ಶಿವಮೊಗ್ಗ, ಅ.25:
66ನೇ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸುವ ಉದ್ದೇಶದಿಂದ ಶಿವಮೊಗ್ಗದ ರಂಗಾಯಣವು ‘ಕನ್ನಡಕ್ಕಾಗಿ ನಾವು’ ಏಕವ್ಯಕ್ತಿ ರಂಗೋತ್ಸವವನ್ನು ಅಕ್ಟೋಬರ್ 28 ಮತ್ತು 29 ರಂದು ನಗರದ ಅಶೋಕನಗರ ಹೆಲಿಪ್ಯಾಡ್ ಹಿಂಭಾಗ ಇರುವ ಸಾಂಸ್ಕøತಿಕ ಕನ್ನಡ ಭವನದಲ್ಲಿ ಆಯೋಜಿಸಿದೆ.
ಅಕ್ಟೋಬರ್ 28 ರಂದು ಸಂಜೆ 6 ಕ್ಕೆ ಕನ್ನಡಕ್ಕಾಗಿ ನಾವು ರಂಗೋತ್ಸವವನ್ನು ಖ್ಯಾತ ರಂಗಕರ್ಮಿ ಡಾ.ಸಾಸ್ವೆಹಳ್ಳಿ ಸತೀಶ್ ಉದ್ಘಾಟಿಸುವರು. ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ನಾಗೇಂದ್ರ ಎಫ್.ಹೊನ್ನಳ್ಳಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಉಮೇಶ್.ಹೆಚ್ ಹಾಗೂ ರಂಗಸಮಾಜದ ಸದಸ್ಯ ಹಾಲಸ್ವಾಮಿ.ಎಸ್ ಪಾಲ್ಗೊಳ್ಳುವರು. ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಅಧ್ಯಕ್ಷತೆ ವಹಿಸುವರು.
ಅ.28 ರ ಸಂಜೆ 6.30 ಕ್ಕೆ ಡಾ.ಬೇಲೂರು ನಂದನ್ ರಚನೆಯ, ಕೃಷ್ಣಮೂರ್ತಿ ಕವತ್ತಾರ್ ನಿರ್ದೇಶನದ ಗೋಕುಲ ಸಹೃದಯ ಅಭಿನಯದ ‘ಚಿಟ್ಟೆ’ ಹಾಗೂ ಕರಿಯಪ್ಪ ಕವಲೂರು ರಂಗರೂಪ, ನಿರ್ದೇಶನ, ಅಭಿನಯದ ‘ಸ್ಮಶಾನ ವಾಸಿಯ ಸ್ವಗತ’ ಏಕವ್ಯಕ್ತಿ ನಾಟಕಗಳ ಪ್ರದರ್ಶನ ನಡೆಯಲಿದೆ.
ಅ.29 ರ ಸಂಜೆ 6.30 ಕ್ಕೆ ಹೆಚ್.ಎಸ್.ದ್ಯಾಮೇಶ ರಚನೆಯ, ವೈ.ಡಿ.ಬದಾಮಿ ನಿರ್ದೇಶನದ ಮಂಜುಳಾ ಬದಾಮಿ ಅಭಿನಯದ ‘ವಸುಂಧರೆ’ ಹಾಗೂ ಮಧು ಮಳವಳ್ಳಿ ನಿರ್ದೇಶನದ ವನಿತಾ ರಾಜೇಶ್ ಅಭಿನಯದ ‘ಮಧುರ ಮಂಡೋದರಿ’ ಏಕವ್ಯಕ್ತಿ ನಾಟಕ ಪ್ರದರ್ಶನ ನಡೆಯಲಿದೆ.
ಟಿಕೆಟ್ ದರ ಒಂದು ದಿನ ಒಬ್ಬರಿಗೆ ರೂ.30 ಆಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ರಂಗಾಸಕ್ತರು ಪಾಲ್ಗೊಳ್ಳಬೇಕೆಂದು ರಂಗಾಯಣದ ಆಡಳಿತಾಧಿಕಾರಿ ಶಫಿ ಸಾದುದ್ದೀನ್ ತಿಳಿಸಿದ್ದಾರೆ.