ಶಿವಮೊಗ್ಗ: ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಿ ಸಿದಂತೆ ಇಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಗದ್ದಲ, ಗಲಾಟೆ, ಪ್ರತಿಭಟನೆ, ವಾಗ್ವಾದಗಳ ನಡುವೆ ಆಸ್ತಿ ತೆರಿಗೆ ವಿಷಯಕ್ಕೆ ಸಂಬಂಧಿ ಸಿದಂತೆ ಪುನರ್ ಪರಿಶೀಲಿಸಲು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಆಯುಕ್ತರು ತಿಳಿಸುವ ಮೂಲಕ ಗದ್ದಲಕ್ಕೆ ತೆರೆ ಎಳೆಯಲಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಸದಸ್ಯರಾದ ಹೆಚ್.ಸಿ. ಯೋಗೀಶ್, ಬಿ.ಎ. ರಮೇಶ್ ಹೆಗ್ಡೆ, ಯಮುನಾ ರಂಗೇಗೌಡ, ಆರ್.ಸಿ. ನಾಯ್ಕ್ ಮತ್ತು ಜೆಡಿಎಸ್ ಸದಸ್ಯ ನಾಗರಾಜ್ ಕಂಕಾರಿ ಅವರು ಆಯುಕ್ತರು ಮತ್ತು ಆಡಳಿತ ಪಕ್ಷದ ವಿರುದ್ಧ ಮುಗಿಬಿದ್ದರು.
ಎಸ್ಆರ್ ದರದಲ್ಲಿ ತೆರಿಗೆ ನಿಗದಿ ಪಡಿಸಿರುವುದು ಅವೈಜ್ಞಾನಿಕವಾಗಿದೆ. ಈಗಿರುವುದಕ್ಕಿಂತ ಮೂರು ಪಟ್ಟು ಆಸ್ತಿ ತೆರಿಗೆ ಹೆಚ್ಚಳವಾಗಿದೆ. ಅಲ್ಲದೇ ಖಾಲಿ ಜಾಗಕ್ಕೂ ಹೆಚ್ಚು ತೆರಿಗೆ ಕಟ್ಟಬೇಕಾಗುತ್ತದೆ. ಹೂವು ಗಿಡಗಳನ್ನು ಬೆಳೆಸಿಕೊಳ್ಳಲು, ದನಕರುಗಳನ್ನು ಸಾಕಿಕೊಳ್ಳಲು ಹುಲ್ಲಿನ ಬಣವೆ ಹಾಕಲು ಬಿಟ್ಟಿದ್ದ ಜಾಗಗಳಿಗೆಲ್ಲ ತೆರಿಗೆ ಪಾವತಿಸಬೇಕಾದ ಪರಿಸ್ಥಿತಿ ಬಂದಿದೆ. ಇದು ಸರಿಯಲ್ಲ, ಈ ಕೂಡಲೇ ಇದನ್ನು ಪುನರ್ ಪರಿಶೀಲಿಸಬೇಕೆಂದು ಏರುದನಿಯಲ್ಲಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ಗಲಾಟೆ ಗದ್ದಲಗಳು ನಡೆದವು. ಕಾಂಗ್ರೆಸ್ ಸದಸ್ಯರು ಅವೈಜ್ಞಾನಿಕ ತೆರಿಗೆಯನ್ನು ವಿರೋಧಿಸಿ ಪ್ಲೇ ಕಾರ್ಡ್ಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಆಡಳಿತ ಪಕ್ಷದ ಎಸ್.ಎನ್. ಚನ್ನಬಸಪ್ಪ, ಸುರೇಖಾ ಮುರಳೀಧರ್, ವಿಶ್ವನಾಥ್, ಅನಿತಾ ರವಿಶಂಕರ್, ಧೀರರಾಜ್, ಮೇಯರ್ ಸುನಿತಾ ಅಣ್ಣಪ್ಪ ..ಮೊದಲನೇ ಪುಟದಿಂದ
ಸೇರಿದಂತೆ ಹಲವರು ಪ್ರತಿಕ್ರಿಯೆ ನೀಡಲು ಮುಂದಾದಾಗ ಸದಸ್ಯರ ನಡುವೆ ಏರುದನಿಯಲ್ಲಿ ಮಾತಿನ ಚಕಮಕಿ ನಡೆಯಿತು.
ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಆಸ್ತಿ ತೆರಿಗೆ ಹೆಚ್ಚಳ ಮಾಡಿರುವುದನ್ನು ಸಮರ್ಥಿಸಿಕೊಂಡರಲ್ಲದೇ ಇದು ಸರಿ ಹೊಂದದೇ ಇರಬಹುದು. ಆದರೆ, ಮುಂದಿನ ದಿನಗಳಲ್ಲಿ ಇದೇ ಸರಿ ಎಂದು ಒಪ್ಪಿಕೊಳ್ಳ ಬೇಕಾಗುತ್ತದೆ ಎಂದು ಅಭಿಪ್ರಾಯಿಸಿದರು. ಹಾಗೆಯೇ, ಆಯುಕ್ತರು ಪ್ರತಿಕ್ರಿಯಿಸಿ ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸಲು ಸರ್ಕಾರ ಆಸ್ತಿ ತೆರಿಗೆ ಕಾಯ್ದೆಗೆ ಸಂಬಂಧಿಸಿದಂತೆ ನೀಡಿದ ಮಾರ್ಗಸೂಚಿ ಪ್ರಕಾರ ತೆರಿಗೆ ವಿಧಿಸುತ್ತಿರುವುದಾಗಿ ಸ್ಪಷ್ಟಪಡಿಸಿದರು.
ಈ ಉತ್ತರದಿಂದ ತೃಪ್ತರಾಗದ ಪ್ರತಿಪಕ್ಷ ಸದಸ್ಯರು ಇದು ಬಡವರ ವಿರೋಧಿ ಮತ್ತು ಅವೈಜ್ಞಾನಿಕ ಎಂದು ಮತ್ತಷ್ಟು ಆಕ್ರೋಶಗೊಂಡರು. ಒಂದು ಹಂತದಲ್ಲಿ ಯಾರೇನು ಹೇಳುತ್ತಿದ್ದಾರೆ ಎಂಬುದೇ ತಿಳಿಯದಂತಹ ಪರಿಸ್ಥಿತಿ ಉಂಟಾಗಿತ್ತು. ಅರಚಾಟ, ಕೂಗಾಟಗಳು ಸಭೆಯಲ್ಲಿ ತಾರಕಕ್ಕೇರಿದವು. ಆಗ ಸಭೆ ಗೊಂದಲದ ಗೂಡಾಯಿತು. ಇದರ ಮಧ್ಯೆಯೇ ಪ್ರಧಾನಿ ಮೋದಿ ವಿರುದ್ಧವೂ ವಿರೋಧ ಪಕ್ಷದವರು ಘೋಷಣೆ ಕೂಗಿ ದರು. ಮೋದಿ ಎಂದರೆ ಸಾವು ಎಂಬ ವಿರೋಧ ಪಕ್ಷದವರ ಘೋಷಣೆ ಆಡಳಿತ ಪಕ್ಷದವರನ್ನು ಕೆರ ಳಿಸಿತು. ಮೋದಿ ಎಂದರೆ ವಿಶ್ವನಾಯಕ ಎಂದು ಆಡ ಳಿತ ಪಕ್ಷದವರೂ ಕೂಡ ಘೋಷಣೆ ಕೂಗಿದರು. ಮೋದಿ ಎಂಬ ಒಂದು ಘೋಷಣೆಗೆ ೨ ಪಕ್ಷದವರ ಪರ, ವಿರೋಧಗಳು ಪ್ರತಿಧ್ವನಿಸಿ ಸದನದ ದಿಕ್ಕನ್ನೇ ಬದಲಾಯಿಸಿತು.
