ಸಾಗರ : ವಿದ್ಯಾರ್ಥಿ ಯುವಜನರು ಸಿಗುವ ಅವಕಾಶವನ್ನು ಬಳಸಿಕೊಂಡು ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ತಲುಪುವತ್ತ ಗಮನ ಹರಿಸಬೇಕು ಎಂದು ಪೊಲೀಸ್ ಉಪಾಧೀಕ್ಷಕ ರೋಹನ್ ಜಗದೀಶ್ ತಿಳಿಸಿದರು.
ಇಲ್ಲಿನ ಶೃಂಗೇರಿ ಶಂಕರಮಠದ ಭಾರತೀತೀರ್ಥ ಸಭಾಭವನದಲ್ಲಿ ಗುರುವಾರ ಧಾರವಾಡದ ವಿದ್ಯಾಪೋಷಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಸೇತುಬಂಧ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಣೆ ಮಾಡಿ ಅವರು ಮಾತನಾಡುತ್ತಿದ್ದರು.
ಪ್ರತಿಭಾವಂತರನ್ನು ಸಮಾಜ ಗಮನಿಸುತ್ತಾ ಇರುತ್ತದೆ. ಪ್ರತಿಭೆ ಇದ್ದವರು ಶಿಕ್ಷಣ ಮುಂದುವರೆಸಲು ಆರ್ಥಿಕ ಸಮಸ್ಯೆ ಎದುರಿಸಿದಾಗ ಸಮಾಜ ನಿಮ್ಮ ಪರವಾಗಿ ನಿಲ್ಲುತ್ತಿರುವುದು ಗಮನಾರ್ಹ ಸಂಗತಿ. ಸೌಲಭ್ಯ ಪಡೆದ ವಿದ್ಯಾರ್ಥಿಗಳು ಉನ್ನತ ಸ್ಥಾನಕ್ಕೆ ಹೋದಾಗ ವಿದ್ಯಾಪೋಷಕ್ ಬೆಳೆಸಿಕೊಂಡು ಹೋಗಬೇಕು. ಇಂತಹ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳುವುದರಿಂದ ನೀವು ಮಾನಸಿಕವಾಗಿ ಸದೃಢರಾಗುತ್ತೀರಿ ಎಂದು ಹೇಳಿದರು.
ವಿದ್ಯಾಪೋಷಕ್ ಜಿಲ್ಲಾ ಸಂಚಾಲಕ ಅಶ್ವಿನಿಕುಮಾರ್ ಮಾತನಾಡಿ, ವಿದ್ಯಾಪೋಷಕ್ ರಾಜ್ಯದ ೧೨ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಈತನಕ ಹತ್ತಾರು ಕೋಟಿ ರೂ.ಗಳನ್ನು ಪ್ರತಿಭಾವಂತ ಆರ್ಥಿಕ ಹಿಂದುಳಿದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಆರ್ಥಿಕ ಸಹಕಾರ ನೀಡಿದೆ. ಶಿವಮೊಗ್ಗ ಜಿಲ್ಲೆಯೊಂದರಲ್ಲೆ ಸುಮಾರು ಒಂದೂವರೆ ಕೋಟಿ ರೂ.
ವಿದ್ಯಾರ್ಥಿ ಸಹಾಯಧನ ನೀಡಲಾಗಿದೆ. ಸೇತುಬಂಧ ಕಾರ್ಯಕ್ರಮದಲ್ಲಿ ರಾಜ್ಯದ ೧೨ ಜಿಲ್ಲೆಯಿಂದ ೧೪೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದು ಎಂಟು ದಿನಗಳಲ್ಲಿ ಅವರಿಗೆ ವಿವಿಧ ವಿಷಯಗಳ ಕುರಿತು ತರಬೇತಿ ನೀಡಲಾಗಿದೆ. ತರಬೇತಿ ಪಡೆದ ವಿದ್ಯಾರ್ಥಿಗಳು ಭವಿಷ್ಯದಲ್ಲಿ ಉನ್ನತ ಸ್ಥಾನಕ್ಕೆ ತಲುಪಲು ಇನ್ನಷ್ಟು ಕಠಿಣ ಪರಿಶ್ರಮ ಹಾಕಬೇಕು ಎಂದು ತಿಳಿಸಿದರು.
ಧಾರವಾಡ ವಿದ್ಯಾಪೋಷಕ್ ಸಂಸ್ಥೆಯ ಓಂಕಾರಿ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಟಿ.ವಿ.ಪಾಂಡುರಂಗ, ಪ್ರಕಾಶ್ ಭಟ್, ಕವಲಕೋಡು ವೆಂಕಟೇಶ್, ಮಾ.ಸ.ನಂಜುಂಡಸ್ವಾಮಿ ಇನ್ನಿತರರು ಹಾಜರಿದ್ದರು