ಶಿವಮೊಗ್ಗ: ಬೆಂಗಳೂರಿನಲ್ಲಿ ವೋಟರ್ ಐಡಿ ಪರಿಷ್ಕರಣೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಹೇಳಿದರು.
ಅವರು ಇಂದು ಶಾಸಕರ ಕಚೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಪ್ರಕರಣ ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಆಧುನಿಕ ವ್ಯವಸ್ಥೆಯಲ್ಲೂ ಕೂಡ ಇಂತಹ ಘಟನೆಗಳು ನಡೆಯುತ್ತಿರುವುದು ಖಂಡನೀಯ. ಇದು ಯಾರೇ ಮಾಡಿರಲಿ, ಯಾವ ಪಕ್ಷದವರೇ ಇದರ ಹಿಂದಿರಲಿ, ಸತ್ಯ ಹೊರ ಬರಬೇಕು. ಕೇಂದ್ರ ಸರ್ಕಾರ ಮತ್ತು ಚುನಾವಣಾ ಆಯೋಗ ಇದರ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ ಆಡಳಿತದಲ್ಲಿಯೂ ಕೂಡ ಇಂತಹ ಪ್ರಕರಣ ನಡೆದಿದೆ. ಈ ಘಟನೆ ಸತ್ಯವೋ, ಸುಳ್ಳೋ ಇದು ಜನರಿಗೆ ಗೊತ್ತಾಗಬೇಕು. ವ್ಯವಸ್ಥೆಯ ದುರುಪಯೋಗವಾಗಿದೆ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿದೆ. ಆದ್ದರಿಂದ ಕಾಂಗ್ರೆಸ್ ಸರ್ಕಾರದಿಂದ ಹಿಡಿದು ಈಗಿನ ಸರ್ಕಾರದವರೆಗೆ ತನಿಖೆಯಾಗಲಿ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲಿ ಎಂದರು
.
ಸಿದ್ಧರಾಮಯ್ಯ ವಿರೋಧ ಪಕ್ಷದ ನಾಯಕ ಸ್ಥಾನ ದುರುಪಯೋಗಪಡಿಸಿಕೊಂಡಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳಿಗೂ ಒಂದು ನೀತಿ ಇರುತ್ತದೆ. ಆದರೆ, ಕಾಂಗ್ರೆಸ್ ನಲ್ಲಿ ಸಿದ್ಧರಾಮಯ್ಯ ಅವರದೇ ಬೇರೆ ನೀತಿಯಾಗಿದೆ. ಇವರು ಚರ್ಚಿಸದೇ ಅಥವಾ ಪಕ್ಷದ ಗಮನಕ್ಕೆ ತಾರದೇ ಕೊಪ್ಪಳದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಘೋಷಣೆ ಮಾಡಿದ್ದಾರೆ.
ಇದು ಯಾವ ನ್ಯಾಯ? ಇದಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಡಿ.ಕೆ. ಶಿವಕುಮಾರ್ ಅವರು ಸಿದ್ಧರಾಮಯ್ಯನವರ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ನೀತಿ ನಿಯಮ ಕಟ್ಟುಪಾಡು ಮೀರಿದ ಸಿದ್ಧರಾಮಯ್ಯ ಅವರನ್ನು ಪಕ್ಷದಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದ ಅವರು, ಸಿದ್ಧರಾಮಯ್ಯ ಮಾಡಿರುವುದು ರಾಜಕೀಯ ವ್ಯಭಿಚಾರವಲ್ಲದೇ ಮತ್ತೇನೂ ಅಲ್ಲ. ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಿಗೂ ಟಿಕೆಟ್ ಘೋಷಣೆ ಮಾಡಲಿ ಎಂದರು.