ಕುವೆಂಪು ವಿವಿಯಲ್ಲಿ ಕನ್ನಡ ಸಾಹಿತ್ಯ ಮತ್ತು ಅನ್ಯ ಶಿಸ್ತು ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ

ಶಂಕರಘಟ್ಟ, ಮೇ. 30: ಯಾವುದೇ ಸಂಶೋಧನೆ ಏಕಮುಖಿಯಾಗಿರುವುದಿಲ್ಲ. ಬಹುಶಿಸ್ತೀಯ ಆಯಾಮ ಹೊಂದಿರುತ್ತದೆ. ಹೀಗಾಗಿ ಸಂಶೋಧಕರು ಸೂಕ್ಷಮತಿಗಳಾಗಿರಬೇಕು ಮತ್ತು ಸಮಗ್ರ ದೃಷ್ಟಿಕೋನ ಹೊಂದಿರಬೇಕು ಎಂದು ಬೆಂಗಳೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಡಾ. ಬಸವರಾಜ ಕಲ್ಗುಡಿ ಅಭಿಪ್ರಾಯಪಟ್ಟರು.


ಕುವೆಂಪು ವಿಶ್ವವಿದ್ಯಾಲಯದ ಕನ್ನಡಭಾರತಿ ವಿಭಾಗ ಇಂದು ‘ಕನ್ನಡ ಸಾಹಿತ್ಯ ಮತ್ತು ಅನ್ಯ ಶಿಸ್ತು’ ಕುರಿತು ಆಯೋಜಿಸಿರುವ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು. ಸಮಕಾಲೀನ ಸಂಶೋಧನೆಗಳು ಬದ್ಧತೆಯನ್ನು ಕಳೆದುಕೊಂಡಿವೆ. ಸಮಾಜಮುಖಿ ಉದ್ದಿಶ್ಯಗಳನ್ನು ಮರೆತಂತಿದೆ. ಈ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳದ ಹೊರತು ಅಂತರ್ ಶಿಸ್ತೀಯ ಸಂಶೋಧನೆಗಳು ಯಶಸ್ಸು ಕಾಣಲು ಸಾಧ್ಯವಿಲ್ಲ ಎಂದು ಎಚ್ಚರಿಸಿದರು.


ಕನ್ನಡ ಸಾಹಿತ್ಯದ ಇತಿಹಾಸದಲ್ಲಿ ಸಂಶೋಧನೆಗೆ ಭವ್ಯ ಪರಂಪರೆ ಇದೆ. ಎಲ್. ಬಸವರಾಜು, ಎಂ ಎಂ ಕಲಬುರ್ಗಿ, ಚಿದಾನಂದ ಮೂರ್ತಿ ಅವರಂಥಹ ದಿಗ್ಗಜರು ತಮ್ಮ ಸಂಶೋಧನಾ ಕಾರ್ಯಗಳ ಮೂಲಕ ಕನ್ನಡದ ಅಸ್ಮಿತೆಗೆ ಅನನ್ಯವಾದ ಕೊಡುಗೆ ನೀಡಿದ್ದಾರೆ. ಈ ಮಹನೀಯರು ಅನುಸರಿಸಿದ ವಸ್ತುನಿಷ್ಠ ವಿಧಾನಗಳು ಸಮಕಾಲೀನ ಸಂಶೋಧಕರಿಗೆ ಮಾದರಿಯಾಗಬಲ್ಲದು ಎಂದರು.
ವಿಭಾಗದ ಮುಖ್ಯಸ್ಥ ಪ್ರೊ. ಜಿ. ಪ್ರಶಾಂತ ನಾಯಕ ಮಾತನಾಡಿ, ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆ ಕೈಗೊಳ್ಳುವ ವಿದ್ಯಾರ್ಥಿಗಳು ಅಂತರ್ ಶಿಸ್ತೀಯ ವಿಷಯಗಳ ಬಗ್ಗೆ ಗಮನಹರಿಸುವುದು ಸೂಕ್ತ. ಈ ನಿಟ್ಟಿನಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಸಂಶೋಧನಾ ವಿಧಾನಗಳನ್ನು ಮರುರೂಪಿಸುವ ಅಗತ್ಯವಿದೆ ಎಂದರು.
ಪ್ರೊ. ಶಿವಾನಂದ ಕೆಳಗಿನಮನಿ, ಡಾ. ನೆಲ್ಲಿಕಟ್ಟೆ ಸಿದ್ದೇಶ್, ಡಾ. ಮೋಹನ್ ಚಂದ್ರಗುತ್ತಿ, ಅಧ್ಯಾಪಕರು ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

By admin

ನಿಮ್ಮದೊಂದು ಉತ್ತರ

error: Content is protected !!