ನಂದಿನಿ ಸಿಹಿ ಉತ್ಸವ : ಶೇ.10 ರಿಯಾಯಿತಿ ದರದಲ್ಲಿ ನಂದಿನಿ ಸಿಹಿ ತಿನಿಸು

ಶಿವಮೊಗ್ಗ, ಆಗಸ್ಟ್ 19:
ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟದ ಮಾರುಕಟ್ಟೆ ವ್ಯಾಪ್ತಿಯ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನಂದಿನಿ ಹಾಲಿನಿಂದ ತಯಾರಿಸಿದ ಉತ್ಪನ್ನಗಳನ್ನು ಗ್ರಾಹಕರಿಗೆ ಅನುಕೂಲವಗುವಂತೆ ಶೇ.10 ರಿಯಾಯಿತಿ ದರಗಳಲ್ಲಿ ಮಾರಾಟ ಮಾಡಲು ‘ನಂದಿನಿ ಸಿಹಿ ಉತ್ಸವ’ ಆಚರಣೆಯನ್ನು ಆ.19 ರಿಂದ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗ ಸಹಕಾರಿ ಹಾಲು ಒಕ್ಕೂಟವು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿದ್ದು ಈ ಜಿಲ್ಲೆಗಳ 1188 ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಪ್ರತಿನಿತ್ಯ 02 ಪಾಳಿಗಳಲ್ಲಿ ಸರಾಸರಿ ಒಟ್ಟು 6.30 ಲಕ್ಷ ಕೆ.ಜಿ. ಹಾಲನ್ನು ಸಂಗ್ರಹಿಸಲಾಗುತ್ತಿದೆ. ಈ ಹಾಲನ್ನು ಅತ್ಯಾಧುನಿಕ ಯಂತ್ರಗಳಲ್ಲಿ ಸಂಸ್ಕರಿಸಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ತಯಾರಿಸಲಾಗುತ್ತಿದೆ. ಒಕ್ಕೂಟದ ವ್ಯಾಪ್ತಿಯಲ್ಲಿರುವ 1520 ಹಾಲಿನ ಡೀಲರ್, 74 ಫ್ರಾಂಚೈಸಿ ಪಾರ್ಲರ್ ಹಾಗೂ 50 ಸ್ವಂತ ಪಾರ್ಲರ್‍ಗಳ ಮೂಲಕ ಪ್ರತಿನಿತ್ಯ 2.30 ಲಕ್ಷ ಲೀಟರ್ ಹಾಲು ಮತ್ತು ಸರಾಸರಿ 32 ಸಾವಿರ ಕೆ.ಜಿ.ಮೊಸರನ್ನು ಮಾರಾಟ ಮಾಡಲಾಗುತ್ತಿದೆ. ಇದರೊಂದಿಗೆ ವಿವಿಧ ಹಾಲಿನ ಉತ್ಪನ್ನಗಳನ್ನು ಹಾಗೂ ನಂದಿನಿ ಸಿಹಿ ತಿನಿಸುಗಳನ್ನು ಕೂಡ ಮಾರಾಟ ಮಾಡಲಾಗುತ್ತಿದೆ.
ಪ್ರತಿ ವರ್ಷದಂತೆ ಈ ವರ್ಷವೂ ಸಹ ಕರ್ನಾಟಕ ಹಾಲು ಮಹಾಮಂಡಳಿ ಹಾಗೂ ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಒಕ್ಕೂಟದ ಸಹಯೋಗದೊಂದಿಗೆ ನಂದಿನಿ ಸಿಹಿ ಉತ್ಪನ್ನಗಳನ್ನು ಹೆಚ್ಚಿನ ಸಂಖ್ಯೆಯ ಜನತೆಗೆ ಪರಿಚಯಿಸಿ, ಮಾರಾಟವನ್ನು ಹೆಚ್ಚಿಸಲು ಈ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಉದ್ಘಾಟನೆ : ಒಕ್ಕೂಟದ ಮುಖ್ಯ ಡೇರಿಯ ಹೈಟೆಕ್ ಪಾರ್ಲರ್‍ನಲ್ಲಿ ಇಂದು ಆಯೋಜಿಸಲಾಗಿದ್ದ ‘ನಂದಿನಿ ಸಿಹಿ ಉತ್ಸವ’ ದ ಉದ್ಘಾಟನೆಯನ್ನು ಒಕ್ಕೂಟದ ಅಧ್ಯಕ್ಷ ಡಿ.ಆನಂದ್ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಒಕ್ಕೂಟದ ನಿರ್ದೇಶಕರಾದ ಹೆಚ್.ಬಿ.ದಿನೇಶ್, ವ್ಯವಸ್ಥಾಪಕ ನಿರ್ದೇಶಕ ಡಾ.ಕೆ.ಎಸ್.ಬಸವರಾಜ, ಒಕ್ಕೂಟದ ಎಲ್ಲಾ ವ್ಯವಸ್ಥಾಪಕರುಗಳು ಹಾಗೂ ಎಲ್ಲಾ ವಿಭಾಗದ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

By admin

ನಿಮ್ಮದೊಂದು ಉತ್ತರ

error: Content is protected !!