತಾ ಕ್ರಮಕ್ಕೆ ಮುಂದಾಗಬೇಕು ಎಂದು ಆಗ್ರಹಿಸಿದರು.


ನೀರು ಹಂಚಿಕೆಯ ವಿಚಾರದಲ್ಲಿ ಹಿಂದಿನಿಂದಲೂ ಸಹ ಕರ್ನಾಟಕಕ್ಕೆ ಅನ್ಯಾಯವಾಗಿದೆ. ಈಗಲೂ ಮುಂದುವರಿಯುತ್ತಿದೆ. ಅಂತರ್‌ರಾಜ್ಯ ನದಿ ನೀರು ಮಾರ್ಗಸೂಚಿ ಈವರೆಗೂ ಹಂಚಿಕೆ ಸೂತ್ರ ವಿಚಾರವಾಗಿ ರಾಷ್ಟ್ರೀಯ ಮಾಡಿಲ್ಲವಾದಕಾರಣ ಕಾವೇರಿ ಪ್ರಾಧಿಕಾರದಲ್ಲಿ ಅವೈಜ್ಞಾನಿಕ ತೀರ್ಮಾನಗಳಾಗುತ್ತಿವೆ. ಸುಪ್ರೀಂ ಕೋರ್ಟ್ ಸಹ ಈ ತೀರ್ಮಾನವನ್ನು ಎತ್ತಿಹಿಡಿಯುತ್ತಿದೆ. ಕೂಡಲೇ ರಾಜ್ಯ ಸರ್ಕಾರ ರಾಷ್ಟ್ರೀಯ ಜಲನೀತಿ ರೂಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕು ಎಂದರು.
ಕೇಂದ್ರ ಸರ್ಕಾರ ಕೂಡಲೇ ಎರಡು ರಾಜ್ಯದ ತಜ್ಞರ ಸಭೆ ಕರೆದು ತೀರ್ಮಾನಿಸಿ, ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕರ್ನಾಟಕಕ್ಕೆ ನ್ಯಾಯ ಒದಗಿಸಿಕೊಡಬೇಕು. ರಾಜ್ಯ ಸರ್ಕಾರ ತಮಿಳುನಾಡಿಗೆ ಬಿಡುತ್ತಿರುವ ನೀರನ್ನು ಕೂಡಲೇ ನಿಲ್ಲಿಸಿ ಸುಪ್ರೀಂ ಕೋರ್ಟ್‌ಗೆ ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಮನವರಿಕೆ ಮಾಡಿಕೊಡಬೇಕು ಎಂದರು.


ನೀರು ಹಂಚಿಕೆಯ ಸಮಿತಿಗೆ ತಜ್ಞರೊಂದಿಗೆ ಆಯಾ ಪ್ರದೇಶದ ಫಲಾನುಭವಿ ರೈತರನ್ನೊಳಗೊಂಡ ಸಮಿತಿಯನ್ನು ರಚಿಸಬೇಕು. ಕರ್ನಾಟಕ ರಾಜ್ಯದ ಕಾವೇರಿ, ಕೃಷ್ಣ, ಮಹಾದಾಯಿ ನದಿಗಳ ನೀರಿನ ಹಂಚಿಕೆ ವಿಚಾರವಾಗಿ ಕರ್ನಾಟಕ ಸರ್ಕಾರ ರಾಜ್ಯಕ್ಕೆ ಮೊದಲು ಆದ್ಯತೆ ನೀಡಿ ರಾಜ್ಯದ ರೈತರ ಹಿತ ಕಾಪಾಡಬೇಕು. ಕರ್ನಾಟಕದ ಎಲ್ಲಾ ನೀರಾವರಿ ಯೋಜನೆಗಳನ್ನು ಆಂದ್ರ, ತೆಲಂಗಾಣ, ಮಹಾರಾಷ್ಟ್ರ ಮಾದರಿಯಲ್ಲಿ ಯುದ್ಧೋಪಾಧಿಯಲ್ಲಿ ಕೈಗೊಂಡು ನೀರಿನ ಬವಣೆಯಲ್ಲಿರುವ ರಾಜ್ಯದ ರೈತರಿಗೆ ನೆರವಾಗಬೇಕು ಎಂದರು.
ಈ ಸಂದರ್ಭದಲ್ಲಿ ರೈತ ಸಂಘಟನೆಯ ಮುಖಂಡ ಹೆಚ್.ಆರ್. ಬಸವರಾಜಪ್ಪ, ಕೆ.ರಾಘವೇಂದ್ರ ಟಿ.ಎಂ. ಚಂದ್ರಪ್ಪ., ಪಿ,ಡಿ ಮಂಜಪ್ಪ, ಹಿಟ್ಟೂರು ರಾಜು, ಜಿ.ಎನ್. ಪಂಚಾಕ್ಷರಿ, ಜ್ಞಾನೆಶ್, ಸಿ. ಚಂದ್ರಪ್ಪ, ಕಸೆಟ್ಟಿ ರುದ್ರೇಶ್ ಮತ್ತಿತರರು ಇದ್ದರು.

By admin

ನಿಮ್ಮದೊಂದು ಉತ್ತರ

You missed

error: Content is protected !!