ಸಾಗರ: (ಮುಪ್ಪಾನೆ)
ಕಪ್ಪೆಗಳ ಬಗ್ಗೆ ಜಾಗೃತಿ ಮೂಡಿಸಬೇಕಾದ ತುರ್ತುಸ್ಥಿತಿ ಈಗ ದೇಶದೆಲ್ಲೆಡೆ ಇದೆ. ಹೀಗಾಗಿ ಇತ್ತೀಚೆಗೆ ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಮಂಡೂಕ (ಕಪ್ಪೆ) ಗಳ ಬಗ್ಗೆ ಜಾಗೃತಿ ಮೂಡಿಸುವ ಹಬ್ಬವೊಂದನ್ನು ಆಯೋಜಿಸಲಾಗಿದೆ.
ರೈತೋಪಯೋಗಿ ಜೀವವೈವಿಧ್ಯತೆಯ ಪ್ರತೀಕ “ಕಪ್ಪೆ”ಗಳ ಸಂತತಿ ಅಳಿಯುತ್ತಿದೆ. ಅಳಿದುಳಿದಿರುವ ಒಂದಿಷ್ಟು ಕಪ್ಪೆಗಳನ್ನು ಉಳಿಸಿಕೊಂಡು ಹೋಗುವ ನಿಟ್ಟಿನಲ್ಲಿ ”ಕಪ್ಪೆ ಹಬ್ಬ’ ಆಚರಿಸಲಾಗುತ್ತಿದೆ.
ಇತ್ತೀಚೆಗೆ ಕರ್ನಾಟಕದಲ್ಲಿ ಪರಿಸರವಾದಿಗಳು ರಾಜ್ಯ ಕಪ್ಪೆ ಘೋಷಣೆಗೆ ಚಿಂತನೆ ನಡೆಸಿದ್ದರು. ಪಶ್ಚಿಮಘಟ್ಟಗಳಲ್ಲಿ ಕಂಡು ಬರುವ ಮಲಬಾರ್ ಟ್ರೀ ಟೋಡ್ ಎಂಬ ಅಪರೂಪದ, ಅಳಿವಿನ ಅಂಚಿನಲ್ಲಿರುವ ಪ್ರಭೇದದ ಕಪ್ಪೆಯನ್ನು ರಾಜ್ಯ ಕಪ್ಪೆಯನ್ನಾಗಿ ಘೋಷಣೆ ಮಾಡಬೇಕೆಂದು ತಜ್ಞರು ಒತ್ತಾಯವನ್ನೂ ಮಾಡಿದ್ದರು.
ಅದರ ಮುಂದುವರೆದ ಭಾಗವಾಗಿ ಇದೀಗ ಕಪ್ಪೆಯ ಉಳಿವಿಗಾಗಿ ಜಾಗೃತಿ ಮೂಡಿಸಲೆಂದೇ ಇದೇ ಡಿ.18, 19 ಎರಡು ದಿನಗಳ ಕಾಲ ಕಪ್ಪೆ ಹಬ್ಬ ನಡೆಸಲು ಕರ್ನಾಟಕ ರಾಜ್ಯ ಅರಣ್ಯ, ವನ್ಯಜೀವಿ ಸಂರಕ್ಷಣೆ ಶಿವಮೊಗ್ಗ, ಸಾಗರ, ಕಾರ್ಗಲ್ ವಿಭಾಗ ದೇಶದಲ್ಲಿಯೇ ಮೊದಲ ಬಾರಿಗೆ ”ಕಪ್ಪೆ ಹಬ್ಬ” ವನ್ನು ಆಯೋಜಿಸುತ್ತಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ವಲಯದ ಮುಪ್ಪಾನೆ ಎಂಬ ನಿರ್ಜನ ಪ್ರವಾಸಿ ತಾಣದಲ್ಲಿ “ಕಪ್ಪೆ ಹಬ್ಬ”’ಕ್ಕೆ ಚಾಲನೆ ಸಿಗಲಿದ್ದು, ಸತತ 6 ತಿಂಗಳ ಕಾಲ ಕಪ್ಪೆ ಹಬ್ಬ ನಡೆಯಲಿರುವುದು ಮಲೆನಾಡಿನಲ್ಲಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಪಶ್ಚಿಮ ಘಟ್ಟದಲ್ಲಿ ಪರಿಸರ ಸ್ನೇಹಿ ವಾತಾವರಣ ನಿರ್ಮಾಣಕ್ಕೆ ಜನರು ಮುಂದಾಗಬೇಕು ಈ ಮೂಲಕ ಅರಣ್ಯ ಹಾಗೂ ವನ್ಯಜೀವಿಗಳನ್ನು ಸಂರಕ್ಷಿಸುವುದು ಕೂಡ ಪ್ರತಿಯೊಬ್ಬ ವ್ಯಕ್ತಿಯ
ಆದ್ಯ ಕರ್ತವ್ಯ ಎಂಬುದು ಅರಣ್ಯ ಇಲಾಖೆಯ ಮಾತು.