ಮಳೆಯ ಹಾನಿ ತಪ್ಪಿಸಲು ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಿ: ಸಚಿವ ನಾರಾಯಣ ಗೌಡ
ಶಿವಮೊಗ್ಗ, ಮೇ.24
ಸಧ್ಯದಲ್ಲೇ ಆರಂಭವಾಗಲಿರುವ ಮುಂಗಾರು ಅವಧಿಯಲ್ಲಿ ಮಳೆಯ ಹಾನಿಯನ್ನು ತಪ್ಪಿಸಲು ಮುಂಜಾಗರೂಕತಾ ಕ್ರಮಗಳನ್ನು ಈಗಲೇ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ನಾರಾಯಣ ಗೌಡ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಇತ್ತೀಚಿನ ಮಳೆಯಿಂದ ಉಂಟಾಗಿರುವ ಹಾನಿ ಕುರಿತು ಪರಿಶೀಲನಾ ಸಭೆ ನಡೆಸಿದರು.
ಕೆರೆಗಳ ಏರಿ ದುರ್ಬಲವಾಗಿರುವುದನ್ನು ಗುರುತಿಸಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕು. ಮರದ ಕೊಂಬೆಗಳು ವಿದ್ಯುತ್ ಕಂಬಗಳ ಮೇಲೆ ಬೀಳದಂತೆ ಅವುಗಳನ್ನು ತೆರವುಗೊಳಿಸಬೇಕು. ಹಾನಿಗೀಡಾಗಿರುವ ಸಂಪರ್ಕ ರಸ್ತೆಗಳ ದುರಸ್ತಿ, ಕೆರೆ ದುರಸ್ತಿ ಕಾರ್ಯಗಳನ್ನು ಕೈಗೊಂಡು ಮತ್ತೆ ಕರೆ ಒಡೆಯದಂತೆ ಎಚ್ಚರಿಕೆ ವಹಿಸಬೇಕು. ಶಿವಮೊಗ್ಗ ನಗರದಲ್ಲಿ ರಾಜಕಾಲುವೆಗಳಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಹೂಳೆತ್ತುವ ಕಾರ್ಯವನ್ನು ಮಾಡಬೇಕು ಎಂದು ಹೇಳಿದರು.
ಮಳೆ ಹಾನಿ ವಿವರ: ಕಳೆದ ವಾರ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಮಳೆಯಿಂದಾಗಿ ಬೆಳೆಗಳು ಹಾಗೂ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿ ಉಂಟಾಗಿದೆ. 24ರಸ್ತೆ, 20 ಸೇತುವೆ ಮತ್ತು ಮೋರಿಗಳು, 427 ವಿದ್ಯುತ್ ಕಂಬಗಳು, 54 ವಿದ್ಯುತ್ ಪರಿವರ್ತಕಗಳು, 24ಶಾಲಾ ಕಟ್ಟಡ, 17 ಅಂಗನವಾಡಿ ಕಟ್ಟಡಗಳು, 43 ಕೆರೆಗಳಿಗೆ ಹಾನಿ ಉಂಟಾಗಿದೆ. 2139 ಮನೆಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ. 5ಮನೆಗಳಿಗೆ ತೀವ್ರ ಹಾನಿ ಉಂಟಾಗಿದ್ದು, 257 ಮನೆಗಳಿಗೆ ಭಾಗಶಃ ಹಾನಿ ಸಂಭವಿಸಿದೆ.
486 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆಗಳಿಗೆ ಹಾಗೂ 2518 ಹೆಕ್ಟೇರ್ ವ್ಯಾಪ್ತಿಯಲ್ಲಿ ಮೆಕ್ಕೆಜೋಳ ಬೆಳೆಗಳಿಗೆ ಹಾನಿ ಉಂಟಾಗಿದೆ. 154 ಹೆಕ್ಟೇರ್ ಬಾಳೆ ಸೇರಿದಂತೆ 178 ಹೆಕ್ಟೇರ್ ತೋಟಗಾರಿಕಾ ಬೆಳೆಗಳೂ ಹಾನಿಗೀಡಾಗಿವೆ. ಮೆಕ್ಕೆಜೋಳ ಮತ್ತು ಭತ್ತವನ್ನು ಕಟಾವು ಮಾಡಿ ರಾಶಿ ಹಾಕಿದ್ದ ಫಸಲು ಮಳೆಯಿಂದ ಸಂಪೂರ್ಣ ಹಾನಿಗೀಡಾಗಿದ್ದು 210ರೈತರು ಇದರಿಂದ ನಷ್ಟ ಅನುಭವಿಸಿದ್ದಾರೆ. ಇದರಲ್ಲಿ 8775ಕ್ವಿಂಟಾಲ್ ಭತ್ತ ಹಾಗೂ 68670 ಕ್ವಿಂಟಾಲ್ ಮೆಕ್ಕೆಜೋಳ ಇಳುವರಿ ಸೇರಿದೆ. ಇದರಲ್ಲಿ ಶೇ.90ರಷ್ಟು ಇಳುವರಿ ನಾಶವಾಗಿದೆ. ಪರಿಹಾರ ಧನ ನೀಡಲು ಅನುದಾನ ಕೊರತೆಯಿರುವುದಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಅವರು ತಿಳಿಸಿದರು.
ಶಿವಮೊಗ್ಗ ನಗರದಲ್ಲಿ ಮಳೆ ಹಾನಿ ತಪ್ಪಿಸಲು 99ಕೋಟಿ ರೂ. ಅಂದಾಜು ವೆಚ್ಚದಲ್ಲಿ ಸಮಗ್ರ ಪ್ರಸ್ತಾವನೆಯನ್ನು ಸಿದ್ಧಪಡಿಸಲಾಗಿದೆ. ಕಾಲುವೆಗಳಲ್ಲಿನ ಹೂಳೆತ್ತುವ ಕಾರ್ಯ ಸೇರಿದಂತೆ ಮುಂಜಾಗರೂಕತಾ ಕಾಮಗಾರಿಗಳನ್ನು ಮಳೆಗಾಲ ಆರಂಭಕ್ಕಿಂತ ಮೊದಲು ಪೂರ್ಣಗೊಳಿಸಲು ಸೂಚಿಸಲಾಗಿದೆ ಎಂದರು.
ಗೃಹ ಸಚಿವ ಅರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಕುಮಾರ ಬಂಗಾರಪ್ಪ, ಅಶೋಕ ನಾಯ್ಕ್, ಡಿ.ಎಸ್.ಅರುಣ್, ಮೇಯರ್ ಸುನಿತಾ ಅಣ್ಣಪ್ಪ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಪೊಲೀಸ್ ವರಿಷ್ಟಾಧಿಕಾರಿ ಲಕ್ಷ್ಮೀ ಪ್ರಸಾದ್ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.