ಶಿವಮೊಗ್ಗ: ಚೋರಡಿ ತಾಯಿ ಮಕ್ಕಳ ಆತ್ಮಹತ್ಯೆ ಪ್ರಕರಣಕ್ಕೆ ಹೊಸ ತಿರುವು ನೀಡಿದ್ದು, ಮೃತ ಮಹಿಳೆಯ ಕುಟುಂಬದವರು ಈಗ ಕುಂಸಿ ಠಾಣೆಗೆ ಮತ್ತೊಂದು ದೂರು ನೀಡಿದ್ದು, ವರದಕ್ಷಣೆ ಕಿರುಕುಳ ಹಾಗೂ ಅನಗತ್ಯ ಹಿಂಸೆ ನೀಡಿ ಮಕ್ಕಳು ತಾಯಿಯನ್ನು ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.
ಕುಂಸಿ ಠಾಣಾ ವ್ಯಾಪ್ತಿಯ ಚೋರಡಿಯಲ್ಲಿ ೨೫ ವರ್ಷದ ಜ್ಯೋತಿ ಅವರು ಒಂದು ವರ್ಷದ ಕುಶಾಲ್ ಹಾಗೂ ಎರಡೂ ವರೆ ವರ್ಷ ಸಾನ್ವಿಗೆ ನೇಣುಹಾಕಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು ಎಂದು ದೂರು ದಾಖಲಾಗಿತ್ತು. ಸಾಸ್ವೇಹಳ್ಳಿ ಮೂಲದ ಜ್ಯೋತಿ ಅವರ ತಾಯಿ ಸುಧಾ ಅವರು ಇಂದು ಬೆಳಗ್ಗೆ ದೂರು ನೀಡಿದ್ದು, ಜ್ಯೋತಿಯ ಗಂಡ ಶಿವಮೂರ್ತಿ, ಅತ್ತೆ ರುದ್ರಮ್ಮ, ಮಾವ ಶೇಖರಪ್ಪ, ಮೈದುನಾ ರಾಮು, ಗಂಡನ ತಂಗಿ ಶಿಲ್ಪ ಹಾಗೂ ನಿಲಮ್ಮ ಅವರ ವಿರುದ್ಧ ದೂರು ನೀಡಿದ್ದಾರೆ. ಮದುವೆಯಾಗಿ ಐದು ವರ್ಷಗಳಿಂದ ಪ್ರತಿನಿತ್ಯ ಜ್ಯೋತಿಗೆ ಕಿರುಕುಳ ನೀಡುತ್ತಿದ್ದು, ಮದುವೆ ಸಮಯದಲ್ಲಿ ವರೋಪಚಾರವಾಗಿ ಮೂರು ಲಕ್ಷ ನಗದುಹಾಗೂ ಇತರೆ ಬಂಗಾರ ನೀಡಿದ್ದರು ಸಹ ಜ್ಯೋತಿಯ ತಂದೆ ತಿಪ್ಪೆರುದ್ರಸ್ವಾಮಿ ಅಪಘಾತದಿಂದ ಪರಿಹಾರ ಬಂದಿರುವುದನ್ನು ಸಹ ತರಲು ಒತ್ತಾಯಿಸಿದ್ದಾರೆ.
ಸರ್ಕಾರಿ ಉದ್ಯೋಗದಲ್ಲಿರುವ ಶಿವಮೂರ್ತಿ ಹಾಗೂ ಅವರ ಕುಟುಂಬದವರು ಜ್ಯೋತಿಗೆ ಮನೆಯೊಳಗೆ ಬಿಟ್ಟುಕೊಳ್ಳದೇ ಸಾಕಷ್ಟು ಪಂಚಾಯಿತಿಗಳ ನಡುವೆ ವರದಕ್ಷಣೆಗೆ ಪೀಡಿಸುತ್ತಿದ್ದರು ಎಂದು ಆರೋಪಿಸಿರುವ ಅವರು ಇವರ ಆತ್ಮಹತ್ಯೆಯ ಮಾಹಿತಿ ತಿಳಿದು ಚೋರಡಿಗೆ ಬಂದು ನೋಡಿದಾಗ ಮೇಲಿನ ಹಂಚು ತೆಗೆದಿದ್ದು, ಅನುಮಾನಕ್ಕೆ ಕಾರಣವಾಗಿದೆ.
ನನ್ನ ಮಗಳು ಹಾಗೂ ಮೊಮ್ಮಕ್ಕಳನ್ನು ಇವರ ಕುಟುಂಬ ನಿನ್ನೆ ಸಂಜೆ ಕೊಲೆ ಮಾಡಿದ್ದಾರೆ ಎಂಬ ಅನುಮಾನ ಮೂಡುತ್ತಿದೆ. ಇದರ ಬಗ್ಗೆ ತನಿಖೆ ನಡೆಸಿ ವರದಕ್ಷಣೆ ಕಿರುಕುಳ ನೀಡಿದ ಈ ಕುಟುಂಬದ ವಿರುದ್ಧ ಕಾನೂನು ಪ್ರಕಾರ ಕ್ರಮಕೈಗೊಳ್ಳಬೇಕೆಂದು ದೂರು ನೀಡಿದ್ದಾರೆ.