ಆಸ್ತಿ ತೆರಿಗೆಗೆ ಸಂಬಂಧಿಸಿದಂತೆ ಪುನರ್ ಪರಿಶೀಲನೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಆಯುಕ್ತರು ಹೇಳುವುದರೊಂದಿಗೆ ಕೂಗಾಟಗಳಿಗೆ ಪೂರ್ಣವಿರಾಮ ಬಿದ್ದಿತು.
ಸಭೆಯಲ್ಲಿ ಉಪ ಮೇಯರ್ ಶಂಕರ್ ಗನ್ನಿ ಉಪ ಸ್ಥಿತರಿದ್ದರು. ಮಧ್ಯಾಹ್ನದ ನಂತರವೂ ಸಭೆ ಮುಂದುವರೆದಿತ್ತು.
ಸ್ಥಾಯಿ ಸಮಿತಿ ಸಭೆಗಳಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ನಾಯಕರು ಭಾಗವಹಿಸಬೇಕೆ? ಬೇಡವೇ ಎಂಬ ಬಗ್ಗೆ ಸ್ಪಷ್ಠೀಕರಣ ನೀಡುವಂತೆ ಸದಸ್ಯ ಬಿ.ಎ. ರಮೇಶ್ ಹೆಗ್ಡೆ ಆಯುಕ್ತರನ್ನು ಆಗ್ರಹಿಸಿದರು. ಪಾಲಿಕೆಯ ನಡಾವಳಿಗಳ ಸಮೇತ ಉದಾಹರಣೆ ನೀಡಿದ ಅವರು, ಮುನ್ಸಿಪಾಲಿಟಿ ಕಾಯ್ದೆ ೧೯೭೬ ರ ಅನ್ವಯ ಆಡಳಿತ, ಪ್ರತಿಪಕ್ಷದ ನಾಯಕರೂ ಕೂಡ ಭಾಗವಹಿಸುವಂತಿಲ್ಲ. ಆದರೆ, ಈ ನಿಯಮವನ್ನು ಮೀರಿ ಆಡಳಿತ ಪಕ್ಷದ ಸದದ್ಯರು ಸ್ಥಾಯಿ ಸಮಿತಿ ಸಭೆಗಳಲ್ಲಿ ಭಾಗವಹಿಸುವುದಲ್ಲದೇ ಸಲಹೆ, ಸೂಚನೆಗಳನ್ನು ನೀಡುವುದು ಎಷ್ಟರಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಆಯುಕ್ತರು, ಸ್ಥಾಯಿ ಸಮಿತಿ ಅಧ್ಯಕ್ಷರ ವಿವೇಚನೆಗೆ ಅನುಸಾರವಾಗಿ ಆಡಳಿತ ಹಾಗೂ ಪ್ರತಿಪಕ್ಷದ ನಾಯಕರು ವಿಶೇಷ ಆಹ್ವಾನಿತರಾಗಿ ಭಾಗವಹಿಸಬಹುದೇ ಹೊರತು ನಿರ್ಣಯಗಳ ಪರ ಅಥವಾ ವಿರುದ್ಧ ಮತ ಹಾಕುವ ಅಧಿಕಾರ ಅವರಿಗಿರುವುದಿಲ್ಲ ಎಂದಾಗ, ಮತ್ತೆ ಆಕ್ಷೇಪವೆತ್ತಿದ ರಮೇಶ್ ಹೆಗ್ಡೆ ಸದನಕ್ಕೆ ತಪ್ಪು ಮಾಹಿತಿ ನೀಡಬೇಡಿ. ಕಾಯ್ದೆಯಲ್ಲೇ ಅವಕಾಶವಿಲ್ಲ ಎಂದ ಮೇಲೆ ವಿಶೇಷ ಆಹ್ವಾನಿತರನ್ನಾಗಿ ಆಹ್ವಾನಿಸುವ ಪ್ರಯತ್ನವೇ ಉದ್ಭವಿಸುವುದಿಲ್ಲ. ಈ ಕುರಿತು ಸಭೆಗೆ ತಪ್ಪು ಮಾಹಿತಿ ನೀಡಿದರೆ ಆಯುಕ್ತರ ವಿರುದ್ಧವೇ ತಾವು ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಸಿದರು.