ಸೊರಬ: ಅಂಧರಂತಾಡುವ ಅಧಿಕಾರಿಗಳು..!

ಸೊರಬ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ, ಪಟ್ಟಣದಲ್ಲಿ ಖಾಸಗಿ ವಾಹನಗಳಲ್ಲಿ ಮಿತಿ ಮೀರಿ ಜನರ ಸಾಗಾಟ ಎಗ್ಗಿಲ್ಲದೇ ಸಾಗುತ್ತಿರುವುದು ಹಲವು ಅನುಮಾನಕ್ಕೆ ಕಾರಣವಾಗಿದೆ.
ಜಡೆ, ಚಂದ್ರಗುತ್ತಿ, ಆನವಟ್ಟಿ, ಉದ್ರಿ, ಕೆರೆಹಳ್ಳಿ ಮತ್ತಿತರರ ಗ್ರಾಮೀಣ ಪ್ರದೇಶದಿಂದ ನೆರೆಯ ತಾಲ್ಲೂಕಿನ ಕಾರ್ಖಾನೆಗಳಿಗೆ ಜನರನ್ನು ಓಮಿನಿ, ಟ್ಯಾಕ್ಸಿಗಳಲ್ಲಿ ನಿಯಮವನ್ನು ಮೀರಿ, ಹೆಚ್ಚಿನ ಪ್ರಮಾಣದ ಜನರನ್ನು ಸಾಗಿಸಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬರುತ್ತಿದೆ. ಆರ್ಥಿಕತೆಯ ಮೇಲೆ ಬೀಳುತ್ತಿದ್ದ ಗಂಭೀರ ಪರಿಣಾಮವನ್ನು ಅರಿತು ಸರ್ಕಾರ ಲಾಕ್‌ಡೌನ್ ಸಡಿಲಿಕೆಗೊಳಿಸಿ ಕೆಲವು ವಿನಾಯಿತಿಗಳನ್ನು ನೀಡಿದೆ. ಇದನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿರುವ ಹಲವರು ಸಾರಿಗೆ ನಿಮಯಗಳ ಜೊತೆಗೆ ಕೊರೋನಾ ಹರಡುವಿಕೆ ತಡೆಗಟ್ಟಲು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಗಾಳಿಗೆ ತೂರುತ್ತಿದ್ದಾರೆ.
ಅಪಾಯ ಕಟ್ಟಿಟ್ಟ ಬುತ್ತಿ:
ಖಾಸಗಿ ವಾಹನಗಳಲ್ಲಿ ಮಿತಿ ಮೀರಿ ಜನರನ್ನು ಸಾಗಾಟ ಮಾಡುವ ಸಂದರ್ಭದಲ್ಲಿ ಅನಾಹುತವೇನಾದರೂ ಸಂಭವಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ. ವಿಮೆ ಮತ್ತಿತರರ ಸೌಲಭ್ಯಗಳಿಂದಲೂ ವಂಚಿತರಾಗುವ ಸಾಧ್ಯತೆ ಇದೆ. ಸರ್ಕಾರ ಅನ್‌ಲಾಕ್-೧ ಅನ್ವಯ ರಿಯಾಯಿತಿಗಳನ್ನು ನೀಡಿದೆ. ಆದರೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು. ಮಾಸ್ಕ್, ಸ್ಯಾನಿಟೈಸರ್ ಬಳಕೆಯನ್ನು ಮಾಡುವಂತೆಯೂ ಸೂಚಿಸಿದೆ. ಆದರೆ, ಇಂತಹ ಖಾಸಗಿ ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಜನರನ್ನು ಸಾಗಾಟ ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಇಲ್ಲಿ ಸಾಮಾಜಿಕ ಅಂತರ ಮತ್ತಿತರರ ಸರ್ಕಾರಿ ನಿಯಮಗಳ ಉಲ್ಲಂಘನೆ ನಿರಂತರವಾಗಿ ನಡೆಯುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಪುಷ್ಟಿ ನೀಡಿದಂತಾಗಿದೆ.
ಜನರ ಸಂಕಷ್ಟಕ್ಕೆ ಮಿಡಿದ ಸರ್ಕಾರ:
