ಶಿವಮೊಗ್ಗ : ಹಿಂದೂ ಮಹಾಸಭಾ ಗಣಪನ ರಾಜಬೀದಿ ಉತ್ಸವದಲ್ಲಿ ಮಧ್ಯಾಹ್ನ ೧ರ ಹೊತ್ತಿಗೆ ಜನಸಾಗರವೇ ಹರಿದು ಬಂದಿತ್ತು. ಮೆರಣಿಗೆಯಲ್ಲಿ ಯುವಕರ, ಯುವತಿಯರ ಕೇಸರಿ ಪೇಟೆಗಳು ಕಂಗೋಳಿಸಿದವು.
ಮೆರವಣಿಗೆಯಲ್ಲಿ ಗಣಪತಿ ಬೊಪ್ಪ ಮೋರಿಯಾ, ಜೈ ಶ್ರೀರಾಮ್, ಘೋಷಣೆಗಳು ಮುಗಿಲು ಮುಟ್ಟಿದ್ದವು. ನಗರದ ತುಂಬಾ ಬಂಟಿಂಗ್ಸ್ಗಳು, ಭಗವದ್ಗಜಗಳು ಆಕಾಶದೆತ್ತರಕ್ಕೆ ಹಾರಾಡುತ್ತಿದ್ದವು. ಗೋಪಿವೃತ್ತದಲ್ಲಿ ಆಂಜನೇಯ ಪ್ರತಿಮೆ, ಎಎ ಸರ್ಕಲ್ನಲ್ಲಿ ಸಾರ್ವಕರ್ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗಳು ನೋಡುಗರ ಕಣ್ಮನ ಸೆಳೆದವು.
ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಗಾಂಧಿ ಬಜಾರ್ನಲ್ಲಿ ಲಾಠಿ ಹಿಡಿದು ನಿಂತಿರುವುದು ಕಂಡುಬಂದಿತು. ಶಿವಮೊಗ್ಗದಲ್ಲಿ ಈ ಹಿಂದೆ ಎಸ್ಪಿ ರವಿ. ಡಿ.ಚೆನ್ನಣ್ಣನವರ್ ಸೇರಿದಂತೆ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಬಂದೋ ಬಸ್ತ್ನಲ್ಲಿ ಭಾಗವಹಿಸಿದ್ದರು. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ.
ಗಣಪತಿ ಬರುವ ಮಾರ್ಗದಲ್ಲಿ ಅನೇಕ ಸಂಘ ಸಂಸ್ಥೆಗಳು ಮಜ್ಜಿಗೆ ಮತ್ತು ಇತರ ಪಾನೀಯಗಳನ್ನು ಹಾಗೂ ಲಘು ಉಪಹಾರಗಳನ್ನು ವಿತರಿಸಿದವು. ಮೆರವಣಿಗೆಯ ದಾರಿಯಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಗಣಪತಿ ಸಾಗುವ ಮಾರ್ಗದುದ್ದಕ್ಕೂ ತಳಿರು ತೋರಣಗಳಿಂದ ಸಿಂಗರಿಸಿ, ಹೂವಿನ ಮಳೆಯೇ ಸುರಿದಿತ್ತು. ಹಾಗೂ ಸಂಘ ಸಂಸ್ಥೆಗಳಿಂದ ಹೂವಿನ ಹಾರ, ಸೇಬಿನ ಹಾರಗಳು ಕಂಡುಬಂದವು.
ಮೆರವಣಿಗೆಯಲ್ಲಿ ಅನೇಕ ಜಾನಪದ ಕಲಾ ತಂಡಗಳು ಭಾಗವಹಿಸಿದ್ದವು. ಮುಖ್ಯವಾಗಿ ಡೊಳ್ಳು ಕುಣಿತ, ಕಹಳೆಗಳ ಶಬ್ದ ಮುಗಿಲು ಮುಟ್ಟಿತ್ತು. ವಿಶೇಷವಾಗಿ ನೃತ್ಯ ನೋಡುಗರ ಮನಸೆಳೆಯಿತು. ಯುವತಿಯರು ಕೂಡ ಭರ್ಜರಿ ಸ್ಟೆಪ್ ಹಾಕಿ ಗಮನಸೆಳೆದರು. ಘೋಷಣೆ, ನೃತ್ಯ, ಕೂಗು, ಉತ್ಸಾಹ, ಉಲ್ಲಾಸ, ಸಂಭ್ರಮ, ಸಡಗರ ಮೆರವಣಿಗೆಯಲ್ಲಿ ಕಂಡು ಬಂದಿತು.
ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಗವಾದ್ವಜಗಳು ಹಾಗೂ ಪುನೀತ್ ಬಾವುಟಗಳ ಮೆರವಣಿಗೆಯಲ್ಲಿ ಗಮನ ಸೆಳೆದವು. ಇಡೀ ನಗರ ಕೇಸರಿಮಯ ವಾಗಿತ್ತು. ಮೆರವಣಿಗೆ ಸಾಗುವ ಹಲವೆಡೆಗಳಲ್ಲಿ ಗಣಪತಿ ಮೂರ್ತಿಗೆ ಬೃಹತ್ ಗಾತ್ರದ ಹೂವಿನ ಹಾರಗಳನ್ನು ಹಾಕುವ ಮೂಲಕ ಜಯಘೋಷ ಕೂಗಿದರು. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಬಿಗಿಭದ್ರತೆ ಕೈಗೊಳ್ಳಲಾಗಿತ್ತು.