ಭದ್ರಾವತಿ: ನಿಮ್ಮ ಅಪ್ರಾಪ್ತ ಮಕ್ಕಳಿಗೆ ಕಾರು ಹಾಗೂ ಬೈಕ್ ಓಡಿಸಲು ಕೊಡುತ್ತೀರಾ? ಹಾಗಾದರೆ ಇಂದೇ ಇಂತಹ ತಪ್ಪು ಮಾಡುವುದನ್ನು ನಿಲ್ಲಿಸಿ, ಇಲ್ಲದೇ ಇದ್ದಲ್ಲಿ ಭಾರೀ ಪ್ರಮಾಣದಲ್ಲಿ ದಂಡ ತೆರುವ ಪರಿಸ್ಥಿತಿ ನಿಮಗೂ ಎದುರಾಗಬಹುದು.
ಹೌದು… ಅಪ್ರಾಪ್ತ ಪುತ್ರನಿಗೆ ಓಡಿಸಲು ಬೈಕ್ ನೀಡಿದ್ದ ತಂದೆಯೊಬ್ಬರಿಗೆ ಭದ್ರಾವತಿಯ ನ್ಯಾಯಾಲಯ ಬರೋಬ್ಬರಿ 25 ಸಾವಿರ ರೂ. ದಂಡ ವಿಧಿಸಿರುವ ಘಟನೆ ನಡೆದಿದೆ.
ಏನಿದು ಘಟನೆ?
ಜನ್ನಾಪುರದ ನಿವಾಸಿ ಶ್ರೀಕಾಂತ್(45) ಎನ್ನುವವರು ತಮ್ಮ 16 ವರ್ಷದ ಪುತ್ರನಿಗೆ ಬೈಕ್ ಚಾಲನೆ ಮಾಡಲು ನೀಡಿದ್ದರು.
ನ್ಯೂಟೌನ್ ಠಾಣೆ ವ್ಯಾಪ್ತಿಯ ಹುತ್ತಾ ಕಾಲೋನಿ ಬಳಿ, ಸಬ್ ಇನ್ಸ್’ಪೆಕ್ಟರ್ ರಮೇಶ್ ಅವರು ವಾಹನ ತಪಾಸಣಾ ಕಾರ್ಯ ನಡೆಸುತ್ತಿದ್ದರು. ಈ ವೇಳೆ ಬಾಲಕನೋರ್ವ ಬೈಕ್ ಚಲಾಯಿಸಿಕೊಂಡು ಬರುತ್ತಿದ್ದು, ಆತನನ್ನು ನಿಲ್ಲಿಸಿ ವಾಹನಗಳ ದಾಖಲಾತಿ ಪರಿಶೀಲಿಸಿದ್ದರು.
ಆದರೆ, ತಪಾಸಣೆ ವೇಳೆ ಆತನ ಬಳಿ ವಾಹನ ಚಾಲನಾ ಪರವಾನಿಗೆಯಿಲ್ಲದಿರುವುದು ತಿಳಿದಿದೆ. ಅಲ್ಲದೇ, ಆತ ಅಪ್ರಾಪ್ತ ವಯಸ್ಸಿನವನಾಗಿರುವುದು ಬೆಳಕಿಗೆ ಬಂದಿದೆ.
ಈ ಹಿನ್ನೆಲೆಯಲ್ಲಿ ಸಂಚಾರಿ ನಿಯಮಗಳಿಗೆ ವಿರುದ್ಧವಾಗಿ, ಅಪ್ರಾಪ್ತ ಪುತ್ರನಿಗೆ ಬೈಕ್ ಚಾಲನೆ ಮಾಡಲು ಅವಕಾಶ ನೀಡಿದ ತಂದೆಯ ವಿರುದ್ದ ನ್ಯೂ ಟೌನ್ ಠಾಣೆಯಲ್ಲಿ ಲಘು ಪ್ರಕರಣ ದಾಖಲಿಸಲಾಗಿತ್ತು. ತದನಂತರ ಪ್ರಕರಣದ ಕುರಿತಂತೆ ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಭದ್ರಾವತಿ ಜೆಎಂಎಫ್’ಸಿ ನ್ಯಾಯಾಲಯ ಶ್ರೀಕಾಂತ್ ಅವರಿಗೆ 25 ಸಾವಿರ ರೂ. ದಂಢ ವಿಧಿಸಿ ಆದೇಶ ಹೊರಡಿಸಿದೆ.