ಶಿವಮೊಗ್ಗ: ವಿಮಾನ ನಿಲ್ದಾಣದ ಮೇಲಿರುವ ಕಮಲ ಚಿಹ್ನೆಯನ್ನು ಚುನಾವಣೆಯ ನೀತಿಸಂಹಿತೆಯ ಹಿನ್ನಲೆಯಲ್ಲಿ ಬಟ್ಟೆಯಿಂದ ಸಂಪೂರ್ಣವಾಗಿ ಮುಚ್ಚಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಇಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತು.
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೂತನವಾಗಿ ಉದ್ಘಾಟನೆಯಾಗಿರುವ ವಿಮಾನ ನಿಲ್ದಾಣದ ಕಟ್ಟಡದ ವಿನ್ಯಾಸ ಸಂಪೂರ್ಣವಾಗಿ ಬಿಜೆಪಿ ಪಕ್ಷದ ಚಿಹ್ನೆಯಾಗಿರುವ ಕಮಲದ ವಿನ್ಯಾಸದಲ್ಲಿದೆ. ಈ ಬಗ್ಗೆ ಕಟ್ಟಡ ಪ್ರಾರಂಭವಾದಾಗಲು ಸಹ ಬಿಜೆಪಿ ಚಿಹ್ನೆ ಕಮಲವನ್ನು ಪ್ರತಿನಿಧಿಸಬಾರದು ಎಂದು ಸಾರ್ವಜನಿಕರು, ವಿವಿಧ ಸಂಘಟನೆಗಳು ಹೋರಾಟ ಮಾಡಿದ್ದವು. ಆದರೆ ಕಲಮದ ಚಿಹ್ನೆಯನ್ನು ಹಾಗೆ ಉಳಿಸಿಕೊಂಡಿದ್ದಾರೆ. ಇದು ಚುನಾವಣೆಯ ಹಿನ್ನಲೆಯಲ್ಲಿ ನೀತಿ ಸಂಹಿತೆಗೆ ಅಡ್ಡಿ ಬರುತ್ತದೆ ಎಂದು ಮನವಿದಾರರು ದೂರಿದರು.
ಆದ್ದರಿಂದ ಚುನಾವಣಾಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಕಮಲದ ಚಿಹ್ನೆ ಇರುವ ಎಲ್ಲಾ ಭಾಗವನ್ನು ಮುಚ್ಚಬೇಕು. ನೀತಿಸಂಹಿತೆಯನ್ನು ಕಾಪಾಡಬೇಕು. ಒಂದು ಪಕ್ಷ ಜಿಲ್ಲಾಡಳಿತ ಅಥವಾ ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ ಕೆಪಿಸಿಸಿ ವತಿಯಿಂದಲೇ ಅದನ್ನು ಮುಚ್ಚಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅದೇ ರೀತಿ ಕೆಎಸ್ಆರ್ಟಿಸಿ ಸರ್ಕಾರಿ ಬಸ್ಗಳ ಮೇಲೆ ಮುಖ್ಯಮಂತ್ರಿಗಳು ಹಾಗೂ ಪ್ರಧಾನಮಂತ್ರಿ ಮತ್ತು ಸಚಿವ ಸಂಪುಟದ ಮಂತ್ರಿಗಳ ಮುಖವಿರುವ ಜಾಹಿರಾತುಗಳು ಇವೆ. ಜೊತೆಗೆ ಸ್ಟಿಕರ್ಗಳು ರಾರಾಜಿಸುತ್ತಿವೆ. ಇದು ಕೂಡ ಚುನಾವಣಾ ನೀತಿ ಸಂಹಿತೆಗೆ ವಿರೋಧವಾಗಿದೆ. ಕೂಡಲೇ ಬಸ್ಗಳ ಮೇಲಿರುವ ಭಾವಚಿತ್ರದ ಬರಹಗಳನ್ನು ತೆಗೆದುಹಾಕಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಪ್ರಮುಖರಾದ ಅರ್ಚನಾ ನಿರಂಜನ್, ಸ್ಟೆಲಾ ಮಾರ್ಟಿನ್, ಕವಿತಾ ರಾಘವೇಂದ್ರ, ಮಧುಕುಮಾರ್, ಬಾಲಾಜಿ, ವಿನಯ್ ಸೇರಿದಂತೆ ಹಲವರಿದ್ದರು.