ಗ್ರಾಮೀಣ ಭಾಗದ ಬಡ ಜನತೆ ಕೆಲ ಕಾರ್ಖಾನೆಗಳಲ್ಲಿ, ಕೂಲಿ ಕೆಲಸಗಳನ್ನು ಮಾಡಿಕೊಂಡು ಜೀವನ ನಿರ್ವಹಣೆ ಮಾಡುತ್ತಿದ್ದರು. ಲಾಕ್‌ಡೌನ್ ಜಾರಿಯಾದ ಪರಿಣಾಮ ಹಲವು ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಇದನ್ನು ಅರಿತ ಸರ್ಕಾರ ಲಾಕ್‌ಡೌನ್ ಸಡಿಲಿಕೆಗೊಳಿಸಿ ದುಡಿಯುವ ವರ್ಗಕ್ಕೆ ಅನುಕೂಲ ಕಲ್ಪಿಸಿಕೊಟ್ಟಿತು. ಪರಿಣಾಮ ಕಾರ್ಖಾನೆ ಮತ್ತಿತರ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಕಾರ್ಯನಿರ್ವಹಣೆಗೆ ಮಾರ್ಗಸೂಚಿಯನ್ನು ನೀಡಿದೆ. ತರುವಾಯ ಹಲವು ಕಾರ್ಖಾನೆಗಳು ಪುನಾರಾರಂಭಗೊಂಡವು. ಆದರೆ, ಸರ್ಕಾರ ಸೂಕ್ತ ಸಾರಿಗೆ ವ್ಯವಸ್ಥೆ ಕಲ್ಪಿಸಿದ್ದರೆ ಅನುಕೂಲವಾಗುತ್ತಿತ್ತು.
ಗಮನ ಹರಿಸುವರೇ ಅಧಿಕಾರಿಗಳು?
ಸರ್ಕಾರದ ಸಾರಿಗೆ ವ್ಯವಸ್ಥೆಯಲ್ಲಿನ ಏರುಪೇರುಗಳನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ವಾಹನಗಳ ಮಾಲಕರು ಸಾಮಾಜಿಕ ಅಂತರದ ಜೊತೆಗೆ ಸರ್ಕಾರ ಮಾರ್ಗಸೂಚಿ ನಿಯಮಗಳನ್ನು ಉಲ್ಲಂಘಿಸಿ ನಿತ್ಯ ಜನರ ಸಾಗಾಟಕ್ಕೆ ಮುಂದಾಗಿದ್ದಾರೆ. ಇತ್ತ ಬದುಕು ಕಟ್ಟಿಕೊಳ್ಳಲು ಹವಣಿಸುತ್ತಿರುವ ಕಾರ್ಮಿಕರ ಚಿಂತೆ ಒಂದಡೆಯಾದರೆ, ಖಾಸಗಿ ವಾಹನಗಳ ಮಾಲಕರು ಮಿತಿಮೀರಿ ಜನರ ಸಾಗಾಟ ಮಾಡಿ ಕೇವಲ ಹಣಗಳಿಸುವ ಹುನ್ನಾರವೂ ಮತ್ತೊಂದಡೆ ಅಡಗಿದೆ.
ಒಟ್ಟಾರೆ, ತಾಲ್ಲೂಕಿನಲ್ಲಿ ಖಾಸಗಿ ವಾಹನಗಳ ಹಾವಳಿಯನ್ನು ನಿಯಂತ್ರಿಸಿ, ಸಮರ್ಪಕ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗುವುದೇ ಎಂಬುದನ್ನು ಕಾದುನೋಡಬೇಕಿದೆ.

ಸರ್ಕಾರ ಲಾಕ್‌ಡೌನ್ ಸಡಿಲಗೊಳಿಸಿ ದುಡಿಯುವ ವರ್ಗಕ್ಕೆ ಅನುಕೂಲ ಮಾಡಿಕೊಟ್ಟಿರುವುದು ಉತ್ತಮ ಬೆಳವಣಿಗೆ. ಆದರೆ, ಕೆಲ ಖಾಸಗಿ ವಾಹನಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿ ಕೂಲಿ-ಕಾರ್ಮಿಕರನ್ನು ಮಿತಿ ಮೀರಿ ಸಾಗಾಟ ಮಾಡಲಾಗುತ್ತಿದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನ ಹರಿಸಬೇಕು. ಹಾಗೂ ಕೂಲಿ-ಕಾರ್ಮಿಕರಿಗೆ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಬೇಕು.
ಡಿ.ಕೆ. ವೀರಭದ್ರಪ್ಪ, ಸ್ಥಳೀಯ ನಿವಾಸಿ.

By admin

ನಿಮ್ಮದೊಂದು ಉತ್ತರ

error: Content is protected !!