Tunga Taranga | April, 11, 2022 | Shivamogga News
ಶಿವಮೊಗ್ಗ : ಜಿಲ್ಲಾ ಭೋವಿ (ವಡ್ಡರ) ಸಮಾಜದ ಬೃಹತ್ ಸಮಾವೇಶ ಹಾಗೂ ಭೋವಿ ಭವನದ ಉದ್ಘಾಟನಾ ಸಮಾರಂಭ ಏ.24ರಂದು ಬೆಳಿಗ್ಗೆ 10ಗಂಟೆಗೆ ಎನ್ಇಎಸ್ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಎಸ್.ರವಿಕುಮಾರ್ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಸುಮಾರು 1.50 ಲಕ್ಷ ಕ್ಕೂ ಹೆಚ್ಚು ಸಮಾಜದ ಮತದಾರರಿದ್ದಾರೆ. ಭೋವಿ ಸಮಾಜದವರ ಕಲ್ಯಾಣಕ್ಕಾಗಿ ಸಂಘಟನೆಗಾಗಿ ಮತ್ತು ಸರ್ಕಾರದ ಗಮನ ಸೆಳೆಯಲು ಈ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸುಮಾರು 25 ಸಾವಿರ ಸಮಾಜ ಬಾಂಧವರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಭೋವಿ ಸಮಾಜದವರಿಗೆ ತಮ್ಮದೆ ಆದ ಇತಿಹಾಸವಿದೆ. ಶ್ರಮಿಕಾರಾದ ಇವರು ಕೆರೆ, ಕಟ್ಟೆ, ಗುಡಿ, ಗೋಪುರ ಕಟ್ಟುವುದರಿಂದ ಹಿಡಿದು ಆಧುನಿಕತೆಯ ಕಟ್ಟಡ ನಿರ್ಮಾಣದಲ್ಲೂ ಸೈ ಎನಿಸಿಕೊಂಡಿದ್ದಾರೆ. ಕೆಲಸದ ಒತ್ತಡಕ್ಕಾಗಿ ಊರಿಂದ ಊರಿಗೆ ಹೋಗುವ ಇವರು ಅಲೆಮಾರಿಗಳಾಗಿ ಬದುಕು ದೂಡುತ್ತಿದ್ದಾರೆ. ಭೋವಿ ಸಮಾಜದವರ ಸ್ಥಿತಿ ಇಂದಿಗೂ ಉತ್ತಮವಾಗಿಲ್ಲ. ಈ ನಿಟ್ಟಿನಲ್ಲಿ ಸಂಘಟನೆ ಮತ್ತು ಜಾಗೃತಿ ಮೂಡಿಸುವ ಹಿನ್ನಲೆಯಲ್ಲಿ ಈ ಸಮಾವೇಶ ಆಯೋಜಸಲಾಗಿದೆ ಎಂದರು.
ಸಮಾಜದ ಜಗದ್ಗುರು ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಉದ್ಘಾಟಿಸುವರು. ಭೋವಿ ಭವನದ ಉದ್ಘಾಟನೆಯನ್ನು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೆರವೇರಿಸುವರು ಸ್ಮರಣ ಸಂಚಿಕೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡುವರು. ವಿಶೇಷ ಆಹ್ವಾನಿತರಾಗಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸಚಿವ ಕೆ.ಎಸ್.ಈಶ್ವರಪ್ಪ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್, ಗೃಹ ಸಷಿವ ಅರಗ ಜ್ಞಾನೇಂದ್ರ, ಉಸ್ತುವಾರಿ ಸಚಿವ ಕೆ.ನಾರಾಯಣಗೌಡ ಉಪಸ್ಥಿತರಿರುವರು. ಇವರ ಜೊತೆಗೆ ನಮ್ಮ ಸಮಾಜದ ಎಲ್ಲಾ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿಯೇ ಸಮಾಜಕ್ಕೆ ಅನುದಾನ ನೀಡಿರುವ ಮಹಾನೀಯರಿಗೆ ಕೃತಜ್ಞತೆ ಸಲ್ಲಿಸಲಾಗುವುದು ಎಂದರು.
ಸಮಾಜದ ತಾಲೂಕು ಅಧ್ಯಕ್ಷ ಧೀರ್ರಾಜ್ ಹೊನ್ನವಿಲೆ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಇದೇ ಸಂದರ್ಭದಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಸತಿ ಶಾಲೆಗೆ ಭೂಮಿ ಮಂಜೂರು, ಕಟ್ಟಡ ನಿರ್ಮಾಣಕ್ಕೆ ಅನುದಾನ, ಸಕಾಲದಲ್ಲಿ ಜಾತಿ ದೃಢೀಕರಣ ಪತ್ರ ನೀಡುವುದು. ಗಣಿಗಾರಿಕೆಗೆ ಭೋವಿ ಸಮಾಜದವರಿಗೆ ಆದ್ಯತೆ ನೀಡುವುದು. ಭೋವಿ ಅಭಿವೃದ್ಧಿ ನಿಗಮಕ್ಕೆ ಅಧ್ಯಕ್ಷರ ನೇಮಕ, 3ಸಾವಿರ ಕೋಟಿ ಅನುದಾನ. ಸಂಪುಟದಲ್ಲಿ ಭೋವಿ ಸಮಾಜದವರಿಗೆ ಅವಕಾಶ ನೀಡುವುದು, ಭೂಮಿ ಒಡೆತನದ ಹಕ್ಕುಪತ್ರ ಮುಂತಾದ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಸಮಾವೇಶದ ಮೂಲಕ ಸರ್ಕಾರಕ್ಕೆ ಆಗ್ರಹ ಪಡಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಕಾರ್ಯದರ್ಶಿ ಓ.ರಾಮಕೃಷ್ಣಪ್ಪ, ಪ್ರಮುಖರಾದ ವೀರಭದ್ರಪ್ಪ ಪೂಜಾರ್, ಟಿ.ಕೃಷ್ಣಪ್ಪ, ಗಣೇಶ್, ತಿಮ್ಮರಾಜ್, ರತ್ನಯ್ಯ, ಟೈಲರ್ ನಿಂಗರಾಜ್, ಲೋಕೇಶ್ ಮುಂತಾದವರಿದ್ದರು.