ಶಿವಮೊಗ್ಗ:
ಸಂಶೋಧನೆ ಕೈಗೊಳ್ಳುವ ಬಡ ವಿದ್ಯಾರ್ಥಿಗಳ ದತ್ತು ಪಡೆಯುವ ಯೋಜನೆ ಹಿರಿಯ ವಿದ್ಯಾರ್ಥಿಗಳ ಸಂಘದಿಂದ ಆಗಬೇಕಾಗಿದೆ ಎಂದು ಸಹ್ಯಾದ್ರಿ ಕಾಲೇಜಿನ ಹಿರಿಯ ವಿದ್ಯಾರ್ಥಿ ಹಾಗೂ ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಹೇಳಿದರು.

ವರು ಇಂದು ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಹಿರಿಯ ವಿದ್ಯಾರ್ಥಿಗಳ ಸಂಘದ ವತಿಯಿಂದ ಆಯೋಜಿಸಿದ್ದ ಹಿರಿಯ ವಿದ್ಯಾರ್ಥಿಗಳ ಸಮಾಗಮ ಹಾಗೂ ನಿವೃತ್ತ ಪ್ರಾಧ್ಯಾಪಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಹ್ಯಾದ್ರಿ ಕಾಲೇಜ್ ನಲ್ಲಿ ಓದಿದ ನೆನಪುಗಳನ್ನು ಮಾಡಿಕೊಳ್ಳುವುದೇ ಒಂದು ಸುಂದರ ಅನುಭವ. ಮನುಷ್ಯನ ಜೀವನದಲ್ಲಿ ಕಾಲಘಟ್ಟಗಳು ನಡೆಯುತ್ತಲೇ ಇರುತ್ತವೆ. ಇಂತಹ ಕಾಲಘಟ್ಟಗಳ ಮರು ನೆನಪು ಮಾಡಿಕೊಳ್ಳುವುದೂ ಒಂದು ಸಂಭ್ರಮದ ವಿಷಯವೇ. ಹಾಗಾಗಿ ಸಹ್ಯಾದ್ರಿ ಕಾಲೇಜಿನಲ್ಲಿದ್ದ ‘ಆ ದಿನಗಳ’ ನೆನಪಿನಲ್ಲಿ ಅಸಂಖ್ಯಾತ ವಿಷಯಗಳು, ಕಾರಿಡಾರ್ ನಲ್ಲಿ ಓಡಾಡಿದ ಕ್ಷಣಗಳು, ಚಳವಳಿಗಳಲ್ಲಿ ಭಾಗವಹಿಸಿದ ಕ್ಷಣ, ಆಟಗಳಲ್ಲಿ ಭಾಗವಹಿಸಿದ ನೆನಪು, ಗೆಳಯರು, ಗೆಳತಿಯರ ಜೊತೆ ಹರಟುತ್ತಿದ್ದ ದಿನಗಳು, ಇವೆಲ್ಲವೂ ಇಂದು ಮನಸ್ಸಿನ ಪಟಲದ ಮೇಲೆ ನಿನ್ನೆ ನಡೆದಷ್ಟೇ ಹಸಿಯಾಗಿದೆ ಎಂದರು.
ಸಹ್ಯಾದ್ರಿ ಕಾಲೇಜ್ ನಲ್ಲಿ ಹಿರಿಯ ವಿದ್ಯಾರ್ಥಿಗಳ ಸಂಘ ರಚನೆಯಾಗಿರುವುದು ಕೇವಲ ಅಲ್ಲಿನ ಸಂತಸದ ದಿನಗಳನ್ನು ನೆನಪು ಮಾಡಿಕೊಳ್ಳುವುದಷ್ಟೇ ಅಲ್ಲ, ಸಹ್ಯಾದ್ರಿ ಕಾಲೇಜಿನಲ್ಲಿ ಈಗಲೂ ಬಡತನದಿಂದ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿದ್ದಾರೆ. ಇಂದು ವಿದ್ಯಾರ್ಥಿಗಳ ಓದಿನ ಹರಿವು ಹೆಚ್ಚಾಗಿದೆ ಮತ್ತು ಸಂಶೋಧನೆಯತ್ತ ಹೆಚ್ಚು ಗಮನಹರಿಸುತ್ತಿದ್ದಾರೆ. ಆದರೆ, ಅವರಿಗೆ ಬಡತನದ ಕಾರಣದಿಂದ ಹಿಂದೆ ಸರಿಯುತ್ತಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸಂಘವು ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಸಂಶೋಧನೆಗೆ ಸಹಾಯಕವಾಗಬೇಕು. ಈ ಕೆಲಸವನ್ನು ಸಂಘ ಮುಂದೆ ಮಾಡಲಿದೆ ಎಂದರು.


ಹಾಗೆಯೇ ಈ ಕಾಲೇಜಿನಲ್ಲಿ ಓದಿದ ಲಕ್ಷಾಂತರ ವಿದ್ಯಾರ್ಥಿಗಳು ಇಂದು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ. ಹಾಗೆಯೇ ಉಪಾಧ್ಯಾಯರೂ ಆಗಿದ್ದಾರೆ. ಅನೇಕ ಕಾಲೇಜುಗಳಲ್ಲಿ ಪ್ರಾಂಶುಪಾಲರಾಗಿ ನಿವೃತ್ತಿ ಹೊಂದಿದ್ದಾರೆ. ಇಂತಹವರನ್ನೆಲ್ಲಾ ಗುರುತಿಸಿ ಅವರಿಗೆ ಸನ್ಮಾನ ಮಾಡುವುದು ಕೂಡ ಮತ್ತೊಂದು ಕೆಲಸವಾಗಿದೆ. ಮೊದಲ ಕಾರ್ಯಕ್ರಮವಾಗಿ ಹಿರಿಯ ವಿದ್ಯಾರ್ಥಿಗಳು ನಿವೃತ್ತಿಯಾದವನ್ನು ಗುರುತಿಸಿ ಸನ್ಮಾನ ಮಾಡುತ್ತಿರುವುದು ಅತ್ಯಂತ ಸಂತೋಷದ ವಿಷಯವಾಗಿದೆ ಎಂದರು.
ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ. ಅಶೋಕ್ ನಾಯ್ಕ್ ಮಾತನಾಡಿ, ದೇಶಕಟ್ಟುವ ಕೆಲಸ ನಾಲ್ಕು ಗೋಡೆಗಳ ಮಧ್ಯೆ ನಡೆಯುತ್ತದೆ ಎಂಬುದು ಸುಳ್ಳಲ್ಲ. ಸಹ್ಯಾದ್ರಿ ಕಾಲೇಜಿನ ಎಲ್ಲ ನಾಲ್ಕು ಗೋಡೆಗಳ ಕೊಠಡಿಗಳಿಂದ ದೇಶ ಭಕ್ತಿಯ ಪಾಠವಾಗುತ್ತಿತ್ತು. ಕಲ್ಲುಬಂಡೆಯಂತಹ ವಿದ್ಯಾರ್ಥಿಗಳನ್ನು ಶಿಲಾಮೂರ್ತಿಗಳನ್ನಾಗಿ ಮಾಡಿದ ಕೀರ್ತಿ ನಮ್ಮ ಗುರುಗಳಿಗೆ ಸಲ್ಲುತ್ತದೆ. ಹಾಗಾಗಿ ಇಂದು ಗುರುವಂದನಾ ಕಾರ್ಯಕ್ರಮವನ್ನು ಇಲ್ಲಿ ಆಯೋಜಿಸಿರುವುದು ಸಮರ್ಥನೀಯವಾಗಿದೆ ಎಂದರು.


ವರ್ತಮಾನಕ್ಕೆ ತಕ್ಕಂತೆ ಸಹ್ಯಾದ್ರಿ ಕಾಲೇಜಿನಲ್ಲಿ ಒಳ್ಳೆಯ ಬೆಳವಣಿಗೆಗಗಳು ಆಗುತ್ತಲೇ ಇವೆ. ನಾವು ಓದಿದಾಗ ಇದ್ದ ಅತ್ಯುತ್ತಮ ಶಿಕ್ಷಕರಂತೆ ಈಗಲೂ ಇದ್ದಾರೆ. ಇದೊಂದು ಜ್ಞಾನದ ದೇಗುಲವೇ ಆಗಿದೆ. ಹಾಗಾಗಿಯೇ ದೊಡ್ಡ ದೊಡ್ಡ ಕಾಲೇಜಿನಲ್ಲಿ ಓದಿಸುವ ಶಕ್ತಿ ಇದ್ದ ನಾನು ನನ್ನ ಇಬ್ಬರು ಮಕ್ಕಳನ್ನು ಇದೇ ಕಾಲೇಜಿನಲ್ಲಿ ಓದಿಸುತ್ತಿದ್ದೇನೆ. ಇದು ನನಗೆ ತೃಪ್ತಿ ತಂದಿದೆ. ಸಹ್ಯಾದ್ರಿ ಕಾಲೇಜ್ ನಮ್ಮಂತಹ ಸಾವಿರಾರು ಜನರಿಗೆ ಉದ್ಯೋಗ, ಹೆಸರು, ಜ್ಞಾನ ಎಲ್ಲವನ್ನು ನೀಡಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಆರ್.ಕೆ. ಸಿದ್ಧರಾಮಣ್ಣ ಮಾತನಾಡಿ, ಸಹ್ಯಾದ್ರಿ ಕಾಲೇಜ್ ಅಭಿವೃದ್ಧಿಪಡಿಸಲು ಪ್ರಯತ್ನಿಸಲಾಗುವುದು. ಜಿಲ್ಲೆಯಲ್ಲಿಯೇ ಮಾದರಿ ಕಾಲೇಜನ್ನಾಗಿಸಲು ಹಿರಿಯ ವಿದ್ಯಾರ್ಥಿಗಳ ಸಂಘದೊಂದಿಗೆ ಚರ್ಚಿಸಲಾಗುವುದು ಎಂದರು.


ಸಹ್ಯಾದ್ರಿ ಕಾಲೇಜಿನಲ್ಲಿ ಓದಿ, ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿದ ಪ್ರೊ. ಹೂವಯ್ಯಗೌಡ, ಪ್ರೊ. ಬಿ.ಎಂ. ರುದ್ರಪ್ಪ ಹಾಗೂ ಪ್ರೊ. ಶಕುಂತಲಾ, ಪ್ರೊ. ಗಾಯತ್ರಿದೇವಿ ಸಜ್ಜನ್, ಪ್ರೊ. ಲೀಲಾ ಬೆನ್ನೂರು, ಪ್ರೊ. ಸಿದ್ಧರಾಮಪ್ಪ, ಪ್ರೊ. ಗೌಡರ ಶಿವಣ್ಣನವರ್, ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಿ.ಎಂ. ನಾಗರಾಜ್ ಸೇರಿದಂತೆ ಹಲವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕುವೆಂಪು ವಿವಿ ಕುಲಪತಿ ಪ್ರೊ. ಬಿ.ಪಿ. ವೀರಭದ್ರಪ್ಪ, ಕುಲ ಸಚಿವೆ ಅನುರಾಧ ಜಿ., ಪ್ರಾಂಶುಪಾಲರಾದ ಪ್ರೊ. ಹೆಚ್.ಎಂ. ವಾಗ್ದೇವಿ, ಪ್ರೊ. ಕೆ.ಬಿ. ಧನಂಜಯ, ಪ್ರೊ. ಎಂ.ಕೆ. ವೀಣಾ ಸೇರಿದಂತೆ ಹಲವರಿದ್ದರು. ಹಿರಿಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ಮೆರುಗು ತಂದರು.

By admin

ನಿಮ್ಮದೊಂದು ಉತ್ತರ

error: Content is protected !!