ಗೋಣಿಬೀಡು ಸೆ.04: “ಶ್ರೀಶೀಲ ಸಂಪಾದನಾ ಮಠ” ಕರ್ನಾಟಕದ ಪ್ರಾಚೀನ ಆಧ್ಯಾತ್ಮಿಕ ಕೇಂದ್ರ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಗೋಣಿಬೀಡು ಗ್ರಾಮದ ಭದ್ರಾ ನದಿಯ ಎಡದಂಡೆಯ ಸುಂದರ ಪ್ರಾಕೃತಿಕ ಮಡಿಲಲ್ಲಿ ಸ್ಥಾಪನೆಗೊಂಡಿರುವ “ಶ್ರೀ ಶೀಲ ಸಂಪಾದನಾ ಮಠ” ಅನೇಕ ಐತಿಹಾಸಿಕ ದಾಖಲೆಗಳನ್ನು ಹುದುಗಿಸಿಕೊಂಡಿದೆ. ಶ್ರೀಮಠ ಕೇವಲ ಭಕ್ತಿಯ ಕೇಂದ್ರವಾಗಿರದೆ ಮಾನವತೆಯ ಶಕ್ತಿ ಕೇಂದ್ರವಾಗಿದೆ ಹಾಗೂ ಭಾವೈಕ್ಯತೆಯ ತಾಣವಾಗಿದೆ.


ಶ್ರೀಮಠದ ಚರಿತ್ರೆ ಒಂದು ಸಾವಿರ ವರುಷಗಳಷ್ಟು ಪುರಾತನವಾದುದು. ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಉಜ್ವಲತೆಯ ಕ್ರಾಂತಿಕಾರಿ ಪುಟಗಳಾಗಿ ಕಂಗೊಳಿಸುತ್ತಿರುವ ಹನ್ನೆರಡನೆ ಶತಮಾನದ ಬಸವಾದಿ ಅಮರಗಣಂಗಳ ಆ ಮರೆಯಲಾಗದ ಸಮಾಜೋಧಾರ್ಮಿಕ ಕ್ರಾಂತಿಯೊಂದಿಗೆ ಶ್ರೀ ಶೀಲಸಂಪಾದನಾಮಠ ಅಂತಃಸಂಬಂಧ ಹೊಂದಿದೆ.
ವಿದ್ಯೆಯಲಿ, ಯೋಗದಲಿ, ಶೀಲಾಚರಣೆಯಲಿ, ಶಿವಪೂಜೆಯಲಿ ಶಕ್ತಿಗಳಿಸಿಕೊಳ್ಳಲು ಸಾಧನೆ ಬಹಳ ಮುಖ್ಯವಾಗುತ್ತದೆ. ಧ್ಯಾನ, ಮೌನ, ಉಪವಾಸ ಹಾಗೂ ಏಕಾಂತ ಅಂತಃಸತ್ವವನ್ನು ಹೆಚ್ಚಿಸುತ್ತದೆ. ಇದರಿಂದ ವ್ಯಕ್ತಿ ಶಿವಯೋಗ ಸಾಧಕನಾಗುತ್ತಾನೆ. ಇದು ಅಚಲ ಅನುಷ್ಠಾನದಿಂದ ಮಾತ್ರ ಸಾಧ್ಯವೆಂಬುದನ್ನು ಪೂಜ್ಯ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು ಸರ್ವ ಸಂಘ ಪರಿತ್ಯಾಗಿಯಾಗಿ, ಒಪ್ಪತ್ತಿನ ಫಲಾಹಾರದೊಂದಿಗೆ ಮೌನಾಚರಣೆ, ಸರ್ವ ಧರ್ಮದ ಗ್ರಂಥಗಳ ದೀರ್ಘ ಅಧ್ಯಯನ ಮಾಡುವ ಮೂಲಕ ಮನೋವಿಕಾಸಗೊಳಿಸಿಕೊಂಡಿದ್ದಾರೆ. ಈ ಹಿಂದೆ ಸಾರ್ಥಕ 3 ವರ್ಷದ ದೀರ್ಘ ಅನುಷ್ಠಾನವನ್ನು ಪೂರೈಸಿದ ಗುರುಗಳು, ಈಗ ಮತ್ತೆ 23 ತಿಂಗಳ ಮೌನ ತಪ್ಪಸ್ಸನ್ನುಗೈದು “ಶಿಲೆಯೊಳಗಿನ ಮೂರ್ತಿಯಂತೆ, ಉದಕದೊಳಗಣ ಪ್ರತಿಬಿಂಬದಂತೆ, ಬೀಜದೊಳಗಣ ವೃಕ್ಷದಂತೆ, ಶಬ್ಧದೊಳಗಣ ನಿಶ್ಯಬ್ಧದಂತೆ, ಶೂನ್ಯದೊಳಗಿನ ಶೂನ್ಯದಂತೆ, ಶೀಲದೊಳಗಿನ ಶೀಲವೇ ತಾವಾಗಿ ಶೀಲ ಸಂಪಾದನೆ ಸರ್ವರೊಳಗೂ ಬೆಳಗಬೇಕು” ಎಂಬ ಮಹಾದಾಸೆ ಇಟ್ಟುಕೊಂಡು ಸಿದ್ಧಜಂಗಮತ್ವ ಪಡೆದು ಖಾವಿಗೆ ಶಕ್ತಿ ತುಂಬಿಕೊಂಡು ಇದೇ ಸೆಪ್ಟೆಂಬರ್ 5 ರಂದು ಭಾನುವಾರ ಬೆಳಿಗ್ಗೆ 11.00 ಘಂಟೆಗೆ ಯೋಗಾನುಷ್ಠಾನ, ಮೌನ ವ್ರತ ಮುಗಿಸಿ ಪೂರ್ಣತೆಯಿಂದ ಪರಿಪೂರ್ಣತೆಯೆಡೆಗೆ ಸಾಗಿ ಬರುತ್ತಿದ್ದಾರೆ.
ಆತ್ಮ ಸಾಕ್ಷಾತ್ಕಾರ ಬಯಸುವವರಿಗೆ ದೀರ್ಘಾನುಷ್ಠಾನ ದೊಡ್ಡ ಅವಕಾಶವೂ ಹೌದು, ದೊಡ್ಡ ಆಹ್ವಾನವೂ ಹೌದು. ಈ ಎರಡರಲ್ಲಿಯೂ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು ಯಶಸ್ವಿಯಾಗಿದ್ದಾರೆ. ಸನ್ಯಾಸಿ ಸಂಸ್ಕøತಿ ಸಂಸ್ಕೃತಿ ಗಿಂತ ಜಂಗಮ ಸಂಸ್ಕೃತಿ ಬಹಳ ಭಿನ್ನವಾದದ್ದು. ಸನ್ಯಾಸಿ ಕೇವಲ ಆತ್ಮೋದ್ಧಾರದೆಡೆಗೆ ಪಯಣಿಸಿದರೆ ಜಂಗಮ ಆತ್ಮೋದ್ದಾರದೊಂದಿಗೆ ವರ್ಗಬೇದ, ವರ್ಣ ಬೇದ, ಲಿಂಗಬೇದವಿಲ್ಲದೆ ಸಮಾಜ ಸೇವಾ ದೀಕ್ಷಿತರಾಗಿರುತ್ತಾರೆ. ಅನುಷ್ಠಾನದಿಂದ ಈ ದೀಕ್ಷೆಯನ್ನು ಗಳಿಸಿಕೊಂಡಿರುವ ಶ್ರೀಸಿದ್ಧಲಿಂಗ ಮಹಾಸ್ವಾಮಿಗಳು ಭಕ್ತರ ಆತ್ಮ ಶುದ್ದಿಯ ಜೊತೆಗೆ ಸಮಾಜ ಸಂವೃದ್ಧಿಗೆ ಬಳಸಲು ಬೆಳಕಿನೆಡೆಗೆ ಆಗಮಿಸುತ್ತಿದ್ದಾರೆ.


ಅನುಷ್ಠಾನ ಮೂರ್ತಿ ಮಹಾ ತಪಸ್ವಿ ಸಿದ್ಧಲಿಂಗ ಮಹಾ ಸ್ವಾಮಿಗಳ ಕಠಿಣ ವೃತ ಮಠದ ಇತಿಹಾಸದಲ್ಲಿ ಸ್ಮರಣೀಯ. ಮಣ್ಣಬಿತ್ತಿ ಹೊನ್ನ ಬೆಳೆದಂತೆ 20 ವರ್ಷದ ಕಾಯಕಯೋಗ, 3 ವರ್ಷದ ಹಾಗು ಈಗಿನ 23 ತಿಂಗಳ ತಪೋಶಕ್ತಿಯ ಪ್ರಭಾವದಿಂದ ಅಲ್ಪಾವಧಿಯಲ್ಲೇ ನಾಡಿನಾಚೆಗೂ ಶ್ರೀಮಠ ಪರಿಚಿತಗೊಂಡು ಸರ್ವ ಜನಾಂಗದ, ಸರ್ವಧರ್ಮೀಯರ ಆಧ್ಯಾತ್ಮ ಸಾಧನೆಯ ಸ್ಪೂರ್ತಿಯ ಕೇಂದ್ರವಾಗಿ ಬೆಳೆಯತೊಡಗಿದೆ. ಈಗ ಇವರ ಬರುವಿಕೆಗಾಗಿ ಭಕ್ತಾಧಿಗಳು ಹಂಬಲಿಸುತ್ತಿದ್ದಾರೆ.
ಮಹಾತಪಸ್ವಿ ಪೂಜ್ಯ ಶ್ರೀ ಸಿದ್ಧಲಿಂಗಮಹಾಸ್ವಾಮಿಗಳವರು 23 ತಿಂಗಳ ತಪೋನುಷ್ಠಾನ ಮುಗಿಸಿ ಬರುತ್ತಿರುವ ಪುಣ್ಯ ಸಮಯದಲ್ಲಿ ಇದರ ಅಂಗವಾಗಿ ಭಕ್ತವೃಂದ “ತಪೋನುಷ್ಠಾನ ಸಮಾರೋಪ” ಸಮಾರಂಭವನ್ನು ಹಾಗೂ ದಾಸೋಹ ಮಂದಿರದ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡು ಸೆಪ್ಟೆಂಬರ್ 5 ರ ಭಾನುವಾರದ ದಿನವನ್ನು ಸ್ಮರಣೀಯಗೊಳಿಸಲು ಸಮಸ್ತ ಭಕ್ತವೃಂಧ ಶ್ರೀಮಠದ ಆವರಣದಲ್ಲಿ ಸಜ್ಜಾಗಿದೆ.
ಕಾರ್ಯಕ್ರಮವು ಸೆಪ್ಟೆಂಬರ್ 5 ರ ನಾಳಿನ ಭಾನುವಾರ ಬೆಳಿಗ್ಗೆ 11.00 ಘಂಟೆಗೆ ತುಮಕೂರು ಸುಕ್ಷೇತ್ರ ಶ್ರೀ ಸಿದ್ಧಗಂಗಾಮಠದ ಪೀಠಾಧಿಪತಿಗಳಾದ ತ್ರಿವಿಧ ದಾಸೋಹ ಮೂರ್ತಿ ಶ್ರೀ ಸಿದ್ದಲಿಂಗ ಮಹಾಸ್ವಾಮಿಗಳವರ ದಿವ್ಯಸಾನ್ನಿಧ್ಯದಲ್ಲಿ ಜರುಗಲ್ಲಿದ್ದು, ಶಿವಮೊಗ್ಗದ ಶ್ರೀ ಬಸವಕೇಂದ್ರದ ಪೂಜ್ಯ ಶ್ರೀ ಡಾ.ಬಸವ ಮರುಳಸಿದ್ಧ ಮಹಾಸ್ವಾಮಿಗಳು ಸೇರಿದಂತೆ, ನಾಡಿನ ವಿವಿಧ ಮಠಗಳ ಪೀಠಾಧ್ಯಕ್ಷರುಗಳು ಅಂದಿನ ಧಾರ್ಮಿಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲ್ಲಿದ್ದಾರೆ.
ಅಂದು ದಾಸೋಹ ಮಂದಿರದ ಉದ್ಘಾಟನೆಯನ್ನು ಶಿವಮೊಗ್ಗ ಲೋಕಸಭಾ ಸದಸ್ಯರಾದ ಬಿ.ವೈ.ರಾಘವೇಂದ್ರರವರು ನೆರವೇರಿಸಲ್ಲಿದ್ದಾರೆ. ಸಮಾರಂಭದ ಉದ್ಘಾಟನೆಯನ್ನು ಭದ್ರಾವತಿ ಕ್ಷೇತ್ರದ ಶಾಸಕರಾದ ಬಿ.ಕೆ.ಸಂಗಮೇಶ್ ಮಾಡಲ್ಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಶ್ರೀ ಮಠದ ಗೌರವಾಧ್ಯಕ್ಷರು ಹಾಗೂ ವಿಧಾನಪರಿಷತ್ ಸದಸ್ಯರಾದ ಎಸ್.ರುದ್ರೇಗೌಡರು ವಹಿಸಲ್ಲಿದ್ದಾರೆ. ಶ್ರೀಮಠದ ಮಹಾ ಪೋಷಕರಾದ ಬಿ.ಕೆ.ನಂಜುಂಡಶೆಟ್ರರು ಆಶಯ ನುಡಿಗಳನ್ನಾಡಲ್ಲಿದ್ದಾರೆ. ಶ್ರೀಮಠದ ಸ್ಪರಿಚ್ಯುಯಲ್ ಫೌಂಡೇಶನ್ ಕಾರ್ಯಾಧ್ಯಕ್ಷರು ಹಾಗು ನಿವೃತ್ತ ಐಎಎಸ್ ಅಧಿಕಾರಿಗಳಾದ ಎಸ್.ದಯಶಂಕರ್ ಇವರು ಪ್ರಾಸ್ತಾವಿಕ ಮಾತುಗಳನ್ನಾಡಲ್ಲಿದ್ದಾರೆ. ಶ್ರೀಮಠದ ಪೋಷಕರು ಹಾಗು ಸಮಾಜಸೇವಕರು ಹಾಗು ಜೆಡಿಎಸ್ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ ಎಂ.ಶ್ರೀಕಾಂತ್ ಇವರು ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿರುತ್ತಾರೆ.
(ಸಂ)

By admin

ನಿಮ್ಮದೊಂದು ಉತ್ತರ

error: Content is protected !!