ಶಿವಮೊಗ್ಗ,
ಚಿತ್ರದುರ್ಗ ಮುರುಘಾ ಶರಣರ ಮೇಲೆ ಕೇಳಿ ಬಂದಿರುವ ಆರೋಪ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ಸಂಬಂಧ ಸರ್ಕಾರ ಯಾವುದೇ ರೀತಿಯಲ್ಲೂ ಹಸ್ತಕ್ಷೇಪ ನಡೆಸುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತನಿಖೆ ದೃಷ್ಟಿಯಿಂದ ಹೆಚ್ಚಿಗೆ ಏನನ್ನು ಹೇಳುವುದಿಲ್ಲ. ಮುರುಘಾ ಮಠಕ್ಕೆ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿದೆ. ಭದ್ರತೆಗೆ ೭ ಕೆ.ಎಸ್.ಆರ್.ಪಿ. ತುಕಡಿ ನಿಯೋಜಿಸಲಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಬಗ್ಗೆ ಮೋದಿಯವರಿಗೆ ವಿಶೇಷ ಆಸಕ್ತಿ ಇದೆ. ತಿಂಗಳಿಗೊಮ್ಮೆ ಭೇಟಿ ನೀಡುವುದಾಗಿ ಹೇಳಿದ್ದಾರೆ.
ಮುಂಬರುವ ಚುನಾವಣೆಗೆ ನಾವು ಸಿದ್ದರಾಗಿದ್ದೇವೆ. ಸೆ. ೮ ರಂದು ದೊಡ್ಡಬಳ್ಳಾಪುರದಲ್ಲಿ ಜನೋತ್ಸವ ಕಾರ್ಯಕ್ರಮ ನಡೆಯಲಿದೆ. ಬಿಜೆಪಿ ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮಾಜಿ ಸಿಎಂ ಯಡಿಯೂರಪ್ಪ ಅವರಿಗೆ ಸ್ಥಾನಮಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಡಿಯೂರಪ್ಪ ಅವರಿಗೆ ಪಕ್ಷ ಗೌರವ ಸಲ್ಲಿಸಿದೆ. ರಾಜ್ಯಾದ್ಯಂತ ಪ್ರವಾಸಕ್ಕೆ ಅವರು ಸಿದ್ದರಾಗಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚಿನ ಸ್ಥಾನ ಸಿಗಲಿದೆ ಎಂದರು.
ಶಿವಮೊಗ್ಗದ ಪ್ರೇಮ್ ಸಿಂಗ್ ಚೂರಿ ಇರಿತ ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಪ್ರಮುಖ ಆರೋಪಿ ಜಬೀವುಲ್ಲಾ ಎಂಬಾತನಿಗೆ ಇರುವ ಲಿಂಕ್ ಭಯಾನಕವಾಗಿದೆ. ಭಯೋತ್ಪಾದಕರ ಜೊತೆ ಸಂಬಂಧ ಇರುವುದು ಬಹಿರಂಗವಾಗುತ್ತಿದೆ. ಸದ್ಯದಲ್ಲೇ ಈ ಪ್ರಕರಣವನ್ನು ಎನ್.ಐ.ಎ.ಗೆ ಹಸ್ತಾಂತರ ಮಾಡಲಾಗುತ್ತಿದೆ ಎಂದರು.