ಶಿವಮೊಗ್ಗ, ಜು.09:
ಶಿವಮೊಗ್ಗ ನಗರದಲ್ಲಿ ಅಕ್ರಮ ಚಟುವಟಿಕೆಗಳು ಹೆಚ್ಚುತ್ತಿವೆ. ಹಾಡುಹಗಲೇ ಕಳ್ಳತನ, ದರೋಡೆ ಪ್ರಯತ್ನ ಹೆಚ್ಚುತ್ತಿದೆ.
ಇನ್ನು ಹಾಡು ಹಗಲೇ, ವೃದ್ದ ಮಹಿಳೆಯೋರ್ವರು ಮನೆಯಲ್ಲಿರುವುದನ್ನು ಗುರುತಿಸಿಕೊಂಡಿದ್ದ ಕಿಡಿಗೇಡಿಗಳು ಅವರ ಬಾಯಿ ಮುಚ್ಚಿ, ಕೈಕಾಲು ಕಟ್ಟಿ ಮನೆಯಲ್ಲಿದ್ದ ನಗದು ಹಾಗೂ ಆಭರಣ ದೋಚಿದ್ದಾರೆ.
ನೀರು ಕೇಳುವ ನೆಪದಲ್ಲಿ ಮನೆಯಲ್ಲಿದ್ದ ಈ ವೃದ್ಧೆಯ ಬಾಯಿಗೆ ಬಟ್ಟೆ ತುರಕಿ, ಕೈಕಾಲುಗಳನ್ನ ಕಟ್ಟಿ ಮನೆಯಲ್ಲಿರುವ 27 ಸಾವಿರದ 300 ರೂ. ಮೌಲ್ಯದ ಚಿನ್ನದ ಆಭರಣ, ನಗದು ಮತ್ತು ಮೊಬೈಲ್ ದೋಚಿಕೊಂಡು ಹೋಗಿದ್ದಾರೆ.
ವೆಂಕಟೇಶ್ ನಗರದ ಎರಡನೇ ತಿರುವಿನಲ್ಲಿರುವ ಪ್ರೇಮಾ ಎಂಬುವರ ಮನೆಯ ಮುಂಭಾಗದಲ್ಲಿ ಅಪರಿಚಿತ ಯುವಕರು ಜೋರಾಗಿ ಮಾತನಾಡುತ್ತಾ ಈ ಮನೆಯ ಬಾಗಿಲು ತಟ್ಟಿದ್ದಾರೆ.
ವೃದ್ದೆ ಬಾಗಿಲು ತೆರೆದಾಗ ಅವರು ಕುಡಿಯಲು ನೀರು ಕೇಳಿದ್ದಾರೆ. ನೀರು ಕೊಡಲ್ಲ ಎಂದು ಬಾಗಿಲು ಹಾಕಿಕೊಳ್ಳುತ್ತಿದ್ದ ವೇಳೆ ಬಾಗಿಲು ದಬ್ಬಿ ಅಪರಿಚಿತರು ಪ್ರೇಮಾರ ಬಾಯಿಗೆ ಬಟ್ಟೆ ತುರುಕಿದ್ದಾರೆ. ಕೈಕಾಲುಗಳನ್ನ ಬಟ್ಟೆಯಿಂದ ಕಟ್ಟಿದ್ದಾರೆ.
ದರದರ ಎಳೆದುಕೊಂಡು ಮನೆಯ ಡೈನಿಂಗ್ ಹಾಲ್ ಗೆ ಹೋದರು, ನಂತರ ನಿನ್ನ ಮನೆಯಲ್ಲಿರುವ ಹಣ, ಬಂಗಾರ, ಗ್ರಾಡೇಜ್ ಬೀಗ, ಎಟಿಎಂ ಕಾರ್ಡ್ ಕೊಡು ಇಲ್ಲದಿದ್ದರೆ ನಿನ್ನನ್ನು ಸಾಯಿಸಿ ಬಿಡುತ್ತೇನೆಂದು ಡೈನಿಂಗ್ ಹಾಲಿನ ಮೇಲಿದ್ದ ಚಾಕು ತೋರಿಸಿದ್ದಾರೆ.
ಬಾಯಿಯ ಬಟ್ಟೆ ತೆಗೆದುಕೊಂಡ ಪ್ರೇಮರವರು ಯಾಕೆ ಹೀಗೆ ಮಾಡುತ್ತಿದ್ದೀರ ಎಂದು ಕೇಳಿದ್ದಾರೆ. ನಮಗೆ ಹಣ ಬಂಗಾರ ಕೊಡು ಎಂದು ಗದರಿಸಿದ್ದಾರೆ. ಬೆಡ್ ರೂಂನ ಟೇಬಲ್ ಡ್ರಾಯರ್ ನಲ್ಲಿಟ್ಟಿದ್ದ 19 ಸಾವಿರ ರೂ. ನಗದು ತೆಗೆದುಕೊಂಡರು. ಇನ್ನೂ ಹಣ ಬೇಕು ಹೇಳು ಎಲ್ಲಿಟ್ಟಿದ್ದೀಯ ಎಂದು ಗದರಿಸಿ ಬೀರುವಿನಲ್ಲಿಟ್ಟಿದ್ದ 50 ಗ್ರಾಂ ಮಂಗಳ ಗೌರಿಯ ಬೆಳ್ಳಿ ವಿಗ್ರಹ ಮತ್ತು ಆಕೆಯ ಕೈಯಲ್ಲಿದ್ದ ಮೊಬೈಲ್ ನ್ನ ಕಿತ್ತುಕೊಂಡು ಹೋಗಿದ್ದಾರೆ.
ಹೋಗುವಾಗ ಪೊಲೀಸ್ ದೂರು ಕೊಟ್ಟರೆ ಜೀವ ಸಹಿತ ಬಿಡುವುದಿಲ್ಲವೆಂದು ಗದರಿಸಿದ್ದಾರೆ. ಈ ಬಗ್ಗೆ ಎಲ್ ಬಿಎಸ್ ನಗರದಲ್ಲಿರುವ ಮಗನಿಗೆ ತಾಯಿ ಪ್ರೇಮ ಘಟನೆ ಕುರಿತು ಮಾಹಿತಿ ನೀಡಿದ್ದಾರೆ. ನಂತರ ಜಯನಗರ